ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ| ಹತ್ತು ದಿನಗಳ ನಂತರ ಜೀವಂತವಾಗಿ ಪತ್ತೆಯಾದ ಬಾಲಕಿಯ ರಕ್ಷಣೆ

ಶತಮಾನದ ಭೀಕರ ವಿಪತ್ತಿಗೆ ಟರ್ಕಿ, ಸಿರಿಯಾದಲ್ಲಿ 42 ಸಾವಿರ ದಾಟಿದ ಸಾವು
Last Updated 16 ಫೆಬ್ರುವರಿ 2023, 16:08 IST
ಅಕ್ಷರ ಗಾತ್ರ

ಕಹ್ರಾಮನ್ಮರಸ್/ಅಂಟಾಕ್ಯಾ : ಭೂಕಂಪ ಸಂಭವಿಸಿ ಹತ್ತು ದಿನ ಕಳೆದ ನಂತರ ಟರ್ಕಿಯ ಕಹ್ರಾಮನ್ಮರಸ್‌ ಪ್ರಾಂತ್ಯದಲ್ಲಿ ಅಚ್ಚರಿಯ ರೀತಿ ಬದುಕುಳಿದಿದ್ದ 17 ವರ್ಷದ ಬಾಲಕಿಯನ್ನು ಗುರುವಾರ ರಕ್ಷಿಸಲಾಯಿತು.

ದುರಂತ ನಡೆದು 248 ಗಂಟೆಗಳ ಕಾಲ ಆಹಾರ, ನೀರು ಇಲ್ಲದೆ ಅವಶೇಷಗಳಡಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಲಕಿಯನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರ ತಂದರು. ಬಾಲಕಿಗೆ ಮರುಜೀವ ಸಿಕ್ಕಂತಾಯಿತು. ಬಾಲಕಿಗೆ ಚಿನ್ನದ ಬಣ್ಣದ ಬೆಚ್ಚನೆಯ ಕಂಬಳಿ ಹೊದಿಸಿಕೊಂಡು, ಸ್ಟ್ರೆಚರ್‌ನಲ್ಲಿ ಆಂಬ್ಯುಲೆನ್ಸ್‌ಗೆ ಸಾಗಿಸುತ್ತಿದ್ದ ದೃಶ್ಯವನ್ನು ‘ಟಿಆರ್‌ಟಿ ಹೆಬರ್‌’ ಸುದ್ದಿ ವಾಹಿನಿ ಪ್ರಸಾರ ಮಾಡಿದೆ.

ಫೆ.6ರಂದು ಸಂಭವಿಸಿದ ರಿಕ್ಟರ್‌ ಮಾಪಕದ 7.8 ತೀವ್ರತೆಯ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದಲ್ಲಿ ಇದುವರೆಗೆ 42,000ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ. ಪ್ರಬಲ ಕಂಪನದ ನಂತರ ವಿಪತ್ತು ವಲಯದಲ್ಲಿ ಇದುವರೆಗೆ 4,300ಕ್ಕೂ ಹೆಚ್ಚು ಕಂಪನಗಳು ದಾಖಲಾಗಿವೆ ಎಂದು ಟರ್ಕಿಯ ವಿಪತ್ತು ಮತ್ತು ತುರ್ತುಸ್ಥಿತಿ ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಈ ದುರಂತದಲ್ಲಿ ಸಾವಿನ ಸಂಖ್ಯೆ ಟರ್ಕಿಯಲ್ಲಿ 36,187 ಮತ್ತು ಸಿರಿಯಾದಲ್ಲಿ 5,800ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಕಿಯಲ್ಲಿ ಅವಶೇಷಗಳಡಿ ಸಿಲುಕಿ ಬದುಕುಳಿದಿದ್ದ ಹಲವು ಮಂದಿಯನ್ನು ಬುಧವಾರ ರಕ್ಷಿಸಲಾಯಿತು. ಆದರೆ, ಗುರುವಾರ ಮಾತ್ರ ಇಂತಹ ನಿದರ್ಶನಗಳು ಹೆಚ್ಚು ಕಂಡುಬರಲಿಲ್ಲ. ಹಾನಿಯಾದ ಪ್ರದೇಶಗಳಲ್ಲಿ ಶವಗಳು ಇನ್ನೂ ದೊರೆಯುತ್ತಲೇ ಇವೆ.

ಈ ದುರಂತದಲ್ಲಿ ಕಾಣೆಯಾದವರ ಸಂಖ್ಯೆಯನ್ನು ಉಭಯ ದೇಶಗಳ ಅಧಿಕಾರಿಗಳು ಈವರೆಗೆ ಪ್ರಕಟಿಸಿಲ್ಲ. ಕಾಣೆಯಾದವರು ಬದುಕುಳಿದಿರುವ ನೀರಿಕ್ಷೆಯಲ್ಲಿ ಅವರ ಕುಟುಂಬಗಳು ದಿನದೂಡುತ್ತಿವೆ.

ಸೂರು ಕಳೆದುಕೊಂಡು, ತಾತ್ಕಾಲಿಕ ನೆಲೆಗಳನ್ನು ಆಶ್ರಯಿಸಿರುವ ಲಕ್ಷಾಂತರ ಜನರು ರಕ್ತಹೆಪ್ಪುಗಟ್ಟಿಸುವ ಚಳಿಯಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲದೆ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ನೈರ್ಮಲ್ಯದ ಕೊರತೆಯಿಂದಾಗಿ ಸಾಂಕ್ರಾಮಿಕ ರೋಗ–ರುಜಿನಗಳು ಹರಡುವ ಆತಂಕದಲ್ಲಿದ್ದಾರೆ. ಸಂತ್ರಸ್ತರು ಮಾನವೀಯ ನೆರವನ್ನೂ ಎದುರು ನೋಡುತ್ತಿದ್ದಾರೆ.

ತನ್ನ ನಿಯಂತ್ರಿತ ಪ್ರದೇಶದಲ್ಲಿ 1,414 ಜನರು ಮೃತರಾಗಿದ್ದಾರೆ ಎಂದು ಸಿರಿಯಾ ಸರ್ಕಾರ ಹೇಳಿದೆ. ಹೆಚ್ಚಿನ ಸಾವುನೋವು ಸಂಭವಿಸಿರುವ ವಾಯವ್ಯ ಸಿರಿಯಾ ಬಂಡುಕೋರರ ಹಿಡಿತದಲ್ಲಿದೆ. ಅಲ್ಲಿ ಫೆ. 9ರ ನಂತರ ಯಾರೂ ಜೀವಂತವಿರುವುದು ಕಂಡುಬಂದಿಲ್ಲ. ಈಗಾಗಲೇ ಸ್ಥಳಾಂತರಿಸಲಾದ ಬದುಕುಳಿದವರಿಗೆ ಅಗತ್ಯ ನೆರವು ನೀಡಲು ಗಮನ ಹರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶ್ವಸಂಸ್ಥೆಯ 119 ಟ್ರಕ್‌ಗಳು ಪರಿಹಾರ ಸಾಮಗ್ರಿಗಳನ್ನು ಹೊತ್ತು, ಭೂಕಂಪ ಪೀಡಿತ ಸಿರಿಯಾವನ್ನು ಬಾಬ್ ಅಲ್-ಹಾವಾ ಮತ್ತು ಬಾಬ್ ಅಲ್-ಸಲಾಮ್ ಕ್ರಾಸಿಂಗ್‌ಗಳ ಮೂಲಕ ಗುರುವಾರ ತಲುಪಿದವು ಎಂದು ಮಾನವೀಯ ವ್ಯವಹಾರಗಳ ಸಮನ್ವಯದ ವಿಶ್ವಸಂಸ್ಥೆಯ ಕಚೇರಿ ವಕ್ತಾರರು ತಿಳಿಸಿದ್ದಾರೆ.

ಟರ್ಕಿಗೆ ಪರಿಹಾರ ಸಾಮಗ್ರಿ ರವಾನಿಸಿದ ಬೆಂಗಳೂರಿನ ಸಂಸ್ಥೆ

ನವದೆಹಲಿ (ಪಿಟಿಐ): ಬೆಂಗಳೂರಿನ ಆರೋಗ್ಯ ಸೇವಾ ಸಂಸ್ಥೆಯ ಸ್ವಯಂ ಸೇವಕರು, ಅಂತರರಾಷ್ಟ್ರೀಯ ಮಾನವೀಯ ನೆರವು ಸಂಸ್ಥೆ ಮತ್ತು ವನನಮ್ ವೆಂಚರ್ಸ್ ಸಹಯೋಗದಲ್ಲಿ ಬುಧವಾರ 1,000ಕ್ಕೂ ಹೆಚ್ಚು ಕಂಬಳಿ, ಪರಿಹಾರ ಸಾಮಗ್ರಿಗಳನ್ನು ಟರ್ಕಿ ರಾಯಭಾರ ಕಚೇರಿಗೆ ಮತ್ತು ಹಣಕಾಸು ದೇಣಿಗೆಗಳನ್ನು ಸಿರಿಯಾ ರಾಯಭಾರ ಕಚೇರಿಗೆ ಹಸ್ತಾಂತರಿಸಿದರು.

‘ಸಂತ್ರಸ್ತರಿಗೆ ನೆರವಾಗಲು, ಪರಿಹಾರ ಕಾರ್ಯದಲ್ಲಿ ಕೈಜೋಡಿಸುವುದು ತೃಪ್ತಿ ನೀಡಿದೆ. ನಮ್ಮ ಸಣ್ಣ ಸಹಾಯ ಅವರಲ್ಲಿ ಕೆಲವೊಂದಿಷ್ಟು ಜನರಿಗೆ ಅನುಕೂಲವಾಗುವುದೆಂದು ಭಾವಿಸಿದ್ದೇವೆ’ ಎಂದು ಬೆಂಗಳೂರಿನ ಸ್ವಯಂ ಸೇವಕ ಪುನೀತ್ ಟಿ. ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT