ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿಗಳ ಅಂದಾಜಿಗಿಂತಲೂ ವೇಗವಾಗಿ ಕರಗುತ್ತಿವೆ ಹಿಮನದಿಗಳು

Last Updated 6 ಜನವರಿ 2023, 12:17 IST
ಅಕ್ಷರ ಗಾತ್ರ

ವಾಷಿಂಗ್ಟನ್: ವಿಜ್ಞಾನಿಗಳು ಅಂದಾಜು ಮಾಡಿದ್ದಕ್ಕಿಂತಲೂ ವೇಗವಾಗಿ ದಿನೇ ದಿನೇ ಹಿಮನದಿಗಳ ವ್ಯಾಪ್ತಿ ಕುಗ್ಗುತ್ತಿದ್ದು, ಕ್ರಮೇಣ ಕಣ್ಮರೆಯಾಗುವ ಹಂತವನ್ನು ತಲುಪುತ್ತಿವೆ.

ಪ್ರಸ್ತುತ ಇರುವ ಜಾಗತಿಕ ತಾಪಮಾನ ಬದಲಾವಣೆಯ ವೇಗ, ಬೆಳವಣಿಗೆ ಕ್ರಮವನ್ನು ಆಧರಿಸಿ ಹೇಳುವುದಾದರೆ ಈ ಶತಮಾನದ ಅಂತ್ಯದ ವೇಳೆಗೆ ಮೂರನೇ ಒಂದರಷ್ಟು ಹಿಮನದಿಗಳು ಕರಗುವ ಸಾಧ್ಯತೆಗಳಿವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ವಿಶ್ವದ ರಾಷ್ಟ್ರಗಳು ಅಂತರರಾಷ್ಟ್ರೀಯ ಗುರಿ ಸಾಧನೆ ನಿಟ್ಟಿನಲ್ಲಿ ತಾಪಮಾನ ಬದಲಾವಣೆ ತಡೆಯಲು ಬದ್ಧರಾದರೆ ಹಿಮನದಿಗಳು ಕರಗುವಿಕೆಯನ್ನು ಭಾಗಶಃ ತಡೆಯಬಹುದು. ಆದರೆ, ಹೆಚ್ಚಿನ ವಿಜ್ಞಾನಿಗಳ ಪ್ರಕಾರ, ಇದು ಅಸಾಧ್ಯ. ವಿಶ್ವದಲ್ಲಿ ಹಿಮನದಿಗಳಲ್ಲಿ ಶೇ 50ರಷ್ಟು ಕಣ್ಮರೆಯಾಗಬಹುದು ಎಂದು ಅಧ್ಯಯನ ವರದಿ ಹೇಳಿದೆ.

ತಾಪಮಾನ ಬದಲಾವಣೆಯ ವೇಗ ಇನ್ನಷ್ಟು ಹೆಚ್ಚಿದರೂ 2100ನೇ ವರ್ಷದ ವೇಳೆಗೆ ಶೇ 83ರಷ್ಟು ಹಿಮನದಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ ಎಂದು ಜರ್ನಲ್‌ ಸೈನ್ಸ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯು ಹೇಳಿದೆ.

ಜಾಗತಿಕ ತಾಪಮಾನದ ವಿಭಿನ್ನ ಏರುಗತಿ ಪ್ರಮಾಣಕ್ಕೆ ಅನುಗುಣವಾಗಿ ಎಷ್ಟು ಹಿಮನದಿಗಳು ಅಸ್ತಿತ್ವ ಕಳೆದುಕೊಳ್ಳಬಹುದು, ಎಷ್ಟು ಟನ್ ನೀರ್ಗಲ್ಲು ಕರಗಬಹುದು, ಎಷ್ಟು ಪ್ರಮಾಣದ ನೀರು ಸಮುದ್ರ ಸೇರಬಹುದು, ಸಮುದ್ರದ ಮಟ್ಟ ಎಷ್ಟು ಏರಬಹುದು ಎಂದು ವಿಜ್ಞಾನಿಗಳು ಲೆಕ್ಕಾಚಾರ ಮಾಡಿದ್ದಾರೆ.

ಕೈಗಾರಿಕಾ ಪ್ರಗತಿಯ ‍ಪೂರ್ವಕ್ಕೆ ಹೋಲಿಸಿದರೆ ವಿಶ್ವದಲ್ಲಿ ಈಗ ತಾಪಮಾನ ಏರಿಕೆಯ ಪ್ರಮಾಣ 2.7 ಡಿಗ್ರಿ ಸೆಲ್ಸಿಯಸ್ ಇದೆ. ಇದರ ಪ್ರಕಾರ, 2100ರ ಅಂತ್ಯಕ್ಕೆ ಶೇ 32ರಷ್ಟು ಹಿಮನದಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ಅಂದರೆ, ಇದರರ್ಥ 28.5 ಟ್ರಿಲಿಯನ್ ಟನ್ ನೀರ್ಗಲ್ಲು ಕರಗಲಿದೆ. ಪರಿಣಾಮ, ಸಮುದ್ರದ ಮಟ್ಟವು 4.5 ಇಚ್ಚಿನಷ್ಟು (115 ಮಿಲಿ ಮೀಟರ್) ಹೆಚ್ಚಲಿದೆ. ಸದ್ಯ, ಮಂಜಿನ ಹಾಳೆಗಳ ಕರಗುವಿಕೆಯ ಪರಿಣಾಮ ಸಮುದ್ರದ ವ್ಯಾಪ್ತಿಯು ವಿಸ್ತಾರವಾಗುತ್ತಿದೆ.

‘ಎಷ್ಟು ಪ್ರಮಾಣದ ಹಿಮನದಿಗಳನ್ನು ನಾವು ಕಳೆದುಕೊಳ್ಳುತ್ತೇವೆಯೊ ಗೊತ್ತಿಲ್ಲ. ಆದರೆ, ಎಷ್ಟು ಪ್ರಮಾಣದ ಹಿಮನದಿ ಕಳೆದುಕೊಳ್ಳಬೇಕು ಎಂದು ನಿರ್ಧರಿಸುವ ಸಾಮರ್ಥ್ಯ ನಮಗಿದೆ. ಜಾಗತಿಕವಾಗಿ ತಾಪಮಾನ ಪ್ರಮಾಣದ ಏರುವಿಕೆ ಹಾಗೂ ಇದನ್ನು ತಡೆಯಲು ಕೈಗೊಳ್ಳುವ ಕ್ರಮ ಇದನ್ನು ಅವಲಂಬಿಸಿದೆ‘ ಎಂದು ಅಲಾಸ್ಕಾ ಫೇರ್‌ಬ್ಯಾಂಕ್ಸ್‌ ಯೂನಿವರ್ಸಿಟಿ, ಮತ್ತು ಒಸ್ಲೊ ಯೂನಿವರ್ಸಿಟಿಯ ಹಿಮನದಿ ತಜ್ಞ, ಅಧ್ಯಯನ ವರದಿಯ ಸಹ ಲೇಖಕ ರೆಜೈನ್ ಹಾಕ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT