ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಪ್ರಧಾನಿ ಟ್ರುಡೊ: ಕಾರಣವೇನು?

Last Updated 15 ಫೆಬ್ರುವರಿ 2022, 5:47 IST
ಅಕ್ಷರ ಗಾತ್ರ

ಒಟ್ಟಾವ: ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ನಡೆಯುತ್ತಿರುವ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಶಮನಗೊಳಿಸಲು ಪ್ರಧಾನಿ ಜಸ್ಟಿನ್‌ ಟ್ರುಡೊ ಸೋಮವಾರ ಅತಿ ವಿರಳ ಎನಿಸುವ ಕಾನೂನು ಕ್ರಮ ಕೈಗೊಂಡಿದ್ದಾರೆ. ದೇಶದಲ್ಲಿ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದಾರೆ.

ಎರಡು ವಾರಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ರಾಜಧಾನಿ ಒಟ್ಟಾವ ಸ್ತಬ್ಧಗೊಂಡಿದೆ. ಅಲ್ಲದೇ ಪ್ರತಿಭಟನೆ ಕಾವು ರಾಷ್ಟ್ರವನ್ನು ಆವರಿಸಿದೆ.

ಒಟ್ಟಾವದಲ್ಲಿನ ಟ್ರಕ್‌ಗಳ ದಿಗ್ಬಂಧನ, ಪ್ರತಿಭಟನೆಗಳಿಂದಾಗಿ ಗಡಿ ಪ್ರದೇಶಗಳಾದ ಆಲ್ಬರ್ಟಾ ಮತ್ತು ಮ್ಯಾನಿಟೋಬಾ ಸಂಪೂರ್ಣ ಸ್ತಬ್ಧಗೊಂಡಿದೆ. ಪ್ರತಿಭಟನಾಕಾರರನ್ನು ಚದುರಿಸಲು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಪ್ರತಿಭಟನೆಯಲ್ಲಿ ತೊಡಗಿರುವವರ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಲೂ ಸರ್ಕಾರಕ್ಕೆ ಅವಕಾಶವಿರಲಿದೆ ಎಂದು ಪ್ರಧಾನಿ ಮತ್ತು ಸರ್ಕಾರದ ಸಚಿವರು ತಿಳಿಸಿದ್ದಾರೆ ಎಂದು ‘ದಿ ನ್ಯೂಯಾರ್ಕಟ್‌ ಟೈಮ್ಸ್‌’ ವರದಿ ಮಾಡಿದೆ.

‘ಕಾನೂನುಬಾಹಿರ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಅದಕ್ಕೆ ಅನುಮತಿಯೂ ಇಲ್ಲ’ ಎಂದು ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ತುರ್ತು ಪರಿಸ್ಥಿತಿ ಜಾರಿಯಿಂದಾಗಿ ಸರ್ಕಾರಕ್ಕೆ ಅಲ್ಪಾಧಿಯಲ್ಲಿ ಹೆಚ್ಚಿನ ಅಧಿಕಾರ ದೊರೆಯಲಿದೆ. ಸಾರ್ವಜನಿಕ ಸಭೆಯನ್ನು ನಿಷೇಧಿಸುವ, ನಿರ್ದಿಷ್ಟ ಪ್ರದೇಶಗಳಿಗೆ ಪ್ರಯಾಣ ಮಾಡುವುದನ್ನು ನಿರ್ಬಂಧಿಸುವ, ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಆಯ್ಕೆಗಳು ಸರ್ಕಾರಕ್ಕೆ ಇರಲಿದೆ. ಆದರೆ, ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿಡಲು ಸರ್ಕಾರ ಈ ಕಾನೂನನ್ನು ಬಳಸುವುದಿಲ್ಲ ಎಂದೂ ಟ್ರುಡೋ ಸರ್ಕಾರ ಸ್ಪಷ್ಟಪಡಿಸಿದೆ.

ಕೆನಡಾದಲ್ಲಿ 1988ರಲ್ಲಿ ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಕ್ವಿಬೆಕ್‌ನಲ್ಲಿನ ಭಯೋತ್ಪಾದನಾ ಬಿಕ್ಕಟ್ಟನ್ನು ತಡೆಯಲು ಟ್ರುಡೊ ಅವರ ತಂದೆ, ಪ್ರಧಾನಿ ಪಿಯರೆ ಎಲಿಯಟ್ ಟ್ರುಡೊ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಅದಾದ ನಂತರ, ಎರಡನೇ ಬಾರಿಗೆ ಟ್ರುಡೊ ಅವರೂ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದಾರೆ.

ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಕೆನಡಾ ಮತ್ತು ಅಮೆರಿಕ ಗಡಿಗೆ ದಿಗ್ಬಂಧನ ಬಿದ್ದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೇಶದಾದ್ಯಂತ ಅಸಮಾಧಾನ ವ್ಯಕ್ತವಾಗಿದೆ. ಟ್ರುಡೋ ಸರ್ಕಾರ ಪ್ರತಿಭಟನೆಗಳನ್ನು ತಡೆಯಲು ಆರಂಭದಲ್ಲೇ ಕಾರ್ಯಪ್ರವೃತ್ತವಾಗಬೇಕಾಗಿತ್ತು ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT