ಶನಿವಾರ, ಜನವರಿ 16, 2021
27 °C

ಅಂತರ್ಯುದ್ಧದಲ್ಲಿ ಮಡಿದ ‘ತಮಿಳು ವೀರರ’ ಸ್ಮರಣೆ ನಿಷೇಧಿಸಿದ ಶ್ರೀಲಂಕಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕೊಲೊಂಬೊ: ಶ್ರೀಲಂಕಾದಲ್ಲಿ ದಶಕಗಳ ಕಾಲ ನಡೆದ ಅಂತರ್ಯುದ್ಧದಲ್ಲಿ ಕೊಲ್ಲಲ್ಪಟ್ಟ ಬಂಡುಕೋರ 'ತಮಿಳು ಹುಲಿ'ಗಳ ಸ್ಮರಣೆಯನ್ನು ಶುಕ್ರವಾರ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಸರ್ಕಾರ ನಿಷೇಧಿಸಿದೆ.

1982 ರಲ್ಲಿ ಶ್ರೀಲಂಕಾದ ಭದ್ರತಾ ಪಡೆಗಳಿಂದ ಹತರಾದ 'ದಿ ರೆಬಲ್‌ ಲಿಬರೇಷನ್‌ ಟೈಗರ್ಸ್‌ ಆಫ್‌ ತಮಿಳ್‌ ಇಳಮ್‌'ನ (ಎಲ್‌ಟಿಟಿಇ) ಮೊದಲ ನಾಯಕ ಲೆಫ್ಟಿನೆಂಟ್ ಶಂಕರ್ ಅವರ ನೆನಪಿಗಾಗಿ ನವೆಂಬರ್ 27 ಅನ್ನು 'ವೀರರ ದಿನ'ವಾಗಿ ಆಚರಿಸಲಾಗುತ್ತಿದೆ.

ದ್ವೀಪರಾಷ್ಟ್ರದ ಜನಾಂಗೀಯ ಅಲ್ಪಸಂಖ್ಯಾತರಾದ ತಮಿಳಿಗರಿಗೆ ಪ್ರತ್ಯೇಕ ನೆಲೆ ಸಿಗಬೇಕೆಂಬ ಒತ್ತಾಯದೊಂದಿಗೆ 1972 ರಲ್ಲಿ ಆರಂಭವಾದ ಬಂಡುಕೋರ 'ತಮಿಳು ಹುಲಿ'ಗಳ ರಕ್ತಸಿಕ್ತ ಹೋರಾಟ, ಬರೋಬ್ಬರಿ 37 ವರ್ಷಗಳ ಕಾಲ ನಡೆಯಿತು. ಲಂಕಾ ಸರ್ಕಾರದ ಸಶಸ್ತ್ರ ಪಡೆಗಳ ವಿರುದ್ಧ ನಡೆದ ದೀರ್ಘ ಕಾಲದ ಅಂತರ್ಯುದ್ಧದಲ್ಲಿ ಸಾವಿರಾರು ತಮಿಳಿಗರು ಪ್ರಾಣ ತೆತ್ತಿದ್ದಾರೆ.

ಅಂತಿಮವಾಗಿ 2009 ರಲ್ಲಿ ತಮಿಳರ ಹೋರಾಟವನ್ನು ಹತ್ತಿಕ್ಕಿ ಸೋಲಿಸಲಾಯಿತು. ಅಗ ದೇಶದ ರಕ್ಷಣಾ ಮಂತ್ರಿಯಾಗಿದ್ದವರು ಗೋಟಬಯ ರಾಜಪಕ್ಸೆ. ಅವರ ಸಹೋದರ ಮಹಿಂದಾ ರಾಜಪಕ್ಸೆ ರಾಷ್ಟ್ರದ ಅಧ್ಯಕ್ಷರಾಗಿದ್ದರು. ಈ ಯುದ್ಧವನ್ನು ಹತ್ತಿಕ್ಕುವ ಮೂಲಕ ರಾಜಪಕ್ಸೆ ಸೋದರರು ಬಹುಸಂಖ್ಯಾತ ಸಿಂಹಳೀಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಶ್ರೀಲಂಕಾದಲ್ಲಿ ತಮಿಳರು ಯುದ್ಧದಲ್ಲಿ ಹತರಾದ ತಮ್ಮ ಕುಟುಂಬಸ್ಥರರನ್ನು ಸ್ಮರಿಸಲು ಹಲವು ವರ್ಷಗಳ ಕಾಲ ಅವಕಾಶವನ್ನೇ ನೀಡಲಾಗಿರಲಿಲ್ಲ. ಆದರೆ 2015 ರಲ್ಲಿ ಮಹಿಂದಾ ರಾಜಪಕ್ಸೆ ಅಧಿಕಾರದಿಂದ ಹೊರಬಿದ್ದ ನಂತರ 'ವೀರರ ದಿನ' ಸಮಾರಂಭಗಳ ಮೇಲಿನ ನಿಷೇಧವನ್ನು ತೆರವು ಮಾಡಲಾಗಿತ್ತು.

ಸದ್ಯ ರಾಜಪಕ್ಸೆ ಸೋದರರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಗೋಟಬಯ ದೇಶದ ಅಧ್ಯಕ್ಷರಾಗಿದ್ದರೆ, ಮಹಿಂದಾ ಪ್ರಧಾನಿಯಾಗಿದ್ದಾರೆ.

ತಮಿಳರು ಬಹುಸಂಖ್ಯಾತರಾಗಿರುವ ಶ್ರೀಲಂಕಾದ ಉತ್ತರ ನ್ಯಾಯಾಲಯಕ್ಕೆ ಕಳೆದ ವಾರ ಅರ್ಜಿ ಸಲ್ಲಿಸಿರುವ ರಾಜಪಕ್ಸೆ ಸರ್ಕಾರ ತಮಿಳು ವೀರರ ಸ್ಮರಣೆಗೆ ಇದ್ದ ಅವಕಾಶಕ್ಕೆ ತಡೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಅಟಾರ್ನಿ ಜನರಲ್ ಕಚೇರಿ ತಿಳಿಸಿದೆ.

ಸತ್ತವರ ಸ್ಮರಣೆ ಮಾಡುವಲ್ಲಿಯೂ ತಮಿಳರ ವಿಷಯದಲ್ಲಿ ಶ್ರೀಲಂಕಾ ತಾರತಮ್ಯ ಧೋರಣೆ ತೋರುತ್ತಿದೆ ಎಂದು ಶ್ರೀಲಂಕಾದ ತಮಿಳರ ಪಕ್ಷ 'ತಮಿಳು ನ್ಯಾಷನಲ್‌ ಅಲಯನ್ಸ್‌' (ಟಿಎನ್‌ಎ) ಸಂಸದ ಅಬ್ರಹಾಂ ಸುಮಂತಿರಾನ್ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ತಮಿಳು ಹೋರಾಟಗಾರರ ಸ್ಮರಣೆಗೆ(ವೀರರ ದಿನ) ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಈಗಾಗಲೇ ನಾಲ್ವರನ್ನು ಬಂಧಿಸಿರುವುದಾಗಿ ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ.

ಶ್ರೀಲಂಕಾದ ತಮಿಳು ಪ್ರತ್ಯೇಕತಾವಾದಿ ಯುದ್ಧವು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಮಿಲಿಟರಿ ಕಾರ್ಯಾಚರಣೆ ಮೂಲಕ ಶ್ರೀಲಂಕಾದ ಸೇನಾ ಪಡೆಗಳು ಕನಿಷ್ಠ 40,000 ತಮಿಳು ನಾಗರಿಕರನ್ನು ಕೊಂದಿವೆ ಎಂದು ವಿಶ್ವಸಂಸ್ಥೆ ಆರೋಪಿಸಿದೆ. ಆದರೆ, ಈ ಆರೋಪವನ್ನು ಶ್ರೀಲಂಕಾದ ಎಲ್ಲ ಸರ್ಕಾರಗಳೂ ನಿರಾಕರಿಸುತ್ತಲೇ ಬಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು