ಶುಕ್ರವಾರ, ಜುಲೈ 30, 2021
25 °C

ಬ್ರಿಟನ್ ಹೈಕೋರ್ಟ್‌: ಹಸ್ತಾಂತರ ಪ್ರಶ್ನಿಸಿ ನೀರವ್ ಮೋದಿ ಸಲ್ಲಿಸಿದ್ದ ಅರ್ಜಿ ವಜಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಭಾರತಕ್ಕೆ ಹಸ್ತಾಂತರಿಸುವಂತೆ ಸ್ಥಳೀಯ ಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ, ದೇಶಭ್ರಷ್ಟ ವಜ್ರವ್ಯಾಪಾರಿ ನೀರವ್‌ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್‌ನ ಹೈಕೋರ್ಟ್‌ ವಜಾಗೊಳಿಸಿದೆ.

ಇದರೊಂದಿಗೆ, ತನ್ನ ಹಸ್ತಾಂತರವನ್ನು ತಡೆಯುವ ಸಲುವಾಗಿ ನಡೆಸಿದ ಮೊದಲ ಪ್ರಯತ್ನದಲ್ಲಿ ನೀರವ್ ಮೋದಿ ವಿಫಲವಾದಂತಾಗಿದೆ.

ಬ್ರಿಟನ್‌ನ ಕಾನೂನಿನಡಿ, ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮೌಖಿಕ ಮೇಲ್ಮನವಿ ಸಲ್ಲಿಸಲು ಈಗ ನೀರವ್‌ ಮೋದಿಗೆ ಐದು ದಿನಗಳ ಕಾಲಾವಕಾಶ ಸಿಗಲಿದೆ.

‘ಒಂದು ವೇಳೆ ನೀರವ್‌ ಮೋದಿ ಮೇಲ್ಮನವಿ ಸಲ್ಲಿಸಿದರೆ, ಆ ಅರ್ಜಿಯನ್ನು ಪುರಸ್ಕರಿಸದಂತೆ ಹೈಕೋರ್ಟ್‌ನಲ್ಲಿ ವಾದ ಮಂಡಿಸುವುದಾಗಿ’ ಭಾರತ ಸರ್ಕಾರದ ಪರ ವಾದ ಮಂಡಿಸುತ್ತಿರುವ ಕ್ರೌನ್‌ ಪ್ರಾಸಿಕ್ಯೂಷನ್‌ ಸರ್ವೀಸ್‌ (ಸಿಪಿಎಸ್‌) ಸಂಸ್ಥೆ ಹೇಳಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯ ಫೆಬ್ರುವರಿಯಲ್ಲಿ ಆದೇಶಿಸಿತ್ತು. ನಂತರ, ಅವರ ಹಸ್ತಾಂತರಕ್ಕೆ ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಏಪ್ರಿಲ್‌ನಲ್ಲಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ನೀರವ್‌ ಮೋದಿ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು.

2019ರ ಮಾರ್ಚ್‌ 19ರಂದು ಬಂಧನಕ್ಕೆ ಒಳಗಾಗಿರುವ ನೀರವ್‌ ಮೋದಿಯನ್ನು ಲಂಡನ್‌ನ ವ್ಯಾಂಡ್ಸ್‌ವರ್ಥ್‌ ಜೈಲಿನಲ್ಲಿರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು