ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರ ನೊಬೆಲ್: ಹೆಪಟೈಟಿಸ್‌ ಬೆನ್ನುಹತ್ತಿದ್ದ ವಿಜ್ಞಾನಿಗಳಿಗೆ ಪ್ರಶಸ್ತಿ

Last Updated 5 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಸ್ಟೋಕ್‌ಹೊಮ್‌/ಬರ್ಲಿನ್‌ (ರಾಯಿಟರ್ಸ್‌): ಇತರರಿಂದರಕ್ತ ಪಡೆದ ಜನರಲ್ಲಿ ಪಿತ್ತಜನಕಾಂಗದ ಸೋಂಕು ಕಾಣಿಸಿಕೊಳ್ಳುತ್ತಿರುವುದನ್ನು1960ರ ದಶಕದಲ್ಲಿ ಮೊದಲ ಬಾರಿಗೆ ಹಾರ್ವೆ ಆಲ್ಟರ್‌ ಪತ್ತೆಹಚ್ಚಿದ್ದರು.

ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ(ಎನ್‌ಐಎಚ್‌) ಸೋಂಕು ರೋಗಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು,ರಕ್ತ ವರ್ಗಾವಣೆಯಿಂದ ಪಿತ್ತಜನಕಾಂಗದ ರೋಗ ಹರಡುತ್ತಿರುವುದನ್ನು ಕುರಿತು ಅಧ್ಯಯನ ನಡೆಸಿದ್ದರು.

ಈ ಹೊಸ ಸೋಂಕಿಗೆ ‘ಹೆಪಟೈಟಿಸ್‌ ಎ’ ಅಥವಾ ‘ಹೆಪಟೈಟಿಸ್‌ ಬಿ’ ವೈರಾಣುಗಳು ಕಾರಣವಲ್ಲ ಎಂದು ಆಲ್ಟರ್‌ ಗುರುತಿಸಿದ್ದರು.

ಹೆಪಟೈಟಿಸ್‌ ಬಿ ಸೋಂಕು ಇಲ್ಲದೇ ಇದ್ದರೂ, ಅಂಥ ವ್ಯಕ್ತಿಯ ರಕ್ತದಲ್ಲಿರುವ ಪ್ಲಾಸ್ಮಾ ಕಣಗಳು ಇತರರಿಗೆ ಸೋಂಕು ಹರಡುತ್ತಿರುವುದನ್ನು ಆಲ್ಟರ್‌ ಪತ್ತೆಹಚ್ಚಿದ್ದರು.

ಆಲ್ಟರ್‌ ಅವರ ಅಧ್ಯಯನವನ್ನು ಚಿರಾನ್‌ನಲ್ಲಿರುವ ಔಷಧ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಮೈಕಲ್‌ ಹೌಟನ್ ಮುಂದುವರಿಸಿದ್ದರು.

1980ರ ಮಧ್ಯದಲ್ಲಿ, ಈ ಸೋಂಕು ಇದ್ದ ಚಿಂಪಾಜಿಯೊಂದರ ರಕ್ತದ ಕಣದಲ್ಲಿದ್ದಹೊಸ ವೈರಾಣುವಿನ ತದ್ರೂಪಿ ವೈರಾಣುವನ್ನು ಸೃಷ್ಟಿಸಿದ್ದರು. ‘ಫ್ಲಾವಿವೈರಸ್‌’ ವಿಭಾಗಕ್ಕೆ ಸೇರಿದ ಇದನ್ನು ‘ಹೆಪಟೈಟಿಸ್‌ ಸಿ’ ಎಂದು ಗುರುತಿಸಲಾಯಿತು.

ಸೈಂಟ್‌ ಲೂಯಿಸ್‌ನಲ್ಲಿರುವ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾರ್ಲ್ಸ್‌ ರೈಸ್‌,ಜೆನಿಟಿಕ್‌ ಎಂಜಿನಿಯರಿಂಗ್‌ ಮುಖಾಂತರ ಹೆಪಟೈಟಿಸ್‌ ಸಿ ವೈರಾಣುವನ್ನು ಸೃಷ್ಟಿಸಿ, ಈ ವೈರಾಣುವಿನಿಂದ ಪ್ರತ್ಯೇಕವಾದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಪತ್ತೆಹಚ್ಚಿದ್ದರು.

ಆಲ್ಟರ್‌, ಇನ್ನೂ ಎನ್‌ಐಎಚ್‌ನಲ್ಲೇ ಕಾರ್ಯನಿರ್ವಹಿಸುತ್ತಿದ್ದು,ಹೌಟನ್‌, ಆಲ್ಬರ್ಟ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈಸ್‌, 2018ರವರೆಗೆ ರಾಕ್‌ಫೆಲರ್‌ ವಿಶ್ವವಿದ್ಯಾಲಯದಲ್ಲಿ ‘ಹೆಪಟೈಟಿಸ್‌ ಸಿ’ ಕುರಿತ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಹೆಪಟೈಟಿಸ್‌ ಬಿ ವೈರಾಣು ಪತ್ತೆ ಹಚ್ಚಿದ್ದ ವಿಜ್ಞಾನಿ ಬಿ. ಬ್ಲೂಂಬರ್ಗ್‌ ಅವರಿಗೆ1976ರಲ್ಲಿ ನೊಬೆಲ್‌ ಪ್ರಶಸ್ತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT