ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಕುರಿತು ನೆಹರೂ ಚಿಂತನೆಗಳನ್ನು ಹೊಗಳಿದ ಸಿಂಗಪುರ ಪ್ರಧಾನಿ

Last Updated 17 ಫೆಬ್ರುವರಿ 2022, 9:06 IST
ಅಕ್ಷರ ಗಾತ್ರ

ಸಿಂಗಾಪುರ: ಸಿಂಗಪುರ ಪ್ರಧಾನಿ ಲೀ ಸೀನ್‌ ಲೂಂಗ್‌ ಅವರು 'ಪ್ರಜಾಪ್ರಭುತ್ವವು ರಾಷ್ಟ್ರದಲ್ಲಿ ಹೇಗೆ ಕೆಲಸ ಮಾಡಬೇಕು?' ಎಂಬ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡುತ್ತ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರನ್ನು ಉದಾಹರಣೆಯಾಗಿ ನೀಡಿದ್ದಾರೆ.

ಪ್ರತಿಪಕ್ಷ 'ವರ್ಕರ್ಸ್‌ ಪಾರ್ಟಿ'ಯ ಮಾಜಿ ಸಂಸದೆ ರಯೀಸ್‌ ಖಾನ್‌ ವಿರುದ್ಧದ ಸಂಸತ್ತಿನಲ್ಲಿ ಸುಳ್ಳು ಹೇಳಿದವಿಚಾರವಾಗಿ 'ವಿಶೇಷಾಧಿಕಾರ ಸಮಿತಿ' ಸಿದ್ಧಪಡಿಸಿದ ವರದಿ ಕುರಿತಾದ ಚರ್ಚೆಯಲ್ಲಿಲೀ ಸೀನ್‌ ಲೂಂಗಾ ಅವರು ಮಾತನಾಡಿದ್ದಾರೆ. ನೆಹರೂ ಹಾಗೂ ಇಸ್ರೇಲ್‌ ಸ್ಥಾಪಕ ಮತ್ತು ಮೊದಲ ಪ್ರಧಾನಿ ಡೇವಿಡ್‌ ಬೆನ್‌-ಗುರಿಯನ್ ಅವರನ್ನು ಉಲ್ಲೇಖಿಸಿ, ಇಸ್ರೇಲ್‌ ಮತ್ತು ಭಾರತದ ಈಗಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಹೇಳಿದ್ದಾರೆ.

'ಉನ್ನತ ಚಿಂತನೆಗಳು ಮತ್ತು ಶ್ರೇಷ್ಠ ಮೌಲ್ಯಗಳ ಆಧಾರದಲ್ಲಿ ಹೆಚ್ಚಿನ ರಾಷ್ಟ್ರಗಳು ನಿರ್ಮಾಣಗೊಂಡಿರುತ್ತವೆ. ಆದರೆ ಸಮಯ ಸರಿದಂತೆ ಹಾಗೆಯೇ ಉಳಿಯುವುದಿಲ್ಲ. ದಶಕಗಳು ಮತ್ತು ತಲೆಮಾರುಗಳು ಕಳೆದಂತೆ ಸ್ಥಾಪಕ ನಾಯಕರನ್ನು ಮತ್ತು ಆರಂಭದ ತಲೆಮಾರನ್ನು ಮೀರಿ ವಿಚಾರಗಳು ಬದಲಾಗುತ್ತವೆ' ಎಂದಿದ್ದಾರೆ.

'ಉತ್ಸಾಹದ ತೀವ್ರತೆಯಲ್ಲಿ ಹೋರಾಟಗಳು ಮೊಳಕೆಯೊಡೆಯುತ್ತವೆ. ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಜಯಸಾಧಿಸಿದ ನಾಯಕರು, ಸಾಮಾನ್ಯವಾಗಿ ಮಹಾನ್‌ ಧೈರ್ಯ, ಬಹುಸಂಸ್ಕೃತಿ ಮತ್ತು ಅಪ‍ರಿಮಿತ ಸಾಮರ್ಥ್ಯಗಳನ್ನು ಹೊಂದಿದ್ದ ಅಸಾಧಾರಣ ವ್ಯಕ್ತಿಗಳಾಗಿದ್ದರು. ಅವರು ಕಠಿಣ ಪರಿಸ್ಥಿತಿಯನ್ನು ಎದುರಿಸಿದರು. ರಾಷ್ಟ್ರ ನಾಯಕರಾಗಿ ಹೊರಹೊಮ್ಮಿದರು. ಡೇವಿಡ್‌ ಬೆನ್‌-ಗುರಿಯನ್‌, ಜವಾಹರಲಾಲ್‌ ನೆಹರೂ ಅಂತಹ ನಾಯಕರು. ನಮ್ಮ ರಾಷ್ಟ್ರದಲ್ಲೂ ಅಂತಹ ನಾಯಕರು ಇದ್ದಾರೆ’ ಎಂದು ಲೀ ಸೀನ್‌ ಲುಂಗಾ ತಿಳಿಸಿದ್ದಾರೆ.

'ಹೊಸ ರಾಷ್ಟ್ರದ ನಿರ್ಮಾಣದ ವಿಚಾರವಾಗಿ ಜನರಿಗಿರುವ ಭಾರಿ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಮತ್ತು ಜನರ ಹಾಗೂ ರಾಷ್ಟ್ರದ ಭವಿಷ್ಯವನ್ನು ರೂಪಿಸಲು ತಮ್ಮ ವರ್ಚಸ್ಸಿನ ಮೂಲಕ ಶ್ರಮಿಸುತ್ತಾರೆ. ಇದೇ ಉತ್ಸಾಹದ ತೀವ್ರತೆಯನ್ನು ಉಳಿಸಿಕೊಳ್ಳಲು ಬರುವ ಪೀಳಿಗೆಗಳು ಹೆಣಗಾಡುತ್ತವೆ'

'ರಾಜಕಾರಣಿಗಳ ಕಾರ್ಯವೈಖರಿ ಬದಲಾಗುತ್ತದೆ. ಜನರಿಗೆ ರಾಜಕಾರಣಿಗಳ ಮೇಲೆ ಗೌರವ ಕಡಿಮೆಯಾಗುತ್ತದೆ. ಚುನಾವಣೆಗಳು ಬಂದಾಗ ಹೆಚ್ಚಿನದ್ದೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಜನರು ಯೋಚಿಸುತ್ತಾರೆ. ಮಾನದಂಡದ ಗುಣಮಟ್ಟ ಕಡಿಮೆಯಾಗುತ್ತದೆ. ನಂಬಿಕೆ ನಾಶವಾಗುತ್ತದೆ. ಕ್ರಮೇಣ ರಾಷ್ಟ್ರವೂ ಕುಗ್ಗುತ್ತದೆ' ಎಂದು ಲೀ ತಿಳಿಸಿದ್ದಾರೆ.

'ಹೆಚ್ಚಿನ ರಾಜಕೀಯ ವ್ಯವಸ್ಥೆಗಳಲ್ಲಿ ಸ್ಥಾಪಕ ನಾಯಕರ ಆಶಯಗಳು ಕಡೆಗಣನೆಗೆ ಒಳಗಾಗುತ್ತಿವೆ. ಬೆನ್‌-ಗುರಿಯನ್‌ ಅವರ ಇಸ್ರೇಲ್‌ ಚಿತ್ರಣವು ಬದಲಾಗಿದೆ. 2 ವರ್ಷದಲ್ಲಿ 4 ಚುನಾವಣೆಗಳನ್ನು ಕಂಡಿದೆ. ಹಿರಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ, ಕೆಲವರು ಜೈಲು ಸೇರಿದ್ದಾರೆ' ಎಂದು ಹೇಳಿದ್ದಾರೆ.

ಹಾಗೆಯೇ ನೆಹರೂ ಅವರ ಭಾರತದಲ್ಲಿ, ಮಾಧ್ಯಮ ವರದಿಗಳ ಪ್ರಕಾರ ಲೋಕಸಭೆಯ ಸುಮಾರು ಅರ್ಧದಷ್ಟು ಸಂಸದರು ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಅನೇಕ ಗಂಭೀರ ಅಪರಾಧ ಪ್ರಕರಣಗಳು ಕೋರ್ಟ್‌ನಲ್ಲಿ ಬಾಕಿ ಇವೆ. ಹೆಚ್ಚಿನವು ರಾಜಕೀಯ ಪ್ರೇರಿತ ಆರೋಪಗಳು ಎಂದೂ ಕೇಳಿಬಂದಿವೆ' ಎಂದು ಲೀ ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಆಗಸ್ಟ್‌ 3ರಂದು ಅಸತ್ಯದ ಪರವಾಗಿ ನಿಂತಿದ್ದಕ್ಕೆಖಾನ್‌ ಅವರಿಗೆ 25,000 ಸಿಂಗಪುರ ಡಾಲರ್‌ (13.9 ಲಕ್ಷ ರೂ.) ದಂಡ ವಿಧಿಸಬೇಕು ಎಂದು ಸಮಿತಿ ಹೇಳಿದೆ. ಅಕ್ಟೋಬರ್‌ 4ರಂದು ಅಸತ್ಯವನ್ನು ಪುನಃ ಹೇಳಿದ್ದಕ್ಕೆ ಪ್ರತ್ಯೇಕವಾಗಿ 10 ಸಾವಿರ ಸಿಂಗಪುರ ಡಾಲರ್‌ ದಂಡವನ್ನು ವಿಧಿಸಬೇಕು ಎಂದು ಸಮಿತಿ ತಿಳಿಸಿದೆ.

29 ವರ್ಷದ ಖಾನ್‌ ನವೆಂಬರ್‌ 30ರಂದು ಸಂಸದ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 2020ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಿಂಗಪುರದ ಅತಿ ಕಿರಿಯಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT