ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯದ ಕೊರತೆ: ಶ್ರೀಲಂಕಾದಲ್ಲಿ ಡೀಸೆಲ್ ಮಾರಾಟ ಸ್ಥಗಿತ

Last Updated 31 ಮಾರ್ಚ್ 2022, 11:38 IST
ಅಕ್ಷರ ಗಾತ್ರ

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಈಗ ಡೀಸೆಲ್ ಖರೀದಿಗೂ ವಿದೇಶಿ ವಿನಿಮಯದ ಕೊರತೆ ಕಾಡುತ್ತಿದೆ. ಹೀಗಾಗಿ, ದೇಶದಾದ್ಯಂತ ಗುರುವಾರ ಡೀಸೆಲ್ ಮಾರಾಟ ಸ್ಥಗಿತಗೊಂಡಿದ್ದು, 2. 2 ಕೋಟಿ ಜನಸಂಖ್ಯೆ ಇರುವ ದೇಶದ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ.

ಸ್ವಾತಂತ್ರ್ಯ ನಂತರದಲ್ಲಿ ದ್ವೀಪ ರಾಷ್ಟ್ರವು ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಹಿಡಿತಕ್ಕೆ ಸಿಲುಕಿದೆ. ಅತ್ಯಂತ ಅಗತ್ಯ ವಸ್ತುಗಳ ಆಮದುಗಳಿಗೂ ಪಾವತಿಸಲು ವಿದೇಶಿ ಕರೆನ್ಸಿಯ ತೀವ್ರ ಕೊರತೆ ಉಂಟಾಗಿದೆ.

ಬಸ್, ವಾಣಿಜ್ಯ ವಾಹನಗಳಿಗೆ ಡೀಸೆಲ್ ಮುಖ್ಯ ಇಂಧನ. ಆದರೆ, ದೇಶದಾದ್ಯಂತ ಬಂಕ್‌ಗಳಲ್ಲಿ ಡೀಸೆಲ್ ಲಭ್ಯವಿಲ್ಲ. ಪೆಟ್ರೋಲ್ ಮಾರಾಟ ನಡೆಯುತ್ತಿದೆ. ಆದರೆ, ಕಡಿಮೆ ಪೂರೈಕೆ ಇದೆ. ಹೀಗಾಗಿ, ವಾಹನ ಚಾಲಕರು ಉದ್ದುದ್ದ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.

‘ನಾವು ಗ್ಯಾರೇಜ್‌ನಲ್ಲಿರುವ ಬಸ್‌ಗಳಿಂದ ಡೀಸೆಲ್ ಅನ್ನು ತೆಗೆದು ಅಗತ್ಯ ಸೇವೆಯ ವಾಹನಗಳನ್ನು ಚಲಾಯಿಸಲು ಬಳಸುತ್ತಿದ್ದೇವೆ’ ಎಂದು ಸಾರಿಗೆ ಸಚಿವ ದಿಲುಮ್ ಅಮುನುಗಮಾ ಹೇಳಿದ್ದಾರೆ.

ಖಾಸಗಿ ಬಸ್‌ಗಳ ಮಾಲೀಕರು ದೇಶದ ಸಾರಿಗೆ ವ್ಯವಸ್ಥೆಯ ಮೂರನೇ ಎರಡರಷ್ಟು ಭಾಗವನ್ನು ಹೊಂದಿದ್ದಾರೆ. ಅವರ ಬಳಿಯೂ ಈಗ ಇಂಧನ ಖಾಲಿಯಾಗಿದೆ. ಶುಕ್ರವಾರದ ನಂತರ ಅಗತ್ಯ ಸೇವೆಗಳು ಸಹ ಸಾಧ್ಯವಾಗದಿರಬಹುದು ಎಂದು ಅವರು ಹೇಳಿದರು.

‘ನಾವು ನಮ್ಮ ಡೀಸೆಲ್ ದಾಸ್ತಾನನ್ನು ಬಳಸಿ ಬಸ್‌ಗಳನ್ನು ಓಡಿಸುತ್ತಿದ್ದೇವೆ, ಆದರೆ, ಇಂದು ಸಂಜೆಯೊಳಗೆ ನಮಗೆ ಡೀಸೆಲ್ ಸರಬರಾಜು ಆಗದಿದ್ದರೆ, ಬಸ್‌ಗಳ ಕಾರ್ಯಾಚರಣೆ ಸಾಧ್ಯವಾಗುವುದಿಲ್ಲ’ಎಂದು ಖಾಸಗಿ ಬಸ್ ನಿರ್ವಾಹಕರ ಸಂಘದ ಅಧ್ಯಕ್ಷ ಗೇಮುನು ವಿಜೆರತ್ನ ಎಎಫ್‌ಪಿಗೆ ತಿಳಿಸಿದ್ದಾರೆ.

ದೇಶದ ಹಲವೆಡೆ ವಾಹನ ಸವಾರರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.

ಈ ಮಧ್ಯೆ, ಗುರುವಾರದಿಂದ ಅನಿವಾರ್ಯವಾಗಿ 13 ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ಜಾರಿಗೊಳಿಸುತ್ತಿದ್ದೇವೆ ಎಂದು ದೇಶದ ವಿದ್ಯುತ್ ಸರಬರಾಜು ಇಲಾಖೆ ತಿಳಿಸಿದೆ.

‘ನಮಗೆ ಎರಡು ದಿನಗಳಲ್ಲಿ ಡೀಸೆಲ್ ಸರಬರಾಜು ಮಾಡುವ ಭರವಸೆ ಇದೆ. ಬಳಿಕ ವಿದ್ಯುತ್ ಕಡಿತದ ಅವಧಿಯನ್ನು ಕಡಿಮೆ ಮಾಡಬಹುದು’ ಎಂದು ಸಿಲೋನ್ ವಿದ್ಯುತ್ ಮಂಡಳಿಯ ಅಧ್ಯಕ್ಷ ಎಂ.ಎಂ.ಸಿ. ಫರ್ಡಿನಾಂಡೋ ಸುದ್ದಿಗಾರರಿಗೆ ತಿಳಿಸಿದರು.

ದೀರ್ಘಾವಧಿಯ ವಿದ್ಯುತ್ ಕಡಿತದಿಂದ ಕೊಲಂಬೊ ಸ್ಟಾಕ್ ಎಕ್ಸ್‌ಚೇಂಜ್ ವಹಿವಾಟಿನ ಸಮಯ ಕಡಿತಗೊಳಿಸಲಾಗಿದ್ದು, ಅನೇಕ ಕಚೇರಿಗಳಲ್ಲಿ ಅನಿವಾರ್ಯವಲ್ಲದ ಸಿಬ್ಬಂದಿಯನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ದೂರವಾಣಿ ಸಂಪರ್ಕ ವ್ಯವಸ್ಥೆಯಲ್ಲೂ ವ್ಯತ್ಯಯ ಉಂಟಾಗಿದೆ.

ಈ ಮಧ್ಯೆ, ಸರ್ಕಾರಿ ಸ್ವಾಮ್ಯದ ಹಲವು ಆಸ್ಪತ್ರೆಗಳಿಗೆ ಸರಬರಾಜಾಗಬೇಕಾದ ಅಗತ್ಯ ಕೆಮಿಕಲ್‌ಗಳ ಕೊರತೆ ತಲೆದೋರಿರುವುದರಿಂದ ಶಸ್ತ್ರಚಿಕಿತ್ಸೆ ಮತ್ತು ಪರೀಕ್ಷೆಗಳನ್ನು ಸ್ಥಗಿತಗೊಳಿಸಲಾಗಿದೆ.

ಶ್ರೀಲಂಕಾ ತನ್ನ 51 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ತೀರಿಸಲು ಅಗತ್ಯವಾದ ವಿದೇಶಿ ಕರೆನ್ಸಿಯನ್ನು ಉಳಿಸುವ ಪ್ರಯತ್ನದಲ್ಲಿ ಮಾರ್ಚ್ 2020ರಲ್ಲಿ ವಿಶಾಲ ಆಮದು ನಿಷೇಧವನ್ನು ವಿಧಿಸಿತು. ಆದರೆ, ಇದು ಅಗತ್ಯ ವಸ್ತುಗಳ ವ್ಯಾಪಕ ಕೊರತೆ ಮತ್ತು ತೀವ್ರ ಬೆಲೆ ಏರಿಕೆಗೆ ಕಾರಣವಾಗಿದೆ.

ಇತ್ತ, ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ನೆರವಿಗೆ ಪ್ರಯತ್ನಿಸುತ್ತಿರುವುದಾಗಿ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT