ಶನಿವಾರ, ಅಕ್ಟೋಬರ್ 31, 2020
18 °C

ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಖಾತರಿ ನೀಡದ ಡೊನಾಲ್ಡ್‌ ಟ್ರಂಪ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವೇಳೆ ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದನ್ನು ಖಾತರಿಪಡಿಸಲು ಡೊನಾಲ್ಡ್‌ ಟ್ರಂಪ್‌ ಬುಧವಾರ ನಿರಾಕರಿಸಿದ್ದಾರೆ. ಟ್ರಂಪ್‌ ಅವರ ಈ ನಡೆ ಎದುರಾಳಿ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್‌ ಅವರಿಂದ ಹಿಡಿದು, ಸ್ವತಃ ತಮ್ಮ ಪಕ್ಷದವರಿಂದಲೇ ಟೀಕೆಗೆ ಗುರಿಯಾಗಿದೆ.

ಬದಲಾವಣೆ ಏನಾದರೂ ಆದರೆ, ಡೆಮಾಕ್ರಟಿಕ್‌ ಅಭ್ಯರ್ಥಿಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡಲು ತಾವು ಬದ್ಧರಾಗಿದ್ದೀರಾ? ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ ಸರಿ, ಮುಂದೆ ಏನಾಗಲಿದೆ ಎಂಬುದನ್ನು ನಾವು ನೋಡಬೇಕಾಗಿದೆ,’ ಎಂದು ಹೇಳಿದರು.

‘ಮತಪತ್ರಗಳ ಬಗ್ಗೆ ನಾನು ಈ ವರೆಗೆ ಬಹಳ ಬಲವಾಗಿ ಆರೋಪ ಮಾಡುತ್ತಾ ಬಂದಿದ್ದೇನೆ. ಮತಪತ್ರಗಳು ವಿಪತ್ತು ಸೃಷ್ಟಿ ಮಾಡಲಿವೆ. ಒಂದು ವೇಳೆ ಮೇಲ್‌ ಇನ್‌ ಮತದಾನವನ್ನು ರದ್ದು ಮಾಡಿದರೆ, ಅಧಿಕಾರ ವರ್ಗಾವಣೆ ಎಂಬುದೇ ಇರುವುದಿಲ್ಲ. ನಾನೇ ಮುಂದುವರಿಯುತ್ತೇನೆ,’ ಎಂದೂ ಟ್ರಂಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರ ಸುರಕ್ಷತೆಗಾಗಿ ಅಮೆರಿಕದಲ್ಲಿ ಮೇಲ್‌–ಇನ್‌ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದರ ಬಗ್ಗೆ ಟ್ರಂಪ್‌ ಮೊದಲಿನಿಂದಲೂ ಆಕ್ಷೇಪಿಸುತ್ತಲೇ ಬಂದಿದ್ದಾರೆ. ‘ಇದು ಚುನಾವಣಾ ಅಕ್ರಮಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಟ್ರಂಪ್‌,’ ಅವರ ಆರೋಪ.

ಇದಕ್ಕೂ ಮೊದಲು ಮಾತನಾಡಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ರೂತ್‌ ಬ್ಯಾಡರ್‌ ಗಿನ್ಸ್‌ಬರ್ಗ್‌ ಅವರಿಂದ ತೆರವಾಗುವ ಸ್ಥಾನಕ್ಕೆ ಶೀಘ್ರವೇ ನ್ಯಾಯಮೂರ್ತಿಯನ್ನು ನೇಮಕ ಮಾಡಬೇಕು. ಯಾಕೆಂದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವಿವಾದವು ಸುಪ್ರೀಂ ಕೋರ್ಟ್‌ನಲ್ಲೇ ಅಂತ್ಯವಾಗಲಿದೆ. ಒಂದು ವೇಳೆ 9ನೇ ನ್ಯಾಯಮೂರ್ತಿ ಅಧಿಕಾರದಲ್ಲಿ ಇಲ್ಲದೇ ಹೋದರೆ, ಸುಪ್ರೀಂಕೋರ್ಟ್‌ 4–4 ಆಗಿ ಸಮಾನವಾಗಿ ವಿಭಾಗವಾಗುತ್ತದೆ,’ ಎಂದು ಅವರು ಹೇಳಿದ್ದರು.

ಟ್ರಂಪ್‌ ಹೇಳಿಕೆಗೆ ಬೈಡನ್‌ ಏನಂದರು?

ನವೆಂಬರ್ 3 ರ ಮತದಾನಕ್ಕೆ ಮೊದಲೇ ಜನಾಭಿಪ್ರಾಯದಲ್ಲಿ ಸ್ಥಿರ ಮುನ್ನಡೆ ಸಾಧಿಸಿರುವ ಜೊ ಬೈಡೆನ್‌, ಟ್ರಂಪ್‌ ಅವರ ಸದ್ಯದ ಹೇಳಿಕೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

‘ನಾವು ಯಾವ ದೇಶದಲ್ಲಿದ್ದೇವೆ? ನೋಡಿ, ಅವರು ಅತ್ಯಂತ ತರ್ಕ ರಹಿತ ವಿಷಯಗಳನ್ನು ಹೇಳುತ್ತಾರೆ. ನನಗೆ ಏನು ಹೇಳಬೇಕೆಂದು ಗೊತ್ತಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ವಪಕ್ಷೀಯರ ಟೀಕೆ

ಸ್ವತಃ ಟ್ರಂಪ್‌ ಪಕ್ಷದವರೇ ಆದ ಮಿಟ್ ರೊಮ್ನಿ, ‘ಟ್ರಂಪ್‌ ಹೇಳಿಕೆ ಊಹಿಸಲು ಅಸಾಧ್ಯವಾದದ್ದು ಮತ್ತು ಸ್ವೀಕಾರವಲ್ಲದ್ದು. ಶಾಂತಿಯುತ ಅಧಿಕಾರ ಹಸ್ತಾಂತರವು ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ,’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು