ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಾಕ್‌ಡೌನ್ ತೆರವು: ಇಂಗ್ಲೆಂಡ್‌ನಲ್ಲಿ ಶಾಲೆ, ಕಾಲೇಜುಗಳು ಪುನರಾರಂಭ

Last Updated 1 ಸೆಪ್ಟೆಂಬರ್ 2020, 3:25 IST
ಅಕ್ಷರ ಗಾತ್ರ

ಲಂಡನ್‌: ಕೊರೊನಾ ವೈರಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಚ್‌ನಿಂದ ಬಾಗಿಲು ಮುಚ್ಚಿರುವ ಶಾಲೆ ಮತ್ತು ಕಾಲೇಜುಗಳು ಮಂಗಳವಾರದಿಂದ ಪುನರಾರಂಭಗೊಳ್ಳಲಿವೆ. ಇಂಗ್ಲೆಂಡ್‌ನ ಸಾವಿರಾರು ವಿದ್ಯಾರ್ಥಿಗಳು ತರಗತಿಗಳಿಗೆ ಮರಳಲು ಕಾತುರರಾಗಿದ್ದಾರೆ.

ಅಂತರ ಕಾಯ್ದುಕೊಳ್ಳುವುದು ಸೇರಿದಂತೆ 'ನಿಯಂತ್ರಿತ ವ್ಯವಸ್ಥೆಯೊಂದಿಗೆ' ವಿದ್ಯಾ ಸಂಸ್ಥೆಗಳನ್ನು ತೆರೆಯಲಾಗುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಸುರಕ್ಷತೆಯ ದೃಷ್ಟಿಯಿಂದ ನೇರ ಸಂಪರ್ಕಗಳನ್ನು ಆದಷ್ಟು ಕಡಿಮೆ ಮಾಡುವ ವ್ಯವಸ್ಥೆ ರೂಪಿಸಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.

ಹೆಚ್ಚು ಜನರು ಒಟ್ಟಿಗೆ ಸೇರುವ ಪ್ರದೇಶಗಳು ಹಾಗೂ ಶಾಲೆ–ಕಾಲೇಜುಗಳ ಕಾರಿಡಾರ್‌ಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ ಮಾಡಲಾಗಿದೆ. 'ಬಹಳಷ್ಟು ಮಕ್ಕಳಿಗೆ ಶಾಲೆಯ ಹೊಸ ವರ್ಷದ ಆರಂಭವಾಗುತ್ತಿದೆ. ವಿದ್ಯಾರ್ಥಿಗಳು ಮತ್ತೆ ಶಾಲೆಗಳಿಗೆ ಮರಳಲು ಸಜ್ಜಾಗಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣಾವಧಿಯ ತರಗತಿಗಳು ಆರಂಭಗೊಳ್ಳುತ್ತಿವೆ. ಶಿಕ್ಷಣದ ಜೊತೆಗೆ ಮಕ್ಕಳ ಬೆಳವಣಿಗೆಗೂ ಇದು ಮುಖ್ಯವಾದುದು' ಎಂದು ಇಂಗ್ಲೆಂಡ್‌ನ ಶಿಕ್ಷಣ ಕಾರ್ಯದರ್ಶಿ ಗೆವಿನ್‌ ವಿಲಿಯಮ್ಸನ್‌ ಹೇಳಿದ್ದಾರೆ.

ಪಾಲಕರಿಗೆ ಹಾಗೂ ಶಾಲೆಗಳಿಗೂ ಇದು ಸುಲಭದ್ದಲ್ಲ, ಆದರೆ ಎಲ್ಲರ ಬೆಂಬಲ, ಶಿಕ್ಷಕರು ಮತ್ತು ಶಾಲೆ ಸಿಬ್ಬಂದಿಯ ಶ್ರಮದಿಂದ ಮತ್ತೆ ವಿದ್ಯಾರ್ಥಿಗಳು ಒಟ್ಟಾಗಿ ತರಗತಿಗಳಲ್ಲಿ ಪಾಠ ಕಲಿಯಲಿದ್ದಾರೆ ಎಂದಿದ್ದಾರೆ.

ದೇಶದಾದ್ಯಂತ ಶಾಲೆ ಆರಂಭದ ದಿನಾಂಕಗಳಲ್ಲಿ ಬದಲಾವಣೆ ಇದ್ದು, ಮಂಗಳವಾರದಿಂದ ಶೇ 40ರಷ್ಟು ಶಾಲೆಗಳು ಪುನರಾರಂಭಗೊಳ್ಳಲಿವೆ. ಸ್ಕಾಟ್‌ಲ್ಯಾಂಡ್‌, ವೇಲ್ಸ್‌ ಹಾಗೂ ನಾರ್ದನ್‌ ಐರ್‌ಲ್ಯಾಂಡ್‌ಗಳಲ್ಲಿ ಶಾಲೆ ಆರಂಭವಾಗುವ ದಿನಗಳಲ್ಲಿ ಬದಲಾವಣೆ ಇದೆ ಹಾಗೂ ಹಲವು ಶಾಲೆಗಳು ಈಗಾಗಲೇ ಕಾರ್ಯಾಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT