ಸೋಮವಾರ, ಜೂನ್ 14, 2021
22 °C

ಕತ್ತಲಲ್ಲಿ ಮುಳುಗಿದ ಇಡೀ ಶ್ರೀಲಂಕಾ!

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕೊಲೊಂಬೊ: ದೇಶದ ಪ್ರಮುಖ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಸಮಸ್ಯೆಯಿಂದಾಗಿ ಇಡೀ ಶ್ರೀಲಂಕಾದಲ್ಲಿ ವಿದ್ಯುತ್‌ ಇಲ್ಲವಾಗಿದ್ದು, ಕತ್ತಲು ಆವರಿಸಿದೆ.

ರಾಜಧಾನಿ ಕೊಲಂಬೊದ ಹೊರವಲಯದ ಕೇರವಾಳಪಿತೀಯ ವಿದ್ಯುತ್ ಕೇಂದ್ರದಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ಸಮಸ್ಯೆಯು ದೇಶವನ್ನು ಕತ್ತಲೆಗೆ ದೂಡಿತ್ತು ಎಂದು ಶ್ರೀಲಂಕಾದ ವಿದ್ಯುತ್ ಖಾತೆ ಸಚಿವ ಡಲ್ಲಾಸ್ ಅಲಹಪೆರುಮಾ ಹೇಳಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ ನಿಲುಗಡೆಯಾದ ವಿದ್ಯುತ್‌ ಪೂರೈಕೆ, ಆರು ಗಂಟೆಗಳ ಕಾಲ ಇಡೀ ದೇಶದ 2.1 ಕೋಟಿ ಅಧಿಕ ಜನರನ್ನು ಬಾಧಿಸಿದೆ. ಆರು ಗಂಟೆಗಳ ನಂತರ ದೇಶದ ಕೆಲವು ಭಾಗಗಳಿಗೆ ವಿದ್ಯುತ್ ಪೂರೈಕೆಯಾಗಿದೆ. ಆದರೆ, ರಾಜಧಾನಿ ಕೊಲೊಂಬೊಕ್ಕೆ ರಾತ್ರಿಯಾದರೂ ಪೂರೈಕೆಯಾಗಿಲ್ಲ.

2016ರ ಮಾರ್ಚ್‌ ನಂತರ ದೇಶದಲ್ಲಿ ವಿದ್ಯುತ್‌ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು ಇದೇ ಮೊದಲು. 2016ರಲ್ಲಿ 8 ಗಂಟೆಗಳ ಕಾಲ ದೇಶದಲ್ಲಿ ವಿದ್ಯುತ್‌ ಪೂರೈಕೆಯೇ ಇರಲಿಲ್ಲ.

‘ವಿದ್ಯುತ್‌ ಸರಬರಾಜನ್ನು ಮರಳಿ ಸ್ಥಾಪಿಸಲು ಕ್ರಮಗಳನ್ನು ಪ್ರಯತ್ನಿಸಲಾಗುತ್ತಿದೆ,’ ಎಂದು ಸಚಿವ ಅಲಹಪೆರುಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅದರೆ, ಯಾವಾಗ ವಿದ್ಯುತ್ ಪೂರೈಕೆಯಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ವಿದ್ಯುತ್ ಕಡಿತವು ಕೊಲಂಬೊದಲ್ಲಿ ಭಾರಿ ಸಮಸ್ಯೆಯನ್ನೇ ಸೃಷ್ಟಿ ಮಾಡಿದೆ. ಸಂಚಾರ ವಿದ್ಯುತ್‌ ದೀಪಗಳು ಇಲ್ಲವಾದ ಕಾರಣ ಈಗಾಗಲೇ ಟ್ರಾಫಿಕ್‌ ಜಾಮ್‌ನಿಂದ ಕೂಡಿದ್ದ ರಸ್ತೆಗಳಲ್ಲಿ ಮತ್ತಷ್ಟು ಟ್ರಾಫಿಕ್‌ ಸಮಸ್ಯೆ ತಲೆದೋರಿದೆ. ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಸಂಚಾರ ಪೊಲೀಸರು ಹರಸಾಹಸಪಡುತ್ತಿದ್ದಾರೆ.
ವಿದ್ಯುತ್‌ ಇಲ್ಲದ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ಪರ್ಯಾಯ ವ್ಯವಸ್ಥೆಗಾಗಿ ಪರದಾಡುತ್ತಿವೆ.

ಶ್ರೀಲಂಕಾ ತನ್ನ ದೇಶಕ್ಕೆ ಅಗತ್ಯವಿರುವ ವಿದ್ಯುತ್‌ನ ಅರ್ಧ ಭಾಗವನ್ನು ಉಷ್ಣ ಶಕ್ತಿಯ ಮೂಲಕ ಉತ್ಪಾದಿಸುತ್ತದೆ. ಉಳಿದದ್ದನ್ನು ಜಲ ಮತ್ತು ಪವನ ಶಕ್ತಿಯಿಂದ ಪಡೆಯುತ್ತಿದೆ.

ಕೇರವಾಳಪಿತೀಯ ಕೇಂದ್ರವು 300 ಮೆಗಾವ್ಯಾಟ್ ಸಾಮರ್ಥ್ಯದ ತೈಲ ಉತ್ಪಾದಿತ ಉಷ್ಣ ವಿದ್ಯುತ್ ಕೇಂದ್ರವಾಗಿದ್ದು, ದೇಶದ ವಿದ್ಯುತ್ ಬೇಡಿಕೆಯ ಶೇಕಡಾ 12 ರಷ್ಟನ್ನು ಇದೊಂದೇ ಉತ್ಪಾದಿಸುತ್ತದೆ. ಸ್ಥಳೀಯವಾದ ವಿದ್ಯುತ್ ವ್ಯತ್ಯಯವು ಶ್ರೀಲಂಕಾದಲ್ಲಿ ಸಾಮಾನ್ಯವಾದರೂ, ದೇಶಾದ್ಯಂತ ವಿದ್ಯುತ್‌ ಇಲ್ಲವಾಗುವುದು ಅಪರೂಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು