ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ: ಅಮೆರಿಕದ ಏಳು ಸಂಸದರಿಂದ ವಿದೇಶಾಂಗ ಕಾರ್ಯದರ್ಶಿಗೆ ಪತ್ರ

Last Updated 25 ಡಿಸೆಂಬರ್ 2020, 6:55 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಸೇರಿದಂತೆ ಅಮೆರಿಕದ ಏಳು ಪ್ರಭಾವಿ ಸಂಸದರ ತಂಡವೊಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರಿಗೆಪತ್ರ ಬರೆದು, ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ವಿಚಾರವನ್ನು ತಮ್ಮ ಭಾರತೀಯ ಸಹವರ್ತಿಯೊಂದಿಗೆ ಮಾತನಾಡುವಂತೆ ಒತ್ತಾಯಿಸಿದ್ದಾರೆ.

ರೈತರ ಪ್ರತಿಭಟನೆ ವಿಚಾರವಾಗಿ ವಿದೇಶಿ ನಾಯಕರು ಮತ್ತು ರಾಜಕಾರಣಿಗಳು ನೀಡುವ ಹೇಳಿಕೆಯನ್ನು ಭಾರತವು ವಿರೋಧಿಸಿದ್ದು, ಇಂತಹ ಹೇಳಿಕೆಗಳು 'ಅನಪೇಕ್ಷಿತ' ಮತ್ತು 'ಅನಗತ್ಯ' ಎಂದಿದೆ. ಈ ವಿಚಾರವು ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದೆ ಎಂದು ಪ್ರತಿಪಾದಿಸಿದೆ.

'ಭಾರತದ ರೈತರ ಪ್ರತಿಭಟನೆಗೆ ಸಂಬಂಧಿಸಿದ ಕೆಲವರು ಹೇಳಿಕೆ ನೀಡುವುದನ್ನು ನಾವು ನೋಡಿದ್ದೇವೆ. ವಿಶೇಷವಾಗಿ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರಗಳಿಗೆ ಇಂತಹ ಹೇಳಿಕೆಗಳು ಅನಗತ್ಯ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.

ಇದು ನಿರ್ದಿಷ್ಟವಾಗಿ ಪಂಜಾಬ್‌‌ನ ಸಿಖ್ ಅಮೆರಿಕನ್ನರಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಆದರೂ ಇದು ಇತರ ರಾಜ್ಯಗಳ ಭಾರತೀಯ ಅಮೆರಿಕನ್ನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಸಂಸದರು ಡಿ. 23 ರಂದು ಪಾಂಪಿಯೊಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅನೇಕ ಭಾರತೀಯ ಅಮೆರಿಕನ್ನರು ಪಂಜಾ‌ಬ್‌ನಲ್ಲಿ ಕುಟುಂಬ ಸದಸ್ಯರನ್ನು ಮತ್ತು ಪೂರ್ವಜರ ಭೂಮಿಯನ್ನು ಹೊಂದಿರುವವರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಭಾರತದಲ್ಲಿರುವ ತಮ್ಮ ಕುಟುಂಬಗಳ ಮೇಲೆ ಕಾಳಜಿ ಹೊಂದಿದ್ದಾರೆ. ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿದೇಶದಲ್ಲಿ ರಾಜಕೀಯ ವಾಕ್ ಸ್ವಾತಂತ್ರ್ಯದ ಬಗ್ಗೆ ಅಮೆರಿಕದ ಬದ್ಧತೆಯನ್ನು ಬಲಪಡಿಸಲು ನಿಮ್ಮ ಭಾರತೀಯ ಸಹವರ್ತಿಯನ್ನು ಸಂಪರ್ಕಿಸಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ' ಎಂದು ಹೇಳಿದ್ದಾರೆ.

ರಾಜಕೀಯ ಪ್ರತಿಭಟನೆಗಳೊಂದಿಗೆ ಪರಿಚಿತವಾಗಿರುವ ಅಮೆರಿಕವು, ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಲಹೆಗಳನ್ನು ನೀಡಬಹುದು ಎಂದು ಸಂಸದರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ರಾಷ್ಟ್ರವೊಂದರ ಸಂಸದರಾಗಿ, ಅಸ್ತಿತ್ವದಲ್ಲಿರುವ ಕಾನೂನಿಗೆ ಅನುಸಾರವಾಗಿ ರಾಷ್ಟ್ರೀಯ ನೀತಿಯನ್ನು ನಿರ್ಧರಿಸುವ ಭಾರತ ಸರ್ಕಾರದ ಹಕ್ಕನ್ನು ನಾವು ಗೌರವಿಸುತ್ತೇವೆ. ಹಲವಾರು ಭಾರತೀಯ ರೈತರು ತಮ್ಮ ಆರ್ಥಿಕ ಭದ್ರತೆಯ ಮೇಲಿನ ಆಕ್ರಮಣವೆಂದು ನೋಡುವ ಕೃಷಿ ಕಾನೂನುಗಳ ವಿರುದ್ಧ ಸದ್ಯ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಭಾರತ ಮತ್ತು ವಿದೇಶದಲ್ಲಿರುವವರ ಹಕ್ಕುಗಳನ್ನು ನಾವು ಅಂಗೀಕರಿಸಿದ್ದೇವೆ ಎಂದು ಸಂಸದರು ತಿಳಿಸಿದ್ದಾರೆ.

ಜಯಪಾಲ್‌ ಅವರೊಂದಿಗೆ ಪತ್ರದಲ್ಲಿ ಸಂಸದರಾದ ಡೊನಾಲ್ಡ್ ನ್ಯಾಕ್ರೋಸ್, ಬ್ರೆಂಡನ್ ಎಫ್ ಬೊಯ್ಲೆ, ಬ್ರಿಯಾನ್ ಫಿಟ್ಜ್‌ಪ್ಯಾಟ್ರಿಕ್, ಮೇರಿ ಗೇ ಸ್ಕ್ಯಾನ್ಲಾನ್, ಡೆಬ್ಬಿ ಡಿಂಗಲ್ ಮತ್ತು ಡೇವಿಡ್ ಟ್ರೋನ್ ಸಹಿ ಹಾಕಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪಂಜಾಬ್, ಹರಿಯಾಣ ಮತ್ತು ಇತರೆ ಹಲವು ರಾಜ್ಯಗಳ ಸಾವಿರಾರು ರೈತರು ನವೆಂಬರ್ 26 ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಇಂದಿಗೆ 30ನೇ ದಿನಕ್ಕೆ ಕಾಲಿಟ್ಟಿದೆ.

ಈ ಕಾನೂನುಗಳು ರೈತ ವಿರೋಧಿಯಾಗಿವೆ. ಹೊಸದಾಗಿ ಜಾರಿಗೆ ತಂದಿರುವ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತುಹಾಕಲು ದಾರಿ ಮಾಡಿಕೊಡುತ್ತವೆ ಮತ್ತು ರೈತರನ್ನು ಕಾರ್ಪೊರೇಟ್ ಸಂಸ್ಥೆಗಳ ಸುಪರ್ದಿಗೆ ಬಿಡುತ್ತವೆ ಎಂದು ದೂರಿದ್ದಾರೆ.

ಹೊಸ ಕಾನೂನುಗಳು ರೈತರಿಗೆ ಉತ್ತಮ ಅವಕಾಶಗಳನ್ನು ನೀಡುತ್ತವೆ ಮತ್ತು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಗೆ ದಾರಿಮಾಡಿಕೊಡುತ್ತವೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಈ ಮಧ್ಯೆ, ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರದ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆದರೂ ಪ್ರಯೋಜನವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT