ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ಸಾಲ ಮರು ಹೊಂದಾಣಿಕೆಗೆ ಸಮಿತಿ

ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಅಧ್ಯಕ್ಷ ಗೊಟಬಯ ಪ್ರಯತ್ನ
Last Updated 7 ಏಪ್ರಿಲ್ 2022, 18:32 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆ ತರುವುದಕ್ಕಾಗಿ ಸಾಲ ಮರುಹೊಂದಾಣಿಕೆಗೆ ಪರಿಣತರ ಸಮಿತಿಯೊಂದನ್ನು ಅಧ್ಯಕ್ಷ ಗೊಟಬಯ ರಾಜಪಕ್ಸ ಗುರುವಾರ ನೇಮಿಸಿದ್ದಾರೆ.

ಆಹಾರ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ತೀವ್ರವಾಗಿದೆ. ಹಣದುಬ್ಬರ ಇನ್ನಷ್ಟು ಏರಿಕೆಯಾಗಿದೆ, ವಿದ್ಯುತ್‌ ‍ಪೂರೈಕೆ ವ್ಯತ್ಯಯವಾಗಿದೆ. ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಸಾಲ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಗೊಟಬಯ ಮುಂದಾಗಿದ್ದಾರೆ.

ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಪುನಶ್ಚೇತನ ಯೋಜನೆಗಾಗಿ ಮೂವರು ಪರಿಣತರ ಸಮಿತಿ ನೇಮಿಸಲಾಗಿದೆ ಎಂದು ಅಧ್ಯಕ್ಷ ಗೊಟಬಯ ಅವರ ಕಚೇರಿ ತಿಳಿಸಿದೆ. ಸರ್ಕಾರಿ ಸಾಲಪತ್ರ ಹೊಂದಿರುವವರು ಮತ್ತು ಇತರ ಸಾಲಗಾರರು ಸಾಲದ ಮೊತ್ತದಲ್ಲಿ ಸ್ವಲ್ಪ ಹಣವನ್ನು ಬಿಡುವುದಕ್ಕೆ ಸಾಧ್ಯವಾಗುವಂತಹ ಯೋಜನೆಯನ್ನು ಈ ಸಮಿತಿಯು ರೂಪಿಸಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಬಿಕ್ಕಟ್ಟಿನಿಂದ ಹೊರಬರಲು ನೆರವಿವಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಜತೆಗೂ ಮಾತುಕತೆ ನಡೆಯುತ್ತಿದೆ.

ಶ್ರೀಲಂಕಾವು ಒಟ್ಟು 5,100 ಕೋಟಿ ಡಾಲರ್‌ (₹3.87 ಲಕ್ಷ ಕೋಟಿ) ವಿದೇಶಿ ಸಾಲ ಹೊಂದಿದೆ. ರೇಟಿಂಗ್‌ ಸಂಸ್ಥೆಗಳು ದೇಶದ ಸಾಲ ಮರುಪಾವತಿ ಸಾಮರ್ಥ್ಯ ಕುಗ್ಗಿಸಿದ ಕಾರಣ ಹೆಚ್ಚಿನ ಸಾಲ ಪಡೆದುಕೊಳ್ಳುವುದು ದೇಶಕ್ಕೆ ಸಾಧ್ಯವಾಗಿಲ್ಲ.

‘ಮರುಪಾವತಿ ಬಿಕ್ಕಟ್ಟು ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ನಮ್ಮ ಸದ್ಯದ ಆದ್ಯತೆ. ಸಾಲ ಮರು ಹೊಂದಾಣಿಕೆಯ ಮಾತುಕತೆಗೆ ಐಎಂಎಫ್‌ ನೆರವು ಪಡೆಯಲಾಗುವುದು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಣಕಾಸು ಸಚಿವರೇ ಇಲ್ಲ

ಶ್ರೀಲಂಕಾದ ಇಡೀ ಸಚಿವ ಸಂಪುಟವೇ ಇತ್ತೀಚೆಗೆ ರಾಜೀನಾಮೆ ನೀಡಿದೆ. ಅಧ್ಯಕ್ಷ ಗೊಟಬಯ ಅವರ ತಮ್ಮ, ಹಣಕಾಸು ಸಚಿವರಾಗಿದ್ದ ಬೇಸಿಲ್‌ ರಾಜಪಕ್ಸ ಅವರು ಕೂಡ ರಾಜೀನಾಮೆ ನೀಡಿದ್ದರು. ಹಿಂದೆ ಕಾನೂನು ಸಚಿವರಾಗಿದ್ದ ಅಲಿ ಸಾಬ್ರಿ ಅವರನ್ನು ಬೇಸಿಲ್‌ ಅವರ ಸ್ಥಾನಕ್ಕೆ ನಂತರ ನೇಮಿಸಲಾಗಿತ್ತು. ಆದರೆ, ನೇಮಕದ ಮರುದಿನವೇ ಅವರು ರಾಜೀನಾಮೆ ನೀಡಿದ್ದಾರೆ. ಹಾಗಾಗಿ, ಆರ್ಥಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ದೇಶಕ್ಕೆ ಹಣಕಾಸು ಸಚಿವರೇ ಇಲ್ಲದಂತಾಗಿದೆ.

ಮಾಜಿ ಗವರ್ನರ್‌ಗೆ ಪ್ರಯಾಣ ನಿರ್ಬಂಧ

ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್‌ನ ಗವರ್ನರ್‌ ಆಗಿದ್ದ ಅಜಿತ್ ಕಬ್ರಾಲ್‌ ಅವರ ಮೇಲೆ ಅಲ್ಲಿನ ನ್ಯಾಯಾಲಯವೊಂದು ಪ್ರಯಾಣ ನಿರ್ಬಂಧ ಹೇರಿದೆ. ದೇಶದ ಆರ್ಥಿಕ ಬಿಕ್ಕಟ್ಟಿಗೆ ಕಬ್ರಾಲ್‌ ಅವರೇ ಹೊಣೆಗಾರರು ಎಂಬ ಆರೋಪ ಇದೆ. ಇದೇ 18ರಂದು ನ್ಯಾಯಾಲಯಕ್ಕೆ ಹಾಜರಾಗಿ ಆರೋಪಗಳಿಗೆ ಉತ್ತರ ನೀಡಬೇಕು ಎಂದು ಕೊಲಂಬೊದ ನ್ಯಾಯಾಲಯವೊಂದು ಅವರಿಗೆ ಸೂಚಿಸಿದೆ. ಕಬ್ರಾಲ್‌ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಹಸಿವಿನಿಂದ ಸಾವು: ಸ್ಪೀಕರ್‌ ಎಚ್ಚರಿಕೆ

ಆರ್ಥಿಕ ಬಿಕ್ಕಟ್ಟಿಗೆ ಒಂದು ವಾರದೊಳಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಇದ್ದರೆ ಜನರು ಹಸಿವಿನಿಂದ ಸಾಯುವ ಸ್ಥಿತಿ ನಿರ್ಮಾಣ ಆಗಬಹುದು ಎಂದು ಸಂಸತ್ತಿನ ಸ್ಪೀಕರ್‌ ಮಹಿಂದ ಯಪ ಅಭಯವರ್ಧನ ಎಚ್ಚರಿಸಿದ್ದಾರೆ.

‘ದೇಶವು ರಾಜಕೀಯ ಬಿಕ್ಕಟ್ಟಿನ ಅಂಚಿನಲ್ಲಿದೆ. ಜನರು ಇನ್ನಷ್ಟು ಕಷ್ಟ ಅನುಭವಿಸುವ ಸ್ಥಿತಿ ಸೃಷ್ಟಿ ಆಗಲಿದೆ. ಈಗಿನದ್ದು ಅತ್ಯಂತ ಕೆಟ್ಟ ಸ್ಥಿತಿ ಎಂದು ಹೇಳಲಾಗುತ್ತಿದೆ. ಆದರೆ, ಇದು ಆರಂಭ ಮಾತ್ರ ಎಂದು ನನ್ನ ಭಾವನೆ’ ಎಂದು ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಸಂವಾದದಲ್ಲಿ ಭಾಗವಹಿಸಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT