ಗುರುವಾರ , ಮೇ 19, 2022
20 °C

ಶ್ರೀಲಂಕಾದಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ: ಪ್ರತಿಭಟನೆಗೆ ವೈದ್ಯರ ನಿರ್ಧಾರ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಕೊಲಂಬೊ: ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಈಗ ಅತ್ಯಾವಶ್ಯಕ ಔಷಧಿಗಳಿಗೂ ಕೊರತೆ ಉಂಟಾಗಿದೆ. ಬಹುಮುಖ್ಯ ಔಷಧಿಗಳನ್ನು ಪೂರೈಸಲು ವಿಫಲವಾಗಿರುವ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಅಲ್ಲಿನ ವೈದ್ಯರು ರಾಜಧಾನಿ ಕೊಲಂಬೊದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಬುಧವಾರ ಘೋಷಿಸಿದ್ದಾರೆ.

ಇಂಧನ, ವಿದ್ಯುತ್, ಆಹಾರ ಮತ್ತು ಇತರೆ ಅಗತ್ಯ ವಸ್ತುಗಳ ಕೊರತೆಯಿಂದ ಶ್ರೀಲಂಕಾದ ಜನರು ತತ್ತರಿಸುತ್ತಿದ್ದಾರೆ. ಇದೀಗ ಅಗತ್ಯ ಔಷಧಿಗಳೂ ದೊರೆಯದೆ ಸಂಪೂರ್ಣ ಆರೋಗ್ಯ ವ್ಯವಸ್ಥೆ ಕುಸಿದಿದೆ ಎಂದು ವೈದ್ಯರು ಹೇಳಿದ್ದಾರೆ.

‘ನಮ್ಮ ದೇಶದಲ್ಲಿ ವ್ಯಾಪಕ ಆರ್ಥಿಕ ಬಿಕ್ಕಟ್ಟಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. ಸದ್ಯ ನಾವು ಇದಕ್ಕೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ’ಎಂದು ಶಿಕ್ಷಣ ಸಚಿವ ಮತ್ತು ಸಭಾ ನಾಯಕ ದಿನೇಶ್ ಗುಣವರ್ಧನ ತಿಳಿಸಿದ್ದಾರೆ.

'ಗ್ಯಾಸ್, ಇಂಧನ ಮತ್ತು ಸೀಮೆಎಣ್ಣೆ ಎಲ್ಲದಕ್ಕೂ ಸರತಿ ಸಾಲುಗಳಿವೆ. ನಾವು ಜನರ ಕಷ್ಟಗಳನ್ನು ಅರ್ಥಮಾಡಿಕೊಂಡಿದ್ದೇವೆ. ಆದರೆ, ಶಾಂತಿಯನ್ನು ಪುನಃಸ್ಥಾಪಿಸಲು ನಾವು ಪ್ರಜಾಸತ್ತಾತ್ಮಕ ವಿಧಾನಗಳನ್ನು ಬಳಸಬೇಕಾಗಿದೆ" ಎಂದು ಅವರು ಹೇಳಿದ್ದಾರೆ.

ರಾಷ್ಟ್ರವ್ಯಾಪಿ 16,000 ವೈದ್ಯರನ್ನು ಪ್ರತಿನಿಧಿಸುವ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘವು ವೈದ್ಯರು ಶ್ರೀಲಂಕಾದ ರಾಷ್ಟ್ರೀಯ ಆಸ್ಪತ್ರೆಯಲ್ಲಿ ಒಟ್ಟುಗೂಡುತ್ತಾರೆ ಮತ್ತು ಔಷಧಗಳ ಗಂಭೀರ ಕೊರತೆಯ ವಿರುದ್ಧ ಪ್ರತಿಭಟಿಸುತ್ತಾರೆ ಎಂದು ಹೇಳಿದೆ.

ಪ್ರತಿ ವರ್ಷ ದೇಶಾದ್ಯಂತದ ಹತ್ತಾರು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಅಪೇಕ್ಷಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಲಕ ಸಮರರತ್ನ, ಔಷಧಗಳು ಮಾತ್ರವಲ್ಲದೆ ಪರೀಕ್ಷೆಗೆ ಬಳಸುವ ರಾಸಾಯನಿಕಗಳೂ ಸಹ ಕಡಿಮೆಯಾಗುತ್ತಿವೆ ಎಂದು ಹೇಳಿದರು.

‘ಕಿಮೋಥೆರಪಿಯಲ್ಲಿರುವ ರೋಗಿಗಳನ್ನು ನಾವು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕು. ಪ್ರತಿದಿನ ನಾವು ಅವರ ಪರೀಕ್ಷೆ ಮಾಡಬೇಕು’ಎಂದು ಸಮರರತ್ನ ಹೇಳಿದರು.

ಆರ್ಥಿಕ ಬಿಕ್ಕಟ್ಟಿನಿಂದ ಜನರ ಆಕ್ರೋಶ ಭುಗಿಲೆದ್ದ ಬಳಿಕ 26 ಸಚಿವರು ರಾಜೀನಾಮೆ ನೀಡಿ ಸರ್ಕಾರದಿಂದ ಹೊರಬಂದಿದ್ದರು. ಏಪ್ರಿಲ್ 1 ರಂದು ಪ್ರತಿಭಟನೆ ಭುಗಿಲೆದ್ದ ಬಳಿಕ ಮುಂಜಾಗ್ರತಾಕ್ರಮವಾಗಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು, ಮಂಗಳವಾರ ರಾತ್ರಿ ಹಿಂಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು