ಮಂಗಳವಾರ, ಜುಲೈ 27, 2021
26 °C

ಲಂಕಾ ನೌಕಾಪಡೆಯಿಂದ ಗುಂಡಿನ ದಾಳಿ: ಅಪಾಯದಿಂದ ಪಾರಾದ ತಮಿಳುನಾಡಿನ 9 ಮೀನುಗಾರರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಮೇಶ್ವರ: ಪಾಕ್ ಜಲಸಂಧಿಯಿಂದ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ಭಾರತದ ದೋಣಿಗಳ ಮೇಲೆ ಶ್ರೀಲಂಕಾ ನೌಕಾಪಡೆ ಗುಂಡಿನ ದಾಳಿ ನಡೆಸಿದ್ದು, ಒಂಬತ್ತು ಮಂದಿ ಮೀನುಗಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೀನುಗಾರರು ಪ್ರಯಾಣಿಸುತ್ತಿದ್ದ ನಾಲ್ಕು ದೋಣಿಗಳ ಮೇಲೆ ಲಂಕಾ ನೌಕಾಪಡೆಯಿಂದ ಗುಂಡು ಹಾರಿಸಲಾಗಿದೆ. ಮೀನುಗಾರರ ಪ್ರಾತಿನಿಧ್ಯವಹಿಸಿದ್ದ ಒಂದು ಬೋಟ್ ಮತ್ತು ಅರೋಕಿಯಾಮ್ ಎಂಬ ಮತ್ತೊಂದು ದೋಣಿಗಳಿಂದ ತಲಾ ಒಂದೊಂದು ಗುಂಡು ಪತ್ತೆಯಾಗಿದೆ ಎಂದು ಮೀನುಗಾರರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಅದೃಷ್ಟವಶಾತ್, ನಮ್ಮ ಒಂಬತ್ತು ಮಂದಿ ಮೀನುಗಾರರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.’ಎಂದು ಅವರು ಹೇಳಿದರು.

ತಮಗೆ ರಕ್ಷಣೆ ನೀಡುವಂತೆ ಕೋರಿ ಮೀನುಗಾರರಿಂದ ದೂರು ಬಂದಿದೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1,500 ಮೀನುಗಾರರೊಂದಿಗೆ 200ಕ್ಕೂ ಹೆಚ್ಚು ದೋಣಿಗಳು ಗುರುವಾರ ಮೀನುಗಾರಿಕೆಗೆ ತೆರಳಿದ್ದವು. ಶುಕ್ರವಾರ ಅವರು ಹಿಂದಿರುಗುವಾಗ ‘ಲಂಕಾದ ನೌಕಾಪಡೆಯಿಂದ ಗುಂಡಿನ ದಾಳಿ’ಎದುರಿಸಬೇಕಾಯಿತು ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೀನುಗಾರರ ಮೇಲೆ ‘ಲಂಕಾ ನೌಕಾಪಡೆ ಗುಂಡು ಹಾರಿಸಿದ’ ಮೂರನೇ ಉದಾಹರಣೆ ಇದಾಗಿದೆ. ನಮ್ಮ ಮೀನುಗಾರರು ಪಾಕ್ ಜಲಸಂಧಿಯ ಭಾರತದ ಭಾಗದಲ್ಲೇ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ದೋಣಿಗಳಲ್ಲಿ ಪತ್ತೆಯಾದ ಎರಡು ಗುಂಡುಗಳನ್ನು ಮೀನುಗಾರಿಕೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಗುಂಡುಗಳಿಂದ ಕೂಡಿರುವ ದೋಣಿಗಳ ವಿಡಿಯೊ ತುಣುಕುಗಳು ಹರಿದಾಡುತ್ತಿವೆ.

ಒಂಬತ್ತು ಮೀನುಗಾರರು ಅಪಾಯದಿಂದ ಪಾರಾಗಿದ್ದರೂ ಸಹ ಅವರ ದೋಣಿಗಳು ಹಾನಿಗೊಳಗಾಗಿವೆ ಎಂದು ರಾಜ್ಯಸಭಾ ಸದಸ್ಯ ಅನ್ಬುಮಣಿ ರಾಮದಾಸ್ ಅವರು ಟ್ವೀಟ್ ಮಾಡಿದ್ದಾರೆ.

ಗುಂಡಿನ ದಾಳಿಯನ್ನು ಖಂಡಿಸಿರುವ ರಾಮದಾಸ್, ಕೇಂದ್ರವು ಇನ್ನು ಮುಂದೆ ಇಂತಹ ದಾಳಿಯನ್ನು ಸಹಿಸಬಾರದು ಎಂದು ಒತ್ತಾಯಿಸಿದ್ದಾರೆ. ‘ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು, ಶ್ರೀಲಂಕಾಕ್ಕೆ ನೀಡಲಾಗಿರುವ ಕಚ್ಚತೀವು (ದ್ವೀಪ) ವನ್ನು ಹಿಂಪಡೆಯಲು ಕೇಂದ್ರವು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಅವರು ಹೇಳಿದರು.

ಈ ಮಧ್ಯೆ, ಮೀನುಗಾರರನ್ನು ಗುರಿಯಾಗಿಸದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೋರಿ ರಾಮನಾಥಪುರಂ ಸಂಸದ ಕೆ.ನವಾಸ್ ಕನಿ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು