ಕಾಬೂಲ್,ಪೆಶಾವರ (ಪಿಟಿಐ/ರಾಯಿಟರ್ಸ್/ಎಎಫ್‌ಪಿ): ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯನ್ನು ತಾಲಿಬಾನ್ ಮುಂದಿನ ವಾರಕ್ಕೆ ಮುಂದೂಡಿದೆ.
ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, ಶನಿವಾರ ಈ ಮಾಹಿತಿ ನೀಡಿದ್ದಾರೆ. ಅಂತರರಾಷ್ಟ್ರೀಯ ಸಮು
ದಾಯವೂ ಒಪ್ಪುವಂತಹ, ಎಲ್ಲರನ್ನೂ ಒಳಗೊಂಡ ವಿಸ್ತೃತ ನೆಲೆಗಟ್ಟಿನ ಸರ್ಕಾರ ರಚನೆಗೆ ತಾಲಿಬಾನ್ ಕಸರತ್ತು ನಡೆಸುತ್ತಿದೆ.
ಸಂಘಟನೆಯ ಸಹಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದರ್ ಮುಂದಾಳತ್ವದಲ್ಲಿ ಹೊಸ ಸರ್ಕಾರವನ್ನು ಶನಿವಾರ ಘೋಷಿಸುವ ನಿರೀಕ್ಷೆಯಿತ್ತು. ಆಗಸ್ಟ್ 15ರಂದು ಕಾಬೂಲ್ ಅನ್ನು ವಶಪಡಿಸಿಕೊಂಡ ಬಳಿಕ, ತಾಲಿಬಾನ್ ಸರ್ಕಾರ ರಚನೆ ಘೋಷಣೆ ಮುಂದೂಡುತ್ತಿರುವುದು ಇದು ಎರಡನೇ ಬಾರಿ.
ವಿಶಾಲ ತಳಹದಿಯ ಸರ್ಕಾರ ರಚಿಸುವ ತಾಲಿಬಾನ್‌ನ ಉದ್ದೇಶದಿಂದ ಸರ್ಕಾರ ರಚನೆ ವಿಳಂಬವಾಗಿದೆ ಎಂದುಸರ್ಕಾರ ರಚನೆ ಕುರಿತು ವಿವಿಧ ಗುಂಪುಗಳೊಂದಿಗೆ ಮಾತುಕತೆ ನಡೆಸಲು ತಾಲಿಬಾನ್ ರಚಿಸಿದ್ದ ಸಮಿತಿಯ ಸದಸ್ಯ ಖಲೀಲ್ ಹಕ್ಕಾನಿ ಹೇಳಿದ್ದಾನೆ.
‘ತಾಲಿಬಾನಿಯರು ತಮ್ಮದೇ ಆದ ಸರ್ಕಾರವನ್ನು ರಚಿಸಲು ಅಡ್ಡಿಯಿಲ್ಲ. ಆದರೆ, ಅವರು ಈಗ ಎಲ್ಲ ಪಕ್ಷಗಳು, ಗುಂಪುಗಳು ಮತ್ತು ಸಮಾಜದ ವಿಭಾಗಗಳಿಗೆ ಸರಿಯಾದ ಪ್ರಾತಿನಿಧ್ಯ ಹೊಂದಿರುವ ಆಡಳಿತ ನೀಡಲು ಗಮನ ಕೇಂದ್ರೀಕರಿಸಿದ್ದಾರೆ’ ಎಂದು ಹೇಳಿದ್ದಾನೆ.
ಅಫ್ಗಾನಿಸ್ತಾನದ ಮಾಜಿ ಪ್ರಧಾನಿ ಮತ್ತು ಜಾಮಿಯತ್ ಎ ಇಸ್ಲಾಮೀ ಅಫ್ಗಾನಿಸ್ತಾನದ ಮುಖ್ಯಸ್ಥ ಗುಲ್ಬುದ್ದೀನ್ ಹೆಕ್ಮತ್ಯಾರ್ ಮತ್ತು ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿಯ ಸಹೋದರ, ತಾಲಿಬಾನ್‌ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಇವ
ರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ನೀಡಲಾಗುವುದು ಎಂದು ತಿಳಿದುಬಂದಿದೆ.
ಪಾಕ್ ಮೇಲೆ ಒತ್ತಡ: ಭಯೋತ್ಪಾದಕ ಸಂಘಟನೆಗಳ ವಿರುದ್ಧ ಹೋರಾಡುವಂತೆ ಪಾಕಿಸ್ತಾನದ ಮೇಲೆ ಅಮೆರಿಕ ಒತ್ತಡ ಹೇರಿದೆ.
ಅಫ್ಗಾನಿಸ್ತಾನವು ತಾಲಿಬಾನ್‌ನ ವಶವಾದ ಬಳಿಕ ಪಾಕ್ ಮೇಲಿನ ಒತ್ತಡವನ್ನು ಅಮೆರಿಕ ಬಿಗಿಗೊಳಿಸಿದೆ ಎಂದು ಸೋರಿಕೆಯಾಗಿರುವ ಅಧಿಕೃತ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಮಧ್ಯೆ,ಅಫ್ಗನ್ ನಾಗರಿಕರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಸೆ.13ರಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟನಿಯೊ ಗುಟೆರಸ್ ಅವರು ಸಭೆ ಕರೆದಿದ್ದಾರೆ.ಸಹಾಯನಿಧಿ ಹೆಚ್ಚಿಸುವ ಸಂಬಂಧ ಚರ್ಚೆ ನಡೆಯಲಿದೆ.
ಪಂಜ್‌ಶಿರ್ ತಾಲಿಬಾನ್ ವಶ?
ತಾಲಿಬಾನ್‌ಗೆ ಸೆಡ್ಡು ಹೊಡೆದಿರುವ ಪಂಜ್‌ಶಿರ್ ಪ್ರಾಂತ್ಯವನ್ನು ತಾಲಿಬಾನ್ ಬಂಡುಕೋರರು ವಶಪಡಿಸಿಕೊಂಡಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತು. ನ್ಯಾಷನಲ್ ರೆಸಿಸ್ಟಂಟ್ ಫ್ರಂಟ್ (ಎನ್‌ಆರ್‌ಎಫ್) ಯೋಧರನ್ನು ತಾಲಿಬಾನ್ ಬಂಡುಕೋರರು ಬಗ್ಗುಬಡಿಸಿದ್ದಾರೆ ಎಂಬ ವಿಚಾರ ಸಂಭ್ರಮಕ್ಕೆ ಕಾರಣವಾಯಿತು. ಕಾಬೂಲ್‌ನಲ್ಲಿ ರಾತ್ರೋರಾತ್ರಿ ಸಂಭ್ರಮಾಚರಣೆ ನಡೆಯಿತು. ಆದರೆ ಪಂಜ್‌ಶಿರ್ ವಶವಾಗಿರುವುದನ್ನು ತಾಲಿಬಾನ್ ಅಧಿಕೃತ ಮೂಲಗಳು ಖಚಿತಪಡಿಸಿಲ್ಲ.
‘ಗಾಳಿಯಲ್ಲಿ ಗುಂಡುಹಾರಿಸುವುದನ್ನು ಸಾಧ್ಯವಾದಷ್ಟೂ ಕೈಬಿಡಿ. ನಿಮ್ಮ ಕೈಯಲ್ಲಿರುವ ಬಂದೂಕುಗಳು ಸಾರ್ವಜನಿಕರ ಆಸ್ತಿ. ಅವುಗಳನ್ನು ವ್ಯರ್ಥ ಮಾಡಲು ಯಾರಿಗೂ ಅಧಿಕಾರವಿಲ್ಲ. ನಾಗರಿಕರಿಗೆ ಬಂದೂಕುಗಳು ಹಾನಿ ಮಾಡುವ ಸಾಧ್ಯತೆಯಿದ್ದು, ಸುಮ್ಮನೆ ಅವುಗಳನ್ನು ಪ್ರಯೋಗಿಸಬೇಡಿ’ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹೀದ್ ಟ್ವೀಟ್ ಮಾಡಿದ್ದಾನೆ.
ತಾಲಿಬಾನ್ ಪಡೆಗಳು ಪಂಜ್‌ಶಿರ್ ಹಾಗೂ ಕಾಪಿಸಾ ಪ್ರಾಂತ್ಯಗಳ ಗಡಿಯಾದ ದರ್ಬಾಂದ್ ಅನ್ನು ಸಮೀಪಿಸಿವೆ. ಆದರೆ ಅವುಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದುಎನ್‌ಆರ್‌ಎಫ್ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಗುಂಡಿನ ದಾಳಿಯಲ್ಲಿ 17 ಸಾವು
ಪಂಜ್‌ಶಿರ್ ಪ್ರಾಂತ್ಯವನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂಬ ಖುಷಿಯಲ್ಲಿಕಾಬೂಲ್‌ನಲ್ಲಿ ಗುಂಡು ಹಾರಿಸುವ ಮೂಲಕ ಸಂಭ್ರಮಾಚರಣೆ ನಡೆದಿದೆ. ಸಂಭ್ರಮಕ್ಕಾಗಿ ಹಾರಿಸಲಾದ ಗುಂಡೇಟಿನಿಂದ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಮೂಲಗಳು ಹೇಳಿವೆ.
ನಂಗರ್‌ಹಾರ್ ಪ್ರಾಂತ್ಯದಲ್ಲಿ ಗುಂಡು ಹಾರಿಸುವ ಮೂಲಕ ನಡೆದ ಸಂಭ್ರಮಾಚರಣೆಯಲ್ಲಿ 14 ಜನ ಗಾಯಗೊಂಡಿದ್ದಾರೆ ಎಂದು ವಿಭಾಗೀಯ ಆಸ್ಪತ್ರೆಯ ವಕ್ತಾರ ಗುಲ್‌ಜಾಆದ್ ಸಂಗರ್ ಹೇಳಿದ್ದಾರೆ.ಕಾಬೂಲ್‌ನಲ್ಲಿ ನಡೆದ ವೈಮಾನಿಕ ಗುಂಡಿನ ದಾಳಿಯು 17 ಜನರನ್ನು ಬಲಿ ತೆಗೆದುಕೊಂಡು, 41 ಜನರನ್ನು ಗಾಯಗೊಳಿಸಿದೆ ಎಂದು ಶಂಷಾದ್ ಸುದ್ದಿ ಸಂಸ್ಥೆ ತಿಳಿಸಿದೆ.ಟೊಲೊ ಸುದ್ದಿ ಸಂಸ್ಥೆ ಸಹ ಇದನ್ನು ಪ್ರಸಾರಮಾಡಿದೆ.
ಪಾಕ್ ಗುಪ್ತಚರ ಮುಖ್ಯಸ್ಥ ಕಾಬೂಲ್‌ಗೆ ದೌಡು
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಮುಖ್ಯಸ್ಥ ಚೀಫ್ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರು ಶನಿವಾರ ಕಾಬೂಲ್‌ಗೆ ದೌಡಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರ ಕಾಬೂಲ್ ಭೇಟಿಯ ಕಾರ್ಯಸೂಚಿ ಏನು ಎಂಬುದು ಅಧಿಕೃತವಾಗಿ ತಿಳಿಯದಿದ್ದರೂ, ಅಫ್ಗನ್ ಸೇನೆಯನ್ನು ಮರುವಿನ್ಯಾಸ ಮಾಡುವುದಕ್ಕಾಗಿ ತಾಲಿಬಾನ್‌ಗೆ ನೆರವು ನೀಡಲು ಬಂದಿದ್ದಾರೆ ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.