ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ ವೈಮಾನಿಕ ದಾಳಿ: ಸಾವಿರಾರು ಮಂದಿ ಥಾಯ್ಲೆಂಡ್‌ನತ್ತ ವಲಸೆ

ಮಿಲಿಟರಿ ದಂಗೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ವೈಮಾನಿಕ ದಾಳಿ
Last Updated 29 ಮಾರ್ಚ್ 2021, 6:24 IST
ಅಕ್ಷರ ಗಾತ್ರ

ಯಾಂಗೂನ್: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಸೇನೆ ನಡೆಸಿದ ವೈಮಾನಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಥಾಯ್ಲೆಂಡ್‌ನತ್ತ ಪಲಾಯನ ಮಾಡುವ ಕರೆನ್ ಜನಾಂಗದವರನ್ನು ನಿಯಂತ್ರಿಸಲು ಥಾಯ್ ಅಧಿಕಾರಿಗಳು ಸೋಮವಾರ ವಾಯವ್ಯ ಗಡಿಯಲ್ಲಿ ಬೀಡುಬಿಟ್ಟಿದ್ದಾರೆ.

ಮ್ಯಾನ್ಮಾರ್ ಮಿಲಿಟರಿ ಯುದ್ಧ ವಿಮಾನಗಳು ಭಾನುವಾರ ತಡರಾತ್ರಿಯಿಂದ ಸೋಮವಾರ ಮುಂಜಾನವರೆಗೆ ಮೂರು ಬಾರಿ ವೈಮಾನಿಕ ದಾಳಿ ನಡೆಸಿವೆ ಎಂದು ಸಂತ್ರಸ್ತ ಕರೆನ್ ಗ್ರಾಮಸ್ಥರಿಗೆ ಔಷಧೋಪಚಾರ ಸೇರಿದಂತೆ ವಿವಿಧ ರೀತಿಯ ಪರಿಹಾರವನ್ನು ಒದಗಿಸುವ ಫ್ರೀ ಬರ್ಮಾ ರೇಂಜರ್ಸ್‌ ಸಂಸ್ಥೆ ತಿಳಿಸಿದೆ.

ಈ ವೈಮಾನಿಕ ದಾಳಿಯಿಂದ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಅದರೆ, ಯಾವುದೇ ಸಾವುನೋವುಗಳಾಗಿಲ್ಲ ಎಂದು ಸಂಸ್ಥೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸಂಭಾವ್ಯ ವಾಯುದಾಳಿಯ ಭಯದಿಂದ ಭಾನುವಾರಅಂದಾಜು 3 ಸಾವಿರ ಮಂದಿ ಎರಡೂ ದೇಶಗಳನ್ನು ವಿಭಜಿಸುವ ನದಿಯನ್ನು ದಾಟಿದ್ದಾರೆ. ಸೆರೆ ಹಿಡಿದಿರುವ ವಿಡಿಯೊವೊಂದರಲ್ಲಿ ಅನೇಕ ಚಿಕ್ಕ ಮಕ್ಕಳು ಸೇರಿದಂತೆ ಗ್ರಾಮಸ್ಥರ ಗುಂಪು ಮ್ಯಾನ್ಮಾರ್‌ ಅರಣ್ಯ ಪ್ರದೇಶದಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳಿವೆ.

ಮ್ಯಾನ್ಮಾರ್‌ನ ಸೇನಾಡಳಿತ ಕರೆನ್ ರಾಜ್ಯದ ಮುಟ್ರಾ ಜಿಲ್ಲೆಯ ಸಾಲ್ವಿನ್ ನದಿಯ ವ್ಯಾಪ್ತಿಯಲ್ಲಿ ಕರೆನ್ ಗೆರಿಲ್ಲಾ ಗುಂಪುಗಳಿದ್ದ ಪ್ರದೇಶದ ಮೇಲೆ ಬಾಂಬ್‌ ದಾಳಿ ನಡೆಸಿವೆ. ಆ ದಾಳಿಯಲ್ಲಿ ಇಬ್ಬರು ಗೆರಿಲ್ಲಾಗಳು ಸಾವನ್ನಪ್ಪಿದ್ದಾರೆ. ಶನಿವಾರದ ದಾಳಿಯಲ್ಲಿ ಇಬ್ಬರು ಗ್ರಾಮಸ್ಥರು ಮೃತಪಟ್ಟಿದ್ದರು.

ಕರೆನ್‌ ಜನರಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ ಕರೆನ್‌ ನ್ಯಾಷನಲ್ ಲಿಬರೇಷನ್ ಆರ್ಮಿ ಹೋರಾಟ ನಡೆಸುತ್ತಿದೆ. ಶನಿವಾರ ಈ ಆರ್ಮಿಯು ಸರ್ಕಾರಿ ಸೇನಾ ಹೊರಠಾಣೆಯೊಂದನ್ನು ಆಕ್ರಮಿಸಿಕೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಈ ವಾಯುದಾಳಿ ನಡೆದಿದ್ದು, ಜನ ಭಯಗೊಂಡಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT