ಭಾನುವಾರ, ಸೆಪ್ಟೆಂಬರ್ 19, 2021
23 °C

ಅಮೆರಿಕ: ಪ್ರವಾಹದಲ್ಲಿ ಇಬ್ಬರು ಭಾರತೀಯರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಅಮೆರಿಕದ ನ್ಯೂಜೆರ್ಸಿಯಲ್ಲಿ ಇಡಾ ಚಂಡಮಾರುತದಿಂದ ಉಂಟಾದ ಭಾರಿ ಪ್ರವಾಹದಲ್ಲಿ ಇಬ್ಬರು ಭಾರತೀಯ ಸಂಜಾತರು ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

ಮೃತಪಟ್ಟವರನ್ನು ಮಾಲತಿ ಕಾಂಚೆ (45) ಹಾಗೂ ಧನುಷ್‌ ರೆಡ್ಡಿ (31) ಎಂದು ಗುರುತಿಸಲಾಗಿದೆ.

ನ್ಯೂಜೆರ್ಸಿಯಲ್ಲಿ ಸಾಫ್ಟ್‌ವೇರ್ ಡಿಸೈನರ್ ಆಗಿದ್ದ ಮಾಲತಿ ತಮ್ಮ 15 ವರ್ಷದ ಪುತ್ರಿಯ ಜತೆಗೆ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅವರ ವಾಹನವು ಪ್ರವಾಹದಲ್ಲಿ ಸಿಲುಕಿದೆ. ಮರದ ಕೊಂಬೆಯೊಂದಕ್ಕೆ ತಾಯಿ–ಮಗಳು ಸಿಲುಕಿಕೊಂಡಿದ್ದರು. ಆದರೆ, ಪ್ರವಾಹದಲ್ಲಿ ಮರ ಕೊಚ್ಚಿಹೋಗಿ ಮಾಲತಿ ಸಾವಿಗೀಡಾಗಿದ್ದಾರೆ. ಮಗಳು ಪಾರಾಗಿದ್ದಾಳೆ ಎಂದು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಆರಂಭದಲ್ಲಿ ಅಧಿಕಾರಿಗಳು ಮಾಲತಿ ಅವರನ್ನು ಕಾಣೆಯಾದವರ ಪಟ್ಟಿಗೆ ಸೇರಿಸಿದ್ದರು. ಆದರೆ, ಶುಕ್ರವಾರ ಅವರು ಸಾವಿಗೀಡಾಗಿರುವುದು ದೃಢಪಟ್ಟಿದೆ ಎಂದು ವರದಿ ಹೇಳಿದೆ.

ನ್ಯೂಜೆರ್ಸಿಯ ಸೌತ್‌ಪ್ಲೇನ್ ಫೀಲ್ಡ್‌ನಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿ ಧನುಷ್ ರೆಡ್ಡಿ ಸಾವಿಗೀಡಾಗಿದ್ದಾರೆ. ಪ್ರವಾಹದಲ್ಲಿ ಅವರು ಆಯತಪ್ಪಿ 36 ಇಂಚು ಅಗಲದ ಒಳಚರಂಡಿಯ ಪೈಪ್‌ನೊಳಗೆ ಸಿಲುಕಿಕೊಂಡಿದ್ದರು. ಧನುಷ್ ಅವರ ಶವವು ಒಂದ ಮೈಲಿ ದೂರದ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಮೆರಿಕದಲ್ಲಿ ಆಗಸ್ಟ್ 29ರಿಂದ ಇಡಾ ಚಂಡಮಾರುತ ಬೀಸುತ್ತಿದ್ದು, ಇದುವರೆಗೆ ಒಟ್ಟು 65 ಮಂದಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಹೆಚ್ಚಿನವರು ನ್ಯೂಜೆರ್ಸಿ, ನ್ಯೂಯಾರ್ಕ್ ಮತ್ತು ಲೂಸಿಯಾನ ನಗರಕ್ಕೆ ಸೇರಿದವರು. 2005ರಲ್ಲಿ ಅಮೆರಿಕದಲ್ಲಿ ಬೀಸಿದ ಕತ್ರೀನಾ ಚಂಡಮಾರುತಕ್ಕಿಂತಲೂ ಇಡಾ ಚಂಡಮಾರುತವು ಭೀಕರವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು