ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ: ಸೇನಾ ಹೆಲಿಕಾಪ್ಟರ್‌ ಪತನ, ಲೆಫ್ಟಿನೆಂಟ್‌ ಜನರಲ್‌ ಸೇರಿ 11 ಮಂದಿ ಸಾವು

Last Updated 5 ಮಾರ್ಚ್ 2021, 8:35 IST
ಅಕ್ಷರ ಗಾತ್ರ

ಅಂಕಾರಾ: ಟರ್ಕಿಯ ಪೂರ್ವ ಭಾಗದಲ್ಲಿ ಗುರುವಾರ ಸೇನಾ ಹೆಲಿಕಾಪ್ಟರ್‌ ಪತನವಾಗಿದ್ದು, 11 ಮಂದಿ ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿದೆ.

ಕರಾವಳಿ ಪ್ರದೇಶಗಳಲ್ಲಿ ಬಳಕೆಯಾಗುವ ಕೂಗರ್‌ ರೀತಿಯ ಹೆಲಿಕಾಫ್ಟರ್‌ ತತ್ವಾನ್‌ ಪಟ್ಟಣದ ಸಮೀಪ ಪತನಗೊಂಡಿದೆ. ಕರ್ಡಿಶ್ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಬಿಟ್ಲಿಸ್‌ ಪ್ರಾಂತ್ಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬಿಂಗಾಲ್‌ ಪ್ರದೇಶದಿಂದ ಹಾರಾಟ ಆರಂಭಿಸಿದ್ದ ಹೆಲಿಕಾಪ್ಟರ್‌ ಮಧ್ಯಾಹ್ನ 2:25ಕ್ಕೆ ಸಂಪರ್ಕ ಕಡಿದುಕೊಂಡಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸೇನೆಯ ಲೆಫ್ಟಿನೆಂಟ್‌ ಜನರಲ್‌ ಉಸ್ಮಾನ್‌ ಎರ್ಬಾಸ್‌ ಸಹ ಮೃತಪಟ್ಟಿರುವುದಾಗಿ ವರದಿಯಾಗಿದೆ. ಪತನ ಸ್ಥಳದಲ್ಲಿಯೇ ಒಂಬತ್ತು ಮಂದಿ ಸಾವಿಗೀಡಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

ಹಿಮ ಮತ್ತು ಮಂಜು ಸೇರಿದಂತೆ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಪತನ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದೊಂದು ಅಪಘಾತ, ಆದರೆ ತಕ್ಷಣಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಸಚಿವಾಲಯ ವಿವರಿಸಿದೆ.

ಸ್ಥಳೀಯರು ಹೆಲಿಕಾಪ್ಟರ್‌ ಪತನಗೊಂಡ ಸ್ಥಳಕ್ಕೆ ಧಾವಿಸಿ, ಗಾಯಗೊಂಡಿದ್ದ ಸೇನಾ ಸಿಬ್ಬಂದಿಯನ್ನು ಹಿಮದ ರಾಶಿಯಿಂದ ಮೇಲೆತ್ತಿದ್ದಾರೆ. ಟರ್ಕಿಯ ರಕ್ಷಣಾ ಸಚಿವ ಹುಲುಸಿ ಆಕರ್‌ ಮತ್ತು ಸೇನಾ ಮುಖ್ಯಸ್ಥ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಷೇಧಿತ ಕರ್ಡಿಸ್ಥಾನ್ ವರ್ಕರ್ಸ್‌ ಪಾರ್ಟಿಯ (ಪಿಕೆಕೆ) ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶದಲ್ಲಿಯೇ ಹೆಲಿಕಾಪ್ಟರ್‌ ಪತನವಾಗಿದೆ. 1984ರಿಂದ ಉಗ್ರರು ಮತ್ತು ಸೇನೆಯ ನಡುವಿನ ಘರ್ಷಣೆಯು ಸಾವಿರಾರು ಜನರನ್ನು ಬಲಿ ಪಡೆದಿದೆ.

ಯುರೋಪಿಯನ್‌ ಯೂನಿಯನ್‌ ಮತ್ತು ಅಮೆರಿಕ, ಪಿಕೆಕೆಯನ್ನು ಉಗ್ರ ಸಂಘಟನೆಯಾಗಿ ಪರಿಗಣಿಸಿವೆ. 1997ರಲ್ಲಿ ಉತ್ತರ ಇರಾಕ್‌ ಪ್ರದೇಶದಲ್ಲಿ ಪಿಕೆಕೆ ಉಗ್ರರು ಟರ್ಕಿಯ ಕೂಗರ್‌ ಹೆಲಿಕಾಪ್ಟರ್‌ ಮೇಲೆ ದಾಳಿ ನಡೆಸಿ, ಟರ್ಕಿಯ 11 ಯೋಧರ ಹತ್ಯೆ ಮಾಡಿದ್ದರು.

2017ರಲ್ಲಿ ಇರಾಕ್‌ ಮತ್ತು ಟರ್ಕಿಯ ಗಡಿ ಪ್ರದೇಶದಲ್ಲಿ ಕೂಗರ್ ಹೆಲಿಕಾಪ್ಟರ್‌ ಹಾರಾಟ ಆರಂಭಿಸಿ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಆ ಘಟನೆಯಲ್ಲಿ 13 ಮಂದಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT