ಭಾನುವಾರ, ಸೆಪ್ಟೆಂಬರ್ 26, 2021
29 °C

ಅಫ್ಗಾನ್‌ನಲ್ಲಿ ಸಿಲುಕಿರುವ ಅಲ್ಪಸಂಖ್ಯಾತರಿಗೆ ಕಾಬೂಲ್ ಗುರುದ್ವಾರದಲ್ಲಿ ಆಶ್ರಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಫ್ಗಾನಿಸ್ತಾನವನ್ನು ತಾಲಿಬಾನ್‌ ಸಂಘಟನೆ ಹಿಡಿತಕ್ಕೆ ಪಡೆಯುತ್ತಿದ್ದಂತೆ ಆ ದೇಶದಲ್ಲಿ‌ ಸಿಲುಕಿರುವ ಅಲ್ಪಸಂಖ್ಯಾತರು ಕಾಬೂಲ್‌ನಲ್ಲಿರುವ ಕರ್ತೆ ಪರ್ವಾನ್‌ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದಾರೆ. ಭಾರತ ಸರ್ಕಾರದ ಮಾಹಿತಿ ಪ್ರಕಾರ, ತಾಲಿಬಾನ್‌ ನಾಯಕರು ಗುರುದ್ವಾರಕ್ಕೆ ಭೇಟಿ ನೀಡಿದ್ದು, ಅವರಿಗೆ ರಕ್ಷಣೆಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ʼನಾವು ಕಾಬೂಲ್‌ನ ಗುರುದ್ವಾರ ಸಮಿತಿ ಮುಖ್ಯಸ್ಥರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಇತ್ತೀಚಿನ ಬೆಳವಣಿಗೆಗಳ ಬಳಿಕ 320ಕ್ಕೂ ಹೆಚ್ಚು ಅಲ್ಪಸಂಖ್ಯಾತರು (50 ಹಿಂದೂಗಳು ಮತ್ತು 270ಕ್ಕೂ ಹೆಚ್ಚು ಸಿಖ್ಖರು)  ಕರ್ತೆ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದಾರೆ. ತಾಲಿಬಾನ್‌ ನಾಯಕರು ಅವರನ್ನು ಭೇಟಿಯಾಗಿದ್ದಾರೆ ಮತ್ತು ಸುರಕ್ಷತೆಯ ಭರವಸೆಯನ್ನು ನೀಡಿದ್ದಾರೆ. ಅಫ್ಗಾನ್‌ನಲ್ಲಿ ರಾಜಕೀಯ ಮತ್ತು ಮಿಲಿಟರಿ ಬದಲಾವಣೆಗಳು ನಡೆಯುತ್ತಿದ್ದರೂ, ನಾವು ಹಿಂದೂ ಮತ್ತು ಸಿಖ್‌ ಸಮುದಾಯದವರನ್ನು ಸುರಕ್ಷಿತವಾಗಿ ಕರೆತರುವ ವಿಶ್ವಾಸದಲ್ಲಿದ್ದೇವೆʼ ಎಂದು ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ.

ಅಕಾಲಿ ದಳ ವಕ್ತಾರ ಮನಿಂದರ್‌ ಸಿಂಗ್‌ ಸಿರ್ಸಾ, ತಾಲಿಬಾನ್‌ನ ಸ್ಥಳೀಯ ನಾಯಕರು ಗುರುದ್ವಾರದ ಮುಖ್ಯಸ್ಥರನ್ನು ಭೇಟಿ ಮಾಡಿದ್ದು, ಅವರ (ಗುರುದ್ವಾರದಲ್ಲಿರುವವರ) ಭದ್ರತೆಯ ಜವಾಬ್ದಾರಿ ತಾಲಿಬಾನ್‌ನದ್ದಾಗಿದೆ ಎಂದು ಭರವಸೆ ನೀಡಿರುವುದಾಗಿ ಹೇಳಿದ್ದಾರೆ. 

ಯುದ್ಧ ಪೀಡಿತ ದೇಶದಲ್ಲಿರುವ ಸಿಖ್ಖರು ಮತ್ತು ಹಿಂದೂಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಸಲುವಾಗಿ ವಿದೇಶಾಂಗ ಸಚಿವಾಲಯ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.

ಇವನ್ನೂ ಓದಿ    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು