ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಕ್ಕಳನ್ನು ಕೊಲ್ಲಬೇಡಿ, ನನಗೇ ಗುಂಡಿಕ್ಕಿ': ಮಂಡಿಯೂರಿ ಕ್ರೈಸ್ತ ಸನ್ಯಾಸಿನಿ ಅಳಲು

'ಮಕ್ಕಳನ್ನು ಕೊಲ್ಲಬೇಡಿ, ನನಗೇ ಗುಂಡಿಕ್ಕಿ'
Last Updated 9 ಮಾರ್ಚ್ 2021, 19:13 IST
ಅಕ್ಷರ ಗಾತ್ರ

ಯಾಂಗೂನ್, ಮ್ಯಾನ್ಮಾರ್: ‘ದಯವಿಟ್ಟು ಮಕ್ಕಳಿಗೆ ಏನೂ ಮಾಡಬೇಡಿ. ಬೇಕಿದ್ದರೆ ನನ್ನನ್ನೇ ಕೊಂದುಬಿಡಿ’ ಎಂದು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಎದುರು, ಮಂಡಿಯೂರಿ ಕುಳಿತ ಕ್ರೈಸ್ತ ಸನ್ಯಾಸಿನಿಯೊಬ್ಬರು ಸೇನಾ ಆಡಳಿತಕ್ಕೆ ಒಳಪಟ್ಟಿರುವ ಇಲ್ಲಿ ಬೇಡಿಕೊಂಡಿದ್ದಾರೆ.

ಶ್ವೇತ ವಸ್ತ್ರಧಾರಿಯಾಗಿದ್ದ ಸನ್ಯಾಸಿನಿ, ಎರಡೂ ಕೈಜೋಡಿಸಿ ನ್ಯೂ ಜುಂಟಾ ಭದ್ರತಾ ಸಿಬ್ಬಂದಿ ಎದುರು ಕುಳಿತು ಕೈಮುಗಿಯುತ್ತಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸನ್ಯಾಸಿನಿಯ ನಿಲುವಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಮೈಕ್ತಿಯಾನಾ ನಗರದಲ್ಲಿ ಘಟನೆ ನಡೆದಿದೆ. ಜನನಾಯಕಿ ಸೂಕಿ ಬಂಧನ, ಸೇನಾದಂಗೆಯ ನಂತರ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಆಗ್ರಹಪಡಿಸಿ ‌ಇಲ್ಲಿ, ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಜನರು ಬೀದಿಗಿಳಿದಿದ್ದಾರೆ. ಜಲಫಿರಂಗಿ, ರಬ್ಬರ್ ಬುಲೆಟ್‌ ಪ್ರಯೋಗಿಸಿದರೂ ಅಂಜದೇ ಭದ್ರತಾ ಸಿಬ್ಬಂದಿಗೆ ಪ್ರತಿರೋಧ ತೋರುತ್ತಿದ್ದಾರೆ.

ಕಚಿನ್‌ ರಾಜ್ಯದ ರಾಜಧಾನಿಯೂ ಆಗಿರುವ ಮೈಕ್ತಿಯಾನಾ ನಗರದಲ್ಲೂ ಪ್ರತಿಭಟನೆ ತೀವ್ರಗೊಂಡಿದೆ. ಭದ್ರತಾ ಸಿಬ್ಬಂದಿಯು ಸನ್ಯಾಸಿನಿ ಆ್ಯನ್‌ ರೋಸ್ ನು ತ್ವಾಂಗ್ ಮತ್ತು ಇತರೆ ಇಬ್ಬರನ್ನು ಬೆನ್ನಟ್ಟಿದಾಗ, ಪ್ರತಿಯಾಗಿ ಸನ್ಯಾಸಿನಿಯು ಹೀಗೇ ಮನವಿ ಮಾಡಿದ್ದಾರೆ.

‘ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಬೆನ್ನಟ್ಟಿದ್ದರು. ನನಗೆ, ಮಕ್ಕಳದೇ ಚಿಂತೆಯಾಗಿತ್ತು. ನಾನು ಮಂಡಿಯೂರಿ ಬೇಡುತ್ತಿದ್ದರೆ, ಸಿಬ್ಬಂದಿ ನನ್ನ ಹಿಂಭಾಗ ಇದ್ದ ಪ್ರತಿಭಟನಾಕಾರರತ್ತ ಗುಂಡು ಹಾರಿಸುತ್ತಿದ್ದರು. ಮಕ್ಕಳು ನನ್ನ ಎದುರೇ ಜೀವರಕ್ಷಣೆಗಾಗಿ ಓಡುತ್ತಿದ್ದರು. ಅದನ್ನು ನೋಡಿ ನನಗೆ ಸಹಿಸಲಾಗಲಿಲ್ಲ’ ಎಂದು ಅವರು ಎಎಫ್‌ಪಿಗೆ ಪ್ರತಿಕ್ರಿಯಿಸಿದ್ದಾರೆ.

‘ನಾನು ಬೇಡುವಾಗಲೇ ವ್ಯಕ್ತಿಯೊಬ್ಬ ಗುಂಡಿಗೆ ಬಲಿಯಾದ. ಆ ಕ್ಷಣ ನನಗೆ ಜಗತ್ತೇ ಕುಸಿಯುತ್ತಿರುವಂತೆ ಭಾಸವಾಯಿತು. ಆ ಬೆಳವಣಿಗೆ ನನಗೆ ತುಂಬ ಬೇಸರ ಉಂಟು ಮಾಡಿತು. ಅದಕ್ಕಾಗಿಯೇ, ಮಕ್ಕಳ ಬದಲಿಗೆ ನನ್ನನ್ನು ಕೊಲ್ಲಿ ಎಂದು ಬೇಡಿಕೊಂಡೆ’ ಎಂದು ಹೇಳಿದ್ದಾರೆ.

ಈ ಮಧ್ಯೆ, ಸೋಮವಾರ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಸಿಬ್ಬಂದಿ ಹಾರಿಸಿದ ಗುಂಡಿನಿಂದಾಗಿ ಇಬ್ಬರು ಸತ್ತಿದ್ದಾರೆ ಎಂಬುದನ್ನು ಸ್ಥಳೀಯ ರಕ್ಷಣಾ ತಂಡವು ದೃಢಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT