ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಧರ್ಮಗಳನ್ನು ಗೌರವಿಸಿ: ಪ್ರವಾದಿ ಮೊಹಮ್ಮದರ ಅವಹೇಳನ ಖಂಡಿಸಿದ ಸೌದಿ ಅರೇಬಿಯಾ

Last Updated 6 ಜೂನ್ 2022, 6:37 IST
ಅಕ್ಷರ ಗಾತ್ರ

ದುಬೈ: ಪ್ರವಾದಿ ಮೊಹಮ್ಮದರ ವಿರುದ್ಧ ಬಿಜೆಪಿ ನಾಯಕಿ ನೂಪುರ್‌ ಶರ್ಮಾ ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆಯನ್ನು ಸೌದಿ ಅರೇಬಿಯಾ ಖಂಡಿಸಿದೆ. ಕತಾರ್, ಇರಾನ್ ಹಾಗೂ ಕುವೈತ್ ಈಗಾಗಲೇ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದವು.

ಬಿಜೆಪಿ ನಾಯಕಿ ನೀಡಿರುವ ಹೇಳಿಕೆಯು ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದೆ. ಎಲ್ಲ ಧರ್ಮಗಳನ್ನು ಮತ್ತು ನಂಬಿಕೆಯನ್ನು ಗೌರವಿಸಿ ಎಂದು ಸೌದಿ ಅರೇಬಿಯಾ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇಸ್ಲಾಮಿಕ್ ಧರ್ಮದ ವಿರುದ್ಧದ ಪೂರ್ವಗ್ರಹವನ್ನು ತಿರಸ್ಕರಿಸುತ್ತೇವೆ. ಅದೇ ರೀತಿ ಯಾವುದೇ ಧರ್ಮದ ವಿರುದ್ಧದ ಪೂರ್ವಗ್ರಹವನ್ನೂ ನಾವು ಒಪ್ಪುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಆಕ್ಷೇಪಾರ್ಹ ಹೇಳಿಕೆ ನೀಡಿದವರ ವಿರುದ್ಧ ಬಿಜೆಪಿ ಕೈಗೊಂಡಿರುವ ಕ್ರಮಕ್ಕೆ ಸೌದಿ ಅರೇಬಿಯಾ ಮೆಚ್ಚುಗೆಯನ್ನೂ ಸೂಚಿಸಿದೆ.

ಪ್ರವಾದಿ ಮೊಹಮ್ಮದರ ವಿರುದ್ಧದ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕತಾರ್, ಇರಾನ್ ಹಾಗೂ ಕುವೈತ್ ದೇಶಗಳು ಭಾನುವಾರ ಆಯಾ ದೇಶಗಳಲ್ಲಿರುವ ಭಾರತೀಯ ರಾಯಭಾರಿಗಳಿಗೆ ಸಮನ್ಸ್ ನೀಡಿದ್ದವು.

ಇದರ ಬೆನ್ನಲ್ಲೇ, ಭಾರತವು ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತದೆ ಎಂದು ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿತ್ತು.

ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ದೃಶ್ಯ ಮಾಧ್ಯಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ನೀಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಬಿಜೆಪಿ, ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಜತೆಗೆ, ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನೂ ಪಕ್ಷದಿಂದ ಉಚ್ಚಾಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT