ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ರೋಸಿ ಬೀದಿಗಿಳಿದ ಜನ– ವಾಹನಗಳಿಗೆ ಬೆಂಕಿ

Last Updated 1 ಏಪ್ರಿಲ್ 2022, 10:30 IST
ಅಕ್ಷರ ಗಾತ್ರ

ಕೊಲಂಬೊ: ಹಿಂದೆಂದೂ ನೋಡದ ರೀತಿಯಲ್ಲಿ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಜನ ಬೀದಿಗಿಳಿದಿದ್ದಾರೆ. ಆರ್ಥಿಕತೆ ನಿರ್ವಹಣೆಯಲ್ಲಿ ವಿಫಲರಾಗಿರುವ ಅಧ್ಯಕ್ಷ ಗೋಟಬಯ ರಾಜಪಕ್ಸ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, 54 ಜನರನ್ನು ಬಂಧಿಸಲಾಗಿದೆ.

ರಾಜಧಾನಿ ಕೊಲಂಬೊದಲ್ಲಿರುವ ರಾಜಪಕ್ಸ ಮನೆ ಮುಂದೆ ನೆರೆದಿದ್ದ ನೂರಾರು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಲಂಫಿರಗಿ ಮತ್ತು ಅಶ್ರುವಾಯು ಪ್ರಯೋಗಿಸುವ ಮೂಲಕ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದರು.

ಘರ್ಷಣೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗೆ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಮಧ್ಯಾಹ್ನದ ಹೊತ್ತಿಗೆ ಹಿಂಪಡೆಯಲಾಗಿದೆ.

‘ಕಳೆದ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದ 54 ಪ್ರತಿಭಟನಾಕಾರರನ್ನು ನಾವು ಬಂಧಿಸಿದ್ದೇವೆ. ಎರಡು ಬಸ್, ಸೇನೆ ಮತ್ತು ಪೊಲೀಸರ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಒಂದು ಜೀಪ್ ಮತ್ತು ಹಲವು ಮೋಟಾರ್‌ ಸೈಕಲ್‌ಗಳನ್ನೂ ಸುಟ್ಟು ಹಾಕಲಾಗಿದೆ’ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಿಹಾಲ್ ಥಲ್ಡುವಾ ತಿಳಿಸಿದ್ದಾರೆ.

2.2 ಕೋಟಿ ಜನಸಂಖ್ಯೆ ಇರುವ ದ್ವೀದ ರಾಷ್ಟ್ರ ಸ್ವಾತಂತ್ರ್ಯಾನಂತರ ಅತ್ಯಂತ ಕೆಟ್ಟ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇಂಧನ ಆಮದಿಗೆ ವಿದೇಶಿ ವಿನಿಮಯದ ತೀವ್ರ ಕೊರತೆ ಮತ್ತು ವಿದ್ಯುತ್ ಕೊರತೆಯಿಂದಾಗಿ ದಿನಕ್ಕೆ 13 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ.

ಘರ್ಷಣೆಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿಭಟನಾಕಾರರು ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಥಲ್ಡುವಾ ಹೇಳಿದ್ದಾರೆ.

‘ಶ್ರೀಲಂಕಾಗೆ ಫೊರೆಕ್ಸ್ ಕೊರತೆ ಇದೆ. ಈ ರೀತಿ ಪ್ರತಿಭಟನೆ ಮಾಡಿದರೆ ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದೆ. ಜನರಿಗೆ ಪ್ರತಿಭಟಿಸುವ ಹಕ್ಕಿದೆ, ಆದರೆ, ಅದು ರಚನಾತ್ಮಕವಾಗಿರಬೇಕು’ಎಂದು ಶ್ರೀಲಂಕಾದ ಪ್ರವಾಸೋದ್ಯಮ ಸಚಿವ ಪ್ರಸನ್ನ ರಣತುಂಗ ಹೇಳಿದ್ದಾರೆ.

ಪ್ರತಿಭಟನೆ ಬಳಿಕ ಕೊಲಂಬೊದ ರಸ್ತೆಗಳು ಸಂಪೂರ್ಣ ಸ್ತಬ್ದವಾಗಿದ್ದು, ಸುಟ್ಟು ಕರಕಲಾದ ಬಸ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.

ಸತತ ಮೂರನೇ ದಿನವೂ ಶ್ರೀಲಂಕಾ ಷೇರುಪೇಟೆ ವಹಿವಾಟನ್ನು ರದ್ದು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT