ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌: ಬೂಸ್ಟರ್‌ ಡೋಸ್‌ ನೀಡಿಕೆಗೆ ವೇಗ– ಜಪಾನ್‌ ನಿರ್ಧಾರ

Last Updated 17 ಡಿಸೆಂಬರ್ 2021, 14:18 IST
ಅಕ್ಷರ ಗಾತ್ರ

ಟೋಕಿಯೊ/ಲಂಡನ್: ಜಪಾನ್‌ನಲ್ಲಿಯೂ ಓಮೈಕ್ರಾನ್‌ ತಳಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಕೋವಿಡ್‌ ಲಸಿಕೆಯ ಬೂಸ್ಟರ್‌ ನೀಡುವುದಕ್ಕೆ ವೇಗ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಫುಮಿಯೊ ಕಿಶಿಡಾ ಶುಕ್ರವಾರ ಹೇಳಿದ್ದಾರೆ.

‘ಹಿರಿಯ ನಾಗರಿಕರು ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಪಡೆದು ಏಳು ತಿಂಗಳು ಆಗಿದ್ದರೆ, ಅವರಿಗೆ ಬೂಸ್ಟರ್‌ ನೀಡಲಾಗುವುದು. ಕೋವಿಡ್‌ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ದಾಸ್ತಾನಿಗೂ ಕ್ರಮ ಕೈಗೊಳ್ಳಾಗುವುದು’ ಎಂದು ಹೇಳಿದ್ದಾರೆ.

ಯುರೋಪ್: ಇನ್ನೊಂದೆಡೆ, ಕೊರೊನಾ ವೈರಸ್‌ನ ಓಮೈಕ್ರಾನ್‌ ತಳಿಯ ಸೋಂಕು ತೀವ್ರವಾಗಿ ಪ್ರಸರಣವಾಗುತ್ತಿರುವ ಹಿನ್ನೆಲೆಯಲ್ಲಿ ಯುರೋಪ್‌ನ ಕೆಲ ದೇಶಗಳು ಪ್ರವಾಸದ ಮೇಲೆ ನಿರ್ಬಂಧ ಹೇರಿಕೆ ಸೇರಿದಂತೆ ಹಲವಾರು ಕ್ರಮಗಳಿಗೆ ಮುಂದಾಗಿವೆ.

ವೈರಸ್‌ನ ಓಮೈಕ್ರಾನ್‌ ತಳಿ ಸೋಂಕು ವೇಗವಾಗಿ ಪ್ರಸರಣಗೊಳ್ಳುತ್ತಿರುವುದು ಈ ದೇಶಗಳಲ್ಲಿ ಕ್ರಿಸ್‌ಮಸ್‌ ಆಚರಣೆ ಹಾಗೂ ರಜಾಕಾಲದ ಖುಷಿಗೆ ಆತಂಕ ಎದುರಾಗಿದೆ.

ಬ್ರಿಟನ್‌ನ ಹಣಕಾಸು ಕಾರ್ಯದರ್ಶಿ ರಿಷಿ ಸುನಕ್‌ ಅವರು ಹೋಟೆಲ್‌ಗಳು, ರೆಸ್ಟೋರೆಂಟ್‌ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಓಮೈಕ್ರಾನ್‌ ತಳಿ ಸೋಂಕಿನಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸುವ ಕುರಿತು ಚರ್ಚಸಿದ್ದಾರೆ.

ಕೆನಡಾ: ಮತ್ತಷ್ಟೂ ಬಿಗಿ ಕ್ರಮ

ಟೊರೊಂಟೊ: ಕೆನಡಾದಲ್ಲಿಯೂ ಓಮೈಕ್ರಾನ್‌ ತಳಿ ಸೋಂಕು ವೇಗವಾಗಿ ಪ್ರಸರಣವಾಗುತ್ತಿದೆ. ಹೀಗಾಗಿ ರೆಸ್ಟೋರೆಂಟ್‌ಗಳು, ಮಾಲ್‌ಗಳು ಹಾಗೂ ಮನರಂಜನಾ ತಾಣಗಳು ಒಟ್ಟು ಸಾಮರ್ಥ್ಯದ ಶೇ 50ರಷ್ಟು ಭರ್ತಿಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಕ್ಯೂಬೆಕ್‌ ಪ್ರಾಂತ್ಯದ ಸರ್ಕಾರ ಆದೇಶಿಸಿದೆ.

ಇನ್ನು ಕೆಲವೇ ವಾರಗಳಲ್ಲಿ ಪ್ರಾಂತ್ಯದ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಂದ ಭರ್ತಿಯಾಗಬಹುದು ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಹಲವಾರು ನಿರ್ಬಂಧಗಳನ್ನು ಸರ್ಕಾರ ಘೋಷಿಸಿದೆ.

ಹೊಸ ನಿಯಮಗಳು ಸೋಮವಾರದಿಂದ (ಡಿ.20) ಜಾರಿಗೆ ಬರಲಿವೆ ಎಂದು ಪ್ರಾಂತ್ಯದ ಪ್ರಧಾನಿ ಫ್ರಾಂಕೊಯಿಸ್ ಲೆಗಾಲ್‌ ತಿಳಿಸಿದ್ದಾರೆ.

ಆಸ್ಟ್ರೇಲಿಯಾ: ನ್ಯೂಸೌತ್‌ವೇಲ್ಸ್‌ನಲ್ಲಿ ವ್ಯಕ್ತಿ ಸಾವು

ಸಿಡ್ನಿ: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಆಸ್ಟ್ರೇಲಿಯಾದ ರಾಜ್ಯ ನ್ಯೂಸೌತ್‌ವೇಲ್ಸ್‌ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ ಕೋವಿಡ್‌ನ 2,213 ಹೊಸ ಪ್ರಕರಣಗಳು ವರದಿಯಾಗಿವೆ. ಒಬ್ಬ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದು, 215 ಜನರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಮೂಲಗಳು ಹೇಳಿವೆ.

‘ರಾಜ್ಯದಲ್ಲಿ ಶೇ 93.3ರಷ್ಟು ಜನರು ಲಸಿಕೆ ಪಡೆದಿದ್ದಾರೆ. ಹೀಗಾಗಿ ಮತ್ತೊಮ್ಮೆ ಲಾಕ್‌ಡೌನ್‌ ಹೇರುವುದಿಲ್ಲ’ ಎಂದು ಪ್ರಧಾನಿ ಡೊಮಿನಿಕ್‌ ಪೆರೊಟೆಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT