ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ತುರ್ತು ಸ್ಥಿತಿ ಘೋಷಣೆ: 20ರಂದು ನೂತನ ಅಧ್ಯಕ್ಷರ ಆಯ್ಕೆ

Last Updated 18 ಜುಲೈ 2022, 11:30 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ದೇಶವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ನೂತನ ಅಧ್ಯಕ್ಷರ ಆಯ್ಕೆಗೆ ಇದೇ 20ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ.

ಹಂಗಾಮಿ ಅಧ್ಯಕ್ಷರಾಗಿರುವ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಈ ಬಗ್ಗೆ ಸೋಮವಾರ ಆದೇಶ ಹೊರಡಿಸಿದ್ದಾರೆ. ಜನಾಕ್ರೋಶಕ್ಕೆ ಮಣಿದು ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜಪಕ್ಸ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಈಗ ಚುನಾವಣೆ ನಡೆಯಲಿದೆ.

225 ಸದಸ್ಯ ಬಲದ ಸಂಸತ್ತು ನೂತನ ಅಧ್ಯಕ್ಷರ ಆಯ್ಕೆಗೆ ಇದೇ 20ರಂದು ಸಭೆ ಸೇರಲಿದೆ.ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮಂಗಳವಾರ ಆರಂಭವಾಗಲಿದೆ. ಹೊಸ ಅಧ್ಯಕ್ಷರ ಅಧಿಕಾರವಧಿ ನವೆಂಬರ್ 2024ರವರೆಗೆ ಇರಲಿದೆ.

ತುರ್ತು ಪರಿಸ್ಥಿತಿ ಘೋಷಣೆಯೊಂದಿಗೆ ಭದ್ರತಾ ಪಡೆಗಳಿಗೆ ಬಂಧಿಸುವ, ಜಪ್ತಿ ಮಾಡುವ ಮತ್ತು ಯಾವುದೇ ವ್ಯಕ್ತಿಗೆ ಸೇರಿದ ಸ್ಥಳದಲ್ಲಿ ತಪಾಸಣೆ ನಡೆಸುವ ಮುಕ್ತ ಅಧಿಕಾರ ಸಿಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಸಂಸತ್ ಸದಸ್ಯರಿಗೆ ಬೆದರಿಕೆ ಒಡ್ಡುವವವರ ಮೇಲೆ ಕಣ್ಗಾವಲು ಇಡಬೇಕು ಎಂದು ಸರ್ಕಾರ ಪೊಲೀಸರಿಗೆ ಸೂಚನೆ ನೀಡಿದೆ.

ನೂತನ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ವಿಕ್ರಮಸಿಂಘೆ ಸೇರಿದಂತೆ ಕನಿಷ್ಠ ನಾಲ್ವರು ಕಣದಲ್ಲಿದ್ದಾರೆ.ಆಡಳಿತಾರೂಢಪಕ್ಷ ಎಸ್‌ಎಲ್‌ಪಿಪಿ ಈಗಾಗಲೇ ವಿಕ್ರಮಸಿಂಘೆ ಅವರಿಗೆ ಬೆಂಬಲ ಘೋಷಿಸಿದೆ. ವಿರೋಧಪಕ್ಷದ ನಾಯಕ ಸಜಿತ್‌ ಪ್ರೇಮದಾಸ, ಮಾರ್ಕಿಸ್ಟ್ ಜನತಾ ವಿಮುಕ್ತಿ ಪೆರಮುನಾ (ಜೆವಿಪಿ) ನಾಯಕ ಅರುಣ ಕುಮಾರ ದಿಸ್ಸಾನಾಯಕೆ ಮತ್ತು ಎಸ್ಎಲ್‌ಪಿಪಿಯಿಂದ ಪ್ರತ್ಯೇಕಗೊಂಡಿರುವ ಗುಂಪಿನ ನಾಯಕ ಡುಲ್ಲಾಸ್ ಅಲಹಾಪ್ಪೆರುಮಾ ಅವರು ಸ್ಪರ್ಧೆಯಲ್ಲಿ ಇರುವ ಇತರರು.

ಗೋಟಬಯ ರಾಜೀನಾಮೆ ನಂತರ, ಕಳೆದ ಶುಕ್ರವಾರ ಪ್ರಧಾನಿ, 73 ವರ್ಷದ ರಾನಿಲ್‌ ವಿಕ್ರಮಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ದೇಶದಿಂದ ಪಲಾಯನ ಮಾಡಿರುವ ಗೋಟಬಯ ಸದ್ಯ ಸಿಂಗಪುರದಲ್ಲಿ ಇದ್ದಾರೆ.

‘ಪ್ರಜಾಪ್ರಭುತ್ವ ವಿರೋಧಿ’

ಕೊಲಂಬೊ (ಪಿಟಿಐ): ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ವಿರೋಧಪಕ್ಷಗಳು ಟೀಕಿಸಿವೆ. ಹಂಗಾಮಿ ಅಧ್ಯಕ್ಷರೂ ಆದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿರುವಂತೆ ಈ ರೀತಿಯ ಟೀಕೆಗಳು ವ್ಯಕ್ತವಾಗಿವೆ.

‘ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಶಾಂತಿ ಪ್ರಿಯರಾದ ದೇಶದ ಜನತೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಹೊಂದಿದ್ದಾರೆ. ಪ್ರಜಾಪ್ರಭುತ್ವ ಅಮರ’ ಎಂದು ವಿರೋಧ ಪಕ್ಷದ ನಾಯಕ ಸಜಿತ್‌ ಪ್ರೇಮದಾಸ ಟ್ವೀಟ್‌ ಮಾಡಿದ್ದಾರೆ.

ತಮಿಳು ರಾಷ್ಟ್ರೀಯ ಮೈತ್ರಿಕೂಟದ (ಟಿಎನ್ಎ) ಸಂಸದ ಎಂ.ಎ.ಸುಮನ್‌ತೀರನ್‌ ಅವರು, ‘ಅಧಿಕಾರ ಕಬಳಿಕೆಯು ಶ್ರೀಲಂಕಾದಲ್ಲಿ ಕೆಟ್ಟ ಅಂತ್ಯ ಕಾಣಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT