ಸೋಮವಾರ, ಏಪ್ರಿಲ್ 19, 2021
32 °C

ಕಾಶ್ಮೀರದಲ್ಲಿ ಮೋದಿ ನೇತೃತ್ವದ ಭಾರತ ಸರ್ಕಾರದ ಅಭಿವೃದ್ಧಿ ಕಾರ್ಯ: ಸೌದಿ ಮೆಚ್ಚುಗೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಜೆಡ್ಡಾ (ಸೌದಿ ಅರೇಬಿಯಾ): ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸೌದಿ ಅರೇಬಿಯಾದ ದಿನ ಪತ್ರಿಕೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಇಲ್ಲಿನ ಸೌದಿ ಗೆಜೆಟ್‌ ಪತ್ರಿಕೆಯು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ಧತಿ ಬಳಿಕ ನರೇಂದ್ರ ಮೋದಿ ಸರ್ಕಾರವು ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ರೂಪಿಸಿದೆ ಎಂದು ವರದಿ ಮಾಡಿದೆ. ಮೋದಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕಾಶ್ಮೀರದ ಯುವಕರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ದೇಶದ ಪ್ರಗತಿಯ ಭಾಗವಾಗುವ ಆಕಾಂಕ್ಷೆ ಹೊಂದಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2019ರ ಆಗಸ್ಟ್‌ 5ರ ನಂತರ ಶಸ್ತ್ರಾಸ್ತ್ರ ತ್ಯಜಿಸಿರುವ ಸ್ಥಳಿಯ ಉಗ್ರರಿಗೂ ಪುನರ್ವಸತಿ ಕಲ್ಪಿಸಲಾಗಿದ್ದು, ಮುಖ್ಯವಾಹಿನಿಗೆ ಕರೆತರಲಾಗಿದೆ ಎಂದು ಈ ಇಂಗ್ಲೀಷ್‌ ಪತ್ರಿಕೆಯು ತಿಳಿಸಿದೆ. ಆ ಮೂಲಕ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡರೆ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಯಾರನ್ನೂ ಬಿಡುವುದಿಲ್ಲ ಎಂದು ಈ ಹಿಂದೆ ಹೇಳುತ್ತಿದ್ದ ಅಲ್ಲಿನ ಸ್ಥಳೀಯ ನಾಯಕರ ಅಭಿಪ್ರಾಯ ತಪ್ಪು ಎಂಬುದು ಸಾಬೀತಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ಅಷ್ಟಲ್ಲದೆ, ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರವು ರೂಪಿಸಿರುವ ವಿದ್ಯಾರ್ಥಿವೇತನ ಯೋಜನೆಗಳು ಅಲ್ಲಿನ ಬಡ ವಿದ್ಯಾರ್ಥಿಗಳಿಗೆ ನೆರವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ್ದಾರೆ. ದೇಶದಾದ್ಯಂತ ಮತ್ತು ವಿದೇಶಗಳಲ್ಲಿನ ದೊಡ್ಡದೊಡ್ಡ ಕಾರ್ಪೊರೇಟ್‌ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿದ್ದಾರೆ. ಈ ಪ್ರದೇಶವನ್ನು ಅನಿಶ್ಚಿತತೆಯಿಂದ ಹೊರಗೆಳೆಯುವ ತನ್ನ ನಿರ್ಧಾರದ ಬಗ್ಗೆ ಸರ್ಕಾರವು ದೃಢತೆಯನ್ನು ಹೊಂದಿತ್ತುʼ ಎಂದು ಶ್ಲಾಘಿಸಿದೆ.

ಕಣಿವೆ ರಾಜ್ಯದಲ್ಲಿ ಕಲ್ಲು ತೂರಾಟ ನಡೆಸುತ್ತಿದ್ದ ಯುವಕರ ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳು ಲಭಿಸಿವೆ. ಕಳೆದ ಒಂದು ಮತ್ತು ಒಂದೂವರೆ ವರ್ಷದಲ್ಲಿ ಸಾಕಷ್ಟು ಯುವಕರು ಯೋಗ್ಯ ಜೀವನ ನಡೆಸುತ್ತಿದ್ದಾರೆ. ಬಹುತೇಕ ನಿಷ್ಕ್ರಿಯವಾಗಿದ್ದ ನೇಮಕಾತಿ ಏಜೆನ್ಸಿಗಳು ನಿರುದ್ಯೋಗಿ ವಿದ್ಯಾವಂತ ಯುವಕರಿಗಾಗಿ ಕೆಲಸ ನೀಡಲು ಜಾಹೀರಾತು ನೀಡಿವೆ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿವೆ ಎಂದೂ ತಿಳಿಸಿದೆ.

ಮುಂದುವರಿದು, ಕೇಂದ್ರ ಸರ್ಕಾರದ ಉಪಕ್ರಮಗಳು, ಕಳೆದ ಮೂರು ದಶಕಗಳಿಂದ ದಾರಿತಪ್ಪಿದ್ದ ಕಾಶ್ಮೀರದ ಯುವ ಜನಗೆ ಹೊಸ ಬದುಕು ಕಟ್ಟಿಕೊಟ್ಟಿವೆ ಎಂದು ಅಭಿಪ್ರಾಯಪಟ್ಟಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು