ಶನಿವಾರ, ಜನವರಿ 29, 2022
23 °C

ಪಾಕಿಸ್ತಾನ: ಭಾರೀ ಹಿಮಪಾತ– ವಾಹನಗಳಲ್ಲೇ ಸಿಲುಕಿ 21 ಜನರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಲಾಹೋರ್: ಭಾರಿ ಹಿಮಪಾತದಿಂದಾಗಿ ರಸ್ತೆಗಳು ಬಂದ್ ಆಗಿ ವಾಹನಗಳಲ್ಲೇ ಹೆಪ್ಪುಗಟ್ಟಿದ ವಾತಾವರಣದಲ್ಲಿ ಸಿಲುಕಿ ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 21 ಜನರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಜನಪ್ರಿಯ ಗಿರಿಧಾಮ ಮುರ್ರಿಯಲ್ಲಿ ನಡೆದಿದೆ. ಶನಿವಾರ ಅದನ್ನು ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ.

ರಾವಲ್ಪಿಂಡಿ ಜಿಲ್ಲೆಯ ಮುರ್ರಿಗೆ ಸಾವಿರಾರು ವಾಹನಗಳು ಪ್ರವೇಶಿಸಿದ್ದು, ಸದ್ಯ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ರಸ್ತೆಗಳಲ್ಲಿ ಸಿಲುಕಿದ ಪ್ರವಾಸಿಗರು ಅಸಹಾಯಕರಾಗಿದ್ದಾರೆ.

ಸುಮಾರು 1,000 ಕಾರುಗಳು ಗಿರಿಧಾಮದಲ್ಲಿ ಸಿಲುಕಿಕೊಂಡಿವೆ. ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲು ಮತ್ತು ಸಿಲುಕಿರುವ ಪ್ರವಾಸಿಗರಿಗೆ ನೆರವು ನೀಡಲು ಪಂಜಾಬ್ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ವಿಪತ್ತು ರಕ್ಷಣಾದಳ ನೀಡಿದ ವರದಿಯ ಪ್ರಕಾರ, ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ.

ಮುರ್ರಿಗೆ ಹೋಗುವ ರಸ್ತೆಯಲ್ಲಿ ಹಿಮಪಾತದಿಂದ ಪ್ರವಾಸಿಗರ ದುರಂತ ಸಾವಿನ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ಆಘಾತ ವ್ಯಕ್ತಪಡಿಸಿದ್ದಾರೆ.

‘ಭಾರಿ ಹಿಮಪಾತ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಪರಿಶೀಲಿಸದೆ ಜನರಿಗೆ ಅವಕಾಶ ಕೊಟ್ಟು ದುರಂತಕ್ಕೆ ಜಿಲ್ಲಾಡಳಿತ ಕಾರಣವಾಗಿದೆ. ಈ ಕುರಿತಂತೆ ತನಿಖೆಗೆ ಆದೇಶಿಸಲಾಗಿದ್ದು, ಮುಂದೆ ದುರಂತಗಳನ್ನು ತಡೆಗಟ್ಟುವ ದೃಷ್ಟಿಯಿಂದ ಬಲವಾದ ನಿಯಂತ್ರಣವನ್ನು ಜಾರಿಗೊಳಿಸಲಾಗಿದೆ’ ಎಂದು ಖಾನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ರಸ್ತೆಗಳನ್ನು ತೆರವುಗೊಳಿಸಲು ಮತ್ತು ಇನ್ನೂ ಸಿಲುಕಿರುವ ಜನರನ್ನು ರಕ್ಷಿಸಲು ಮಿಲಿಟರಿಯನ್ನು ಸಜ್ಜುಗೊಳಿಸಲಾಗಿದೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಮುರ್ರಿ ‘15-20 ವರ್ಷಗಳ ನಂತರ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದಾರೆ’ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು