ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ವಿಶ್ವದ ಅತ್ಯಂತ ಬುದ್ಧಿವಂತ ನಾಯಿ : ಅಧ್ಯಯನ ವರದಿ

Last Updated 9 ಜನವರಿ 2023, 11:35 IST
ಅಕ್ಷರ ಗಾತ್ರ

ಬೆಲ್ಜಿಯನ್ ಮಾಲಿನೋಯಿಸ್ ನಾಯಿ ವಿಶ್ವದ ಅತ್ಯಂತ ಬುದ್ಧಿವಂತ ನಾಯಿ ಎಂದು ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಘೋಷಿಸಿದ್ದಾರೆ. ಈ ನಾಯಿಗಳನ್ನು ಬೆಲ್ಜಿಯನ್ ಶೆಫರ್ಡ್ ಎಂದೂ ಕರೆಯುತ್ತಾರೆ.


ವಿಶ್ವದ ಅತ್ಯಂತ ಬುದ್ಧಿವಂತ ನಾಯಿಯನ್ನು ಗುರುತಿಸುವ ವಿಶಿಷ್ಟ ಸ್ಪರ್ಧೆಯೊಂದು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆಯಿತು. 13 ವಿವಿಧ ತಳಿಗಳ 1,000 ಕ್ಕೂ ಹೆಚ್ಚು ನಾಯಿಗಳು ಸ್ಪರ್ಧೆಯಲ್ಲಿದ್ದು, ಅವುಗಳಿಗೆ ಬುದ್ಧಿವಂತಿಕೆ ಗುರುತಿಸುವ 10 ‌‌ಕೆಲಸ ನೀಡಲಾಗಿತ್ತು. ಸ್ಮಾರ್ಟ್‌ಡಾಗ್ ಬ್ಯಾಟರಿಯನ್ನು ರಚಿಸಿದ ತಜ್ಞರು ಸ್ಪರ್ಧೆಯ ಮೌಲ್ಯಮಾಪನ ಮಾಡಿದರು ಎಂದು ಟೆಲಿಗ್ರಾಫ್ ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ನಾಯಿಯ ಪರಿಶೋಧನಾತ್ಮಕ ನಡವಳಿಕೆ, ಹಠಾತ್ ಪ್ರವೃತ್ತಿ, ಸಾಮಾಜಿಕ ಅರಿವು, ಪ್ರಾದೇಶಿಕ ಸಮಸ್ಯೆ ಬಗೆಹರಿಸುವಿಕೆ, ತಾರ್ಕಿಕತೆ ಮತ್ತು ಅಲ್ಪಾವಧಿಯ ಸ್ಮರಣೆಯನ್ನು ಸ್ಪರ್ಧೆಯಲ್ಲಿ ಪರಿಗಣಿಸಲಾಗಿದೆ ಎಂದು ವರದಿ ತಿಳಿಸಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೆಚ್ಚಿನ ತಳಿಗಳು ತಮ್ಮದೇ ಆದ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೊಂದಿವೆ. ಉದಾಹರಣೆಗೆ, ಲ್ಯಾಬ್ರಡಾರ್ ರಿಟ್ರೈವರ್ ಮಾನವ ಸನ್ನೆಗಳನ್ನು ಗುರುತಿಸುವಲ್ಲಿ ಉತ್ತಮವಾಗಿವೆ. ಆದರೆ ಪ್ರಾದೇಶಿಕ ಸಮಸ್ಯೆ-ಪರಿಹರಿಸುವ ಸಾಮರ್ಥ್ಯ ಕಡಿಮೆಯಿದೆ. ಶೆಟ್ಲ್ಯಾಂಡ್ ಶೀಪ್‌ಡಾಗ್‌ನಂತಹ ಕೆಲವು ತಳಿಗಳು ಬಹುತೇಕ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿವೆ ಎಂದು ತೀರ್ಪುಗಾರರು ಹೇಳಿದ್ದಾರೆ.

ಬೆಲ್ಜಿಯನ್ ಮಾಲಿನೊಯಿಸ್ ಶೆಫರ್ಡ್, ಎಲ್ಲ ಪರೀಕ್ಷೆಗಳಲ್ಲಿಯೂ ಉತ್ತಮ ಪ್ರದರ್ಶನ ತೋರಿ ಬುದ್ಧಿವಂತ ನಾಯಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತೀರ್ಪುಗಾರರು ತಿಳಿಸಿದ್ದಾರೆ.

20-25 ಕೆಜಿ ತೂಕ ಮತ್ತು 60 ಸೆಂಟಿಮೀಟರ್‌ ಎತ್ತರ ಹೊಂದಿರುವ ಈ ನಾಯಿಯ ದರ ಸುಮಾರು ₹70–90 ಸಾವಿರ. ಹೆಸರಿನಂತೆ ಬೆಲ್ಜಿಯಂನಲ್ಲಿ ಹೆಚ್ಚಾಗಿ ಕಂಡುಬರುವ ಈ ತಳಿಯನ್ನು ಅಲ್ಲಿನ ಸೇನೆಯಲ್ಲಿ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಉತ್ತಮ ತರಬೇತಿ ನೀಡಿದ ನಾಯಿ ಸಾಕಲು ಯೋಗ್ಯವಾಗಿದ್ದು, ಕುಟುಂಬ ಸ್ನೇಹಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT