ಶನಿವಾರ, ಸೆಪ್ಟೆಂಬರ್ 25, 2021
29 °C

ಅಂತರರಾಷ್ಟ್ರೀಯ ಸಮುದಾಯ– ತಾಲಿಬಾನ್‌ ನಡುವೆ ಹೊಂದಾಣಿಕೆ ಅಗತ್ಯ: ವಿಶ್ವಸಂಸ್ಥೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ‘ಅಫ್ಗಾನಿಸ್ತಾನವನ್ನು ಸ್ಥಿರಗೊಳಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯ ಮತ್ತು ತಾಲಿಬಾನ್‌ ಪರಸ್ಪರ ವ್ಯವಹರಿಸುವ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ’ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಘಟಕದ ಮುಖ್ಯಸ್ಥ ಫಿಲಿಪ್‌ ಗ್ರ್ಯಾಂಡಿ ತಿಳಿಸಿದರು.

‘ವಿಶ್ವದ ಮುಂದೆ ಕಠಿಣ ಆಯ್ಕೆಯಿದೆ. ಅಫ್ಗಾನಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಾಗುವ ಅಪಾಯ ಮತ್ತು ತಾಲಿಬಾನ್‌ ಸರ್ಕಾರಕ್ಕೆ ಬೆಂಬಲದ ನೀಡುವ ಗೊಂದಲದ ನಡುವೆ ಅಂತರರಾಷ್ಟ್ರೀಯ ಸಮುದಾಯ ಸಮತೋಲನವನ್ನು ಕಾಯ್ದಿಕೊಳ್ಳಬೇಕು’ ಎಂದು ಅವರು ಅಸೋಸಿಯೇಟೆಟ್‌ ಪ್ರೆಸ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘ಆಗಸ್ಟ್‌ 15ರಂದು ಅಮೆರಿಕ ಬೆಂಬಲಿತ ಅಫ್ಗನ್‌ ಸರ್ಕಾರವನ್ನು ಉರುಳಿಸುವಲ್ಲಿ ತಾಲಿಬಾನ್‌ ಸಫಲವಾಯಿತು. ಈ ಬಳಿಕ ತನ್ನದೇ ಸರ್ಕಾರವನ್ನು ರಚಿಸಲು ಮುಂದಾದ ತಾಲಿಬಾನ್‌, ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸುವುದಾಗಿ ಭರವಸೆ ನೀಡಿತ್ತು. ಆದರೆ, ಇತ್ತೀಚಿಗೆ ತಾಲಿಬಾನ್‌ ಘೋಷಿಸಿರುವ ಮಧ್ಯಂತರ ಸರ್ಕಾರವು ಕೇವಲ ತಾಲಿಬಾನ್‌ ನಾಯಕರನ್ನು ಒಳಗೊಂಡಿದೆ. ಇದಕ್ಕೆ ಅಂತರರಾಷ್ಟ್ರೀಯ ಸಮುದಾಯವು ಟೀಕೆ ವ್ಯಕ್ತಪಡಿಸಿದ್ದು, ಎಲ್ಲರನ್ನು ಒಳಗೊಂಡಿರುವ ಸರ್ಕಾರವನ್ನು ರಚಿಸುವ ತನಕ ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡಲಾಗುವುದಿಲ್ಲ ಎಂದು ಹಲವು ರಾಷ್ಟ್ರಗಳು ಹೇಳಿವೆ’ ಎಂದು ಅವರು ತಿಳಿಸಿದರು.

‘ಆರ್ಥಿಕ ಕುಸಿತವು ಇನ್ನಷ್ಟು ಹಿಂಸೆಯನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಈಗಾಗಲೇ ದುರ್ಬಲವಾಗಿರುವ ಅಫ್ಗಾನಿಸ್ತಾನದ ಆರ್ಥಿಕತೆಯು ಇನ್ನಷ್ಟು ಕುಸಿದರೆ, ನೆರೆರಾಷ್ಟ್ರಗಳು ಮತ್ತು ವಿಶ್ವದಾದ್ಯಂತ ಅದರ ಪರಿಣಾಮ ಉಂಟಾಗಬಹುದು’ ಎಂದು ಅವರು ಎಚ್ಚರಿಕೆ ನೀಡಿದರು.

‘ಈ ಸಂಬಂಧ ತ್ವರಿತ ಕ್ರಮದ ಅಗತ್ಯವಿದೆ. ಇದು ಸರ್ಕಾರಗಳ ಅಭಿವೃದ್ಧಿ ಯೋಜನೆಯಲ್ಲ. ಹಾಗಾಗಿ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಅಫ್ಗಾನಿಸ್ತಾನದ ಸ್ಥಿರತೆಗಾಗಿ ಹೊಂದಾಣಿಕೆಯ ಅಗತ್ಯವಿದೆ. ಅಂತರರಾಷ್ಟ್ರೀಯ ಸಮುದಾಯವು ಸರ್ಕಾರಗಳೊಂದಿಗೆ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ತಾಲಿಬಾನ್‌ ಕೂಡ ಹೊಂದಾಣಿಕೆ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ಕಡಿಮೆ ಕಠಿಣ ನಿಯಮಗಳ ಬಗ್ಗೆ ತಾಲಿಬಾನ್‌ ಸಚಿವರುಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ಬಳಿಕ ಅವರು ಪರಸ್ಪರ ಚರ್ಚೆ ನಡೆಸಿದರು’ ಎಂದು ಅವರು ತಿಳಿಸಿದರು.

ಅಫ್ಗಾನಿಸ್ತಾನದ ಮಾನವೀಯ ಅಗತ್ಯತೆಗಳನ್ನು ಪೂರೈಸಲು ಜಾಗತಿಕ ಬೆಂಬಲವಿದೆ. ಇದಕ್ಕಾಗಿ ವಿಶ್ವಸಂಸ್ಥೆ ಸೋಮವಾರ 1.2 ಶತಕೋಟಿ ಡಾಲರ್ ಸಂಗ್ರಹಿಸಿದೆ.

‘ಚಳಿಗಾಲ ಸಮೀಪಿಸುತ್ತಿದೆ. ಹಾಗಾಗಿ ಜನರಿಗೆ ಆಹಾರ ಮತ್ತು ಆಶ್ರಯ ನೀಡಲು ಮಾನವೀಯ ನೆರವನ್ನು ತ್ವರಿತವಾಗಿ ತಲುಪಿಸಬೇಕು’ ಎಂದು ಗ್ರ್ಯಾಂಡಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು