ಮಂಗಳವಾರ, ಜುಲೈ 27, 2021
25 °C
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ಮ್ಯಾನ್ಮಾರ್‌ನ ವಿಶೇಷ ರಾಯಭಾರಿ ಕ್ರಿಸ್ಟೈನ್

ಮ್ಯಾನ್ಮಾರ್‌: 10 ಸಾವಿರ ನಿರಾಶ್ರಿತರು ಭಾರತ, ಥಾಯ್ಲೆಂಡ್‌ನತ್ತ ಫಲಾಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಮ್ಯಾನ್ಮಾರ್‌ನಲ್ಲಿ ನಾಗರಿಕರು ಮತ್ತು ಮಿಲಿಟರಿ ಆಡಳಿತದ ನಡುವಿನ ಸಂಘರ್ಷದಿಂದಾಗಿ ಸಾವಿರಾರು ಮಂದಿ ಸ್ಥಳಾಂತರಗೊಳ್ಳುತ್ತಿದ್ದು, ಇತ್ತೀಚಿನ ಮಾಹಿತಿ ಪ್ರಕಾರ, 10 ಸಾವಿರ ನಾಗರಿಕರು ಮ್ಯಾನ್ಮಾರ್‌ನಿಂದ ಭಾರತ ಮತ್ತು ಥಾಯ್ಲೆಂಡ್‌ಗೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಮ್ಯಾನ್ಮಾರ್‌ನ ವಿಶೇಷ ರಾಯಭಾರಿ ಕ್ರಿಸ್ಟೈನ್ ಸ್ಕ್ರಾನೆರ್‌ ಬರ್ಗೆನರ್ ಹೇಳಿದ್ದಾರೆ.

ಶುಕ್ರವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಈ ಮಾಹಿತಿ ನೀಡಿದ ಅವರು, ‘ಈ ಪ್ರಮಾಣದ ನಾಗರಿಕರ ಪಲಾಯನ ಪ್ರಕ್ರಿಯೆಯಿಂದ ಪ್ರಾದೇಶಿಕವಾಗಿ ಬಿಕ್ಕಟ್ಟಿನ ಬೆದರಿಕೆಯನ್ನು ಅನಾವರಣಗೊಳಿಸುತ್ತಿದೆ‘ ಎಂದು ಹೇಳಿದ್ದಾರೆ.

‘ಮ್ಯಾನ್ಮಾರ್‌ನಲ್ಲಿ ನಾನು ನಿತ್ಯ ಸಂಪರ್ಕದಲ್ಲಿರುವ ಪಾಲುದಾರರಿಂದ ಪಡೆದಿರುವ ಮಾಹಿತಿ ಪ್ರಕಾರ, ಜನರು ಬಹಳ ಸಂಕಷ್ಟದಲ್ಲಿದ್ದಾರೆ. ಕೆಲವರಿಗೆ ಬದುಕುವ ವಿಶ್ವಾಸವಿಲ್ಲದೇ ಭಯದಿಂದ ಜೀವನ ನಡೆಸುತ್ತಿದ್ದಾರೆ‘ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಸಮುದಾಯದ ಸಹಾಯದ ಅನುಪಸ್ಥಿತಿಯಲ್ಲಿ, ನಾಗರಿಕರು, ತಮ್ಮ ರಕ್ಷಣೆಗಾಗಿ ‘ನಾಗರಿಕ ರಕ್ಷಣಾ ಪಡೆ‘ಗಳನ್ನು ರಚಿಸಿಕೊಂಡು, ತಾವೇ ತಯಾರಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಹೋರಾಟಕ್ಕೆ ಬಳಸುತ್ತಿದ್ದಾರೆ. ಪ್ರಜಾಪ್ರಭುತ್ವದ ಏಕತೆಯ ಆಧರದ ಮೇಲೆ  ಸ್ಥಳೀಯ ಸಶಸ್ತ್ರ ಸಂಘಟನೆಗಳಿಂದ ಸೇನಾ ತರಬೇತಿ ಪಡೆಯುತ್ತಿದ್ದಾರೆ. ಹಲವು ದಶಕಗಳಿಂದ ಶಸ್ತ್ರಾಸ್ತ್ರ ಸಂಘರ್ಷವನ್ನೇ ಕಾಣದ ದೇಶದ ವಿವಿಧ ವಲಯಗಳು ಕ್ರಮೇಣ ಅಶಾಂತಿಯ ತಾಣಗಳಾಗುತ್ತಿವೆ ಎಂದು ಹೇಳಿದ್ದಾರೆ.

‘ಕೇಂದ್ರೀಯ ಮ್ಯಾನ್ಮಾರ್ ಮತ್ತು ಚೀನಾ, ಭಾರತ ಮತ್ತು ಥಾಯ್ಲೆಂಡ್ ರಾಷ್ಟ್ರಗಳ ಗಡಿ ಭಾಗವು ಸೇರಿದಂತೆ ಮ್ಯಾನ್ಮಾರ್‌ನಾದ್ಯಂತ ಸಂಘರ್ಷಗಳು ಮುಂದುವರಿದಿವೆ. ಇದರಿಂದ 1.75 ಲಕ್ಷ ನಾಗರಿಕರು ನಿರ್ಗತಿಕರಾಗಿದ್ದಾರೆ ಮತ್ತು 10 ಸಾವಿರ ನಿರಾಶ್ರಿತರು ಭಾರತ ಮತ್ತು ಥಾಯ್ಲೆಂಡ್‌ನತ್ತ ಪಲಾಯನ ಮಾಡಿದ್ದಾರೆ. ಮ್ಯಾನ್ಮಾರ್‌ನಲ್ಲಿ ನಾಗರಿಕರೊಂದಿಗೆ ದೊಡ್ಡ ಪ್ರಮಾಣದಲ್ಲಿ ಸಂಘರ್ಷ ನಡೆಯುತ್ತಿರುವುದು ನಿಜ‘ ಎಂದು ಕ್ರಿಸ್ಟೈನ್ ಸ್ಕ್ರಾನೆರ್‌ ಹೇಳಿದ್ದಾರೆ. 

‘ಏಷ್ಯಾದ ಹೃದಯಭಾಗವಾಗಿರುವ ಮ್ಯಾನ್ಮಾರ್‌, ಬಹು ಆಯಾಮದ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವು ಇಂಥ ಎಲ್ಲ ತರಹದ ಹಿಂಸಾಚಾರವನ್ನು ಖಂಡಿಸಬೇಕು. ಶಾಂತಿ ಕಾಪಾಡಲು ಮುಂದಾಗಬೇಕು‘ ಎಂದು ಅವರು ಹೇಳಿದ್ದಾರೆ.

‘ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಜನರ ಪರಿಸ್ಥಿತಿಯೂ ಘೋರವಾಗಿದ್ದು, ಅಂತರರಾಷ್ಟ್ರೀಯ ಸಮುದಾಯಗಳು ರೊಹಿಂಗ್ಯಾ ಜನರನ್ನು ಮರೆಯಬಾರದು‘ ಎಂದು ಅವರು ಒತ್ತಿ ಹೇಳಿದ್ದಾರೆ.

ಕಳೆದ ಶುಕ್ರವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಮ್ಯಾನ್ಮಾರ್ ಪರಿಸ್ಥಿತಿ‘ ಕುರಿತ ಕರಡು ನಿರ್ಣಯವೊಂದನ್ನು ಮಂಡಿಸಲಾಗಿತ್ತು. ಮ್ಯಾನ್ಮಾರ್ ಸೇರಿದಂತೆ 119 ರಾಷ್ಟ್ರಗಳು, ನಿರ್ಣಯದ ಪರವಾಗಿ ಮತ ಚಲಾಯಿಸಿದ್ದವು.  ಭಾರತ, ರಷ್ಯಾ ಸೇರಿದಂತೆ  36 ದೇಶಗಳು ನಿರ್ಣಯದಿಂದ ದೂರ ಉಳಿದಿದ್ದವು. ಬೆಲುರಸ್‌ ನಿರ್ಣಯದ ವಿರುದ್ಧ ಮತ ಚಲಾಯಿಸಿದ ಏಕೈಕ ರಾಷ್ಟ್ರವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು