ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಉಕ್ರೇನ್‌ನಲ್ಲಿ ಶೆಲ್‌ ದಾಳಿ: ಹೆಚ್ಚಿದ ಯುದ್ಧ ಭೀತಿ

ಸಾವಿರಾರು ಮಂದಿ ಪೂರ್ವ ಉಕ್ರೇನ್‌ನಿಂದ ಸ್ಥಳಾಂತರ
Last Updated 20 ಫೆಬ್ರುವರಿ 2022, 14:35 IST
ಅಕ್ಷರ ಗಾತ್ರ

ಕೀವ್‌: ರಷ್ಯಾ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳೊಂದಿಗೆ ಮಿಲಿಟರಿ ಶಕ್ತಿ ಪ್ರದರ್ಶಿಸಿದ ಬೆನ್ನಲ್ಲೇ ಉಕ್ರೇನ್‌ ಸೈನಿಕರು ಮತ್ತು ರಷ್ಯಾ ಬೆಂಬಲಿತ ಬಂಡುಕೋರರ ನಡುವಿನ ಸಂಪರ್ಕ ರೇಖೆಯ ಉದ್ದಕ್ಕೂ ನೂರಾರು ಫಿರಂಗಿ ಶೆಲ್‌ಗಳ ದಾಳಿ ನಡೆದಿದೆ. ಸಂಘರ್ಷಪೀಡಿತ ಪ್ರದೇಶವು ರಷ್ಯಾದ ಆಕ್ರಮಣಕ್ಕೆ ತುತ್ತಾಗಬಹುದೆಂಬ ಭಯ ಭಾನುವಾರ ಹೆಚ್ಚುತ್ತಿದ್ದಂತೆ ಸಾವಿರಾರು ಜನರು ಪೂರ್ವ ಉಕ್ರೇನ್‌ನಿಂದ ಸ್ಥಳಾಂತರಗೊಂಡಿದ್ದಾರೆ.

ಭಾರಿ ಪ್ರಮಾಣದಲ್ಲಿ ಶೆಲ್‌ ದಾಳಿ ನಡೆದಿರುವುದರಿಂದ ಬಂಡುಕೋರರ ಹಿಡಿತದಲ್ಲಿರುವ ಪೂರ್ವ ಡಾನ್‌ಬಾಸ್‌ ಪ್ರದೇಶದ ಏಳು ಚೆಕ್‌ ಪೋಸ್ಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಉಕ್ರೇನ್‌ ಮಿಲಿಟರಿ ಹೇಳಿದೆ.

ಉಕ್ರೇನ್‌ ಮೇಲೆ ಒತ್ತಡ ಹೆಚ್ಚಿಸಲು ರಷ್ಯಾ ಭಾನುವಾರ ಬೆಲಾರಸ್‌ ಜತೆಗೆ ಜಂಟಿ ಸಮಾರಾಭ್ಯಾಸ ನಡೆಸಿತು. ಉಕ್ರೇನ್‌ ಮೇಲೆ ಆಕ್ರಮಣ ನೆಡೆಸುವ ಭಾಗವಾಗಿಯೇ ರಷ್ಯಾ ಬೆಲಾರಸ್‌ನಲ್ಲಿ 30 ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ನ್ಯಾಟೊ ಆರೋಪಿಸಿದೆ.

ಶನಿವಾರ ಸಂಘರ್ಷ ಪೀಡಿತ ಪ್ರದೇಶದಲ್ಲಿ ಉಕ್ರೇನ್‌ ಸೇನೆಯ ಇಬ್ಬರು ಯೋಧರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು.

ಸುಮಾರು 1,50,000 ಸೈನಿಕರು, ಯುದ್ಧವಿಮಾನಗಳು ಮತ್ತು ಶಸ್ತ್ರಾಸ್ತ್ರಗಳಿಂದ ರಷ್ಯಾ ತನ್ನ ನೆರೆಯ ರಾಷ್ಟ್ರ ಉಕ್ರೇನ್‌ ಅನ್ನುಮೂರು ಕಡೆ ಸುತ್ತುವರಿದು ದಾಳಿ ಮಾಡಲು ಸಜ್ಜಾಗಿದೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳ ನಾಯಕರು ಮತ್ತೆ ಎಚ್ಚರಿಸಿದ್ದಾರೆ.

ಉಕ್ರೇನ್‌ ಆಕ್ರಮಣ ತಡೆಯಲು ಯುರೋಪ್‌ ರಾಷ್ಟ್ರಗಳು ಎಲ್ಲ ರೀತಿಯ ರಾಜತಾಂತ್ರಿಕ ಮಾರ್ಗಗಳನ್ನು ಕೊನೆಯ ಪ್ರಯತ್ನವಾಗಿ ಬಳಸುತ್ತಿವೆ.

ರಷ್ಯಾ ಶನಿವಾರ ಕಪ್ಪು ಸಮುದ್ರದ ಕರಾವಳಿಯಲ್ಲಿ ನೌಕಾ ಸಮರಾಭ್ಯಾಸದ ಜತೆಗೆನೆರೆಯ ಬೆಲಾರಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರ ಸಾಗಿಸುವ ಸಾಮರ್ಥ್ಯದ ಖಂಡಾಂತರ ಮತ್ತು ಕ್ರೂಸ್‌ ಕ್ಷಿಪಣಿಗಳ ಪರೀಕ್ಷೆ ಸಹ ನಡೆಸಿತ್ತು.

ಕಠಿಣ ನಿರ್ಬಂಧದ ಎಚ್ಚರಿಕೆ:ರಷ್ಯಾ ಆಕ್ರಮಣಕ್ಕೆ ನೆಪಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಹಲವು ತಿಂಗಳುಗಳಿಂದ ಆರೋಪಿಸುತ್ತಿರುವ ಅಮೆರಿಕ ಮತ್ತು ಯುರೋಪ್‌ನ ಪ್ರಮುಖ ರಾಷ್ಟ್ರಗಳು ಒಂದು ವೇಳೆ ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿದರೆ ತಕ್ಷಣದ ಕಠಿಣ ನಿರ್ಬಂಧಗಳನ್ನು ಪುಟಿನ್‌ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

ಮಾತುಕತೆ: ಪುಟಿನ್‌ಗೆ ಉಕ್ರೇನ್‌ ಅಧ್ಯಕ್ಷ ಆಹ್ವಾನ

ಪೂರ್ವ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿ ನಾಯಕರು ಮಿಲಿಟರಿ ಪೂರ್ಣ ಸಜ್ಜುಗೊಳಿಸುವಿಕೆಗೆ ಆದೇಶ ನೀಡಿ, ಹೆಚ್ಚಿನ ನಾಗರಿಕರನ್ನು ರಷ್ಯಾಕ್ಕೆ ಕಳುಹಿಸಿದ ಕೆಲವೇ ಗಂಟೆಗಳಲ್ಲಿಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಸಂಧಾನ ಮಾತುಕತೆಗೆ ಪುಟಿನ್‌ಗೆ ಆಹ್ವಾನ ನೀಡಿದ್ದಾರೆ.

ಬಿಕ್ಕಟ್ಟು ಪರಿಹರಿಸಲು ಉಭಯ ನಾಯಕರ ಭೇಟಿಗೆ ಸ್ಥಳ ನಿಗದಿಪಡಿಸುವಂತೆ ಅವರು ಮ್ಯೂನಿಚ್‌ ಭದ್ರತಾ ಸಮ್ಮೇಳನದಲ್ಲಿಪುಟಿನ್ ಅವರಿಗೆ ಕರೆ ನೀಡಿದ್ದಾರೆ. ‘ಶಾಂತಿಯುತ ಇತ್ಯರ್ಥಕ್ಕಾಗಿ ಉಕ್ರೇನ್ ರಾಜತಾಂತ್ರಿಕ ಮಾರ್ಗ ಮಾತ್ರ ಅನುಸರಿಸುವುದನ್ನು ಮುಂದುವರಿಸುತ್ತದೆ’ ಎಂದುಝೆಲೆನ್ಸ್ಕಿ ಹೇಳಿದರು. ಇದಕ್ಕೆ ರಷ್ಯಾ ಕಡೆಯಿಂದ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳ ನಿವಾಸಿಗಳಿಗೆ ಸುಮಾರು 7 ಲಕ್ಷ ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ. ರಷ್ಯಾದ ನಾಗರಿಕರು ಅಳಿವಿನಂಚಿನಲ್ಲಿದ್ದಾರೆ ಎಂಬ ಹೇಳಿಕೆಗಳನ್ನು ಮಿಲಿಟರಿ ಕಾರ್ಯಾಚರಣೆಗೆ ಸಮರ್ಥನೆಯಾಗಿ ಬಳಸಲೂಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಉಕ್ರೇನ್‌ ತೊರೆಯಲು ಕರೆ:ಕೆಲವೇ ದಿನಗಳಲ್ಲಿ ಯುದ್ಧ ಸಂಭವಿಸುವ ಹೊಸ ಸೂಚನೆಗಳು ಗೋಚರಿಸಿದ ಬೆನ್ನಲ್ಲೇ ಜರ್ಮನಿ ಮತ್ತು ಆಸ್ಟ್ರಿಯಾ ದೇಶಗಳು ತಮ್ಮ ಪ್ರಜೆಗಳಿಗೆ ಉಕ್ರೇನ್‌ ತೊರೆಯುವಂತೆ ಸೂಚಿಸಿವೆ.

ರಷ್ಯಾ ಆಕ್ರಮಣದ ಪ್ರಮುಖ ಗುರಿಗಳಾಗಿರುವ ಉಕ್ರೇನ್‌ ರಾಜಧಾನಿ ಕೀವ್‌ ಮತ್ತು ಒಡೆಸಾಗೆ ಜರ್ಮನಿಯ ವಾಯುಯಾನ ಸಂಸ್ಥೆಲುಫ್ಥಾನ್ಸಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.

ಕೀವ್‌ನಲ್ಲಿರುವ ನ್ಯಾಟೊ ಸಂಪರ್ಕ ಕಚೇರಿಯು ತನ್ನ ಸಿಬ್ಬಂದಿಯನ್ನು ಬ್ರಸೆಲ್ಸ್‌ಗೆ ಮತ್ತು ಪಶ್ಚಿಮ ಉಕ್ರೇನ್ ನಗರವಾದ ಎಲ್ವಿವ್‌ಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.

ಆಕ್ರಮಣ ನಡೆದರೆ ಡಾಲರ್‌, ಪೌಂಡ್‌ ಕಟ್‌:ಪುಟಿನ್‌ಗೆ ಬ್ರಿಟನ್‌ ಕಠಿಣ ಎಚ್ಚರಿಕೆ

ಲಂಡನ್‌ (ರಾಯಿಟರ್ಸ್‌): ಉಕ್ರೇನ್ ಆಕ್ರಮಣಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಆದೇಶಿಸಿದರೆ ಯುಎಸ್ ಡಾಲರ್ ಮತ್ತು ಬ್ರಿಟಿಷ್ ಪೌಂಡ್‌ಗಳಲ್ಲಿ ರಷ್ಯಾದ ಕಂಪನಿಗಳು ವ್ಯವಹರಿಸುವುದನ್ನುಅಮೆರಿಕ ಮತ್ತು ಬ್ರಿಟನ್‌ ತಡೆ ಹಿಡಿಯಲಿವೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಮ್ಯೂನಿಚ್‌ ಭದ್ರತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ರಷ್ಯಾ ಅಧ್ಯಕ್ಷರಿಗೆ ಈ ಎಚ್ಚರಿಕೆ ರವಾನಿಸಿದ್ದಾರೆ.

ರಷ್ಯಾದ ಹೆಚ್ಚಿನ ಹಣದ ವಹಿವಾಟು ಲಂಡನ್‌ ಹಣಕಾಸು ಮಾರುಕಟ್ಟೆ ಮೂಲಕ ನಡೆಯುತ್ತದೆ. ರಷ್ಯಾ ಕಂಪನಿಗಳು ಹಣಕಾಸು ಮಾರುಕಟ್ಟೆಗಳಲ್ಲಿ ಬಂಡವಾಳ ಸಂಗ್ರಹಿಸುವುದನ್ನು ನಿರ್ಬಂಧಿಸುವ ಜತೆಗೆ, ರಷ್ಯಾ ಹೊಂದಿರುವ ಕಂಪನಿಗಳು ಮತ್ತು ಆಸ್ತಿಗಳ ಮಾಲೀಕತ್ವವನ್ನು ಬಹಿರಂಗಪಡಿಸಲಾಗುವುದು. ಅಲ್ಲದೇ ರಷ್ಯಾ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಜಾನ್ಸನ್ ಬೆದರಿಕೆ ಹಾಕಿದ್ದಾರೆ.

ಎರಡನೇ ಮಹಾಯುದ್ಧದ ನಂತರ ಯುರೋಪ್ ಅನ್ನು ಭೀಕರ ಸಂಘರ್ಷದಲ್ಲಿ ಮುಳುಗಿಸಲು ರಷ್ಯಾ ಸಿದ್ಧತೆ ನಡೆಸುತ್ತಿದೆ. ಉಕ್ರೇನ್‌ನ ಆಕ್ರಮಣ ಮಾಡಿದರೆ ಮಾಸ್ಕೋ ಜಾಗತಿಕ ಅರ್ಥವ್ಯವಸ್ಥೆಯಿಂದ ಹೊರಗುಳಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಮ್ಯಾಕ್ರನ್‌–ಪುಟಿನ್ ಮಾತುಕತೆ

ಪ್ಯಾರಿಸ್(ಎಎಫ್‌ಪಿ): ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಭಾನುವಾರದೂರವಾಣಿ ಮೂಲಕ ಮಾತುಕತೆ ನಡದಿದೆ.

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ತಡೆಯುವ ಕೊನೆಯ ಪ್ರಯತ್ನದ ಭಾಗವಾಗಿ ಫ್ರೆಂಚ್ ಕಡೆಯಿಂದ ಬೆಳಿಗ್ಗೆ 11ಕ್ಕೆ ಕರೆ ಮಾಡಿ, ಪುಟಿನ್‌ ಜತೆ ಮಾತುಕತೆ ನಡೆಸಲಾಯಿತು ಎಂದು ಫ್ರೆಂಚ್‌ ಅಧ್ಯಕ್ಷರ ಕಚೇರಿ ತಿಳಿಸಿದೆ.

ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ತಾನು ಮಾಡಿದ ಭಾಷಣವನ್ನು ಪುಟಿನ್ ಕಡೆಗೆ ‘ಸಮಾಧಾನಗೊಳಿಸುವ ನೀತಿ’ ಎಂದು ಹೇಳುವುದನ್ನು ನಿಲ್ಲಿಸುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮ್ಯಾಕ್ರನ್‌ ಮನವಿ ಮಾಡಿರುವುದಾಗಿ ಅದು ತಿಳಿಸಿದೆ.

ಅಮೆರಿಕ, ಬ್ರಿಟನ್‌ ಗೂಢಚಾರರ ಮಾಹಿತಿ ನಂಬಲಾಗದು: ರಷ್ಯಾ

ಲಂಡನ್‌ (ರಾಯಿಟರ್ಸ್‌): ಉಕ್ರೇನ್‌ ಬಗ್ಗೆ ಅಮೆರಿಕ ಮತ್ತು ಬ್ರಿಟನ್‌ ಗೂಢಚಾರರು ನೀಡುತ್ತಿರುವ ಮಾಹಿತಿಗಳನ್ನು ನಂಬಲು ಸಾಧ್ಯವಿಲ್ಲ ಎಂದುವಿಶ್ವಸಂಸ್ಥೆಯ ರಷ್ಯಾದ ಮೊದಲ ಉಪ ಕಾಯಂ ಪ್ರತಿನಿಧಿ ಭಾನುವಾರ ಹೇಳಿದ್ದಾರೆ.

ಅಮೆರಿಕ ಇರಾಕ್ ಮೇಲೆ ನಡೆಸಿದ ಆಕ್ರಮಣದ ವೇಳೆ ಅಮೆರಿಕ ಮತ್ತು ಬ್ರಿಟನ್ ಗೂಢಚಾರರು ಹಲವು ಗಂಭೀರ ತಪ್ಪುಗಳನ್ನು ಎಸಗಿರುವುದರಿಂದ ಅವರ ಮೌಲ್ಯಮಾಪನಗಳನ್ನು ನಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

‘ಅವರು ಇರಾಕ್‌ನಲ್ಲಿನ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ನೆಪವಾಗಿಟ್ಟುಕೊಂಡು ಸಾಕಷ್ಟು ಸಂದರ್ಭಗಳಲ್ಲಿ ಇಡೀ ಜಗತ್ತನ್ನು ನಿರಾಸೆಗೊಳಿಸಿದ್ದಾರೆ’ ಎಂದು ಡಿಮಿಟ್ರಿ ಪೊಲಿಯಾನ್ಸ್ಕಿ ಸ್ಕೈ ಸುದ್ದಿ ಸಂಸ್ಥೆಗೆ ತಿಳಿಸಿದರು.

ರಷ್ಯಾದ ಭೂಪ್ರದೇಶದಲ್ಲಿ ರಷ್ಯಾ ಸಮರಾಭ್ಯಾಸ ನಡೆಸಿದೆ ಎಂದು ಯಾರೊಬ್ಬರು ಹೇಳಲು ಪ್ರಯತ್ನಿಸಬಾರದು ಎಂದು ಪೊಲಿಯಾನ್ಸ್ಕಿ ಹೇಳಿದರು.

ಡೊನೆಟ್ಸ್ಕ್‌ ನಗರದಲ್ಲಿ ಹಲವು ಬಾರಿ ಸ್ಫೋಟದ ಸದ್ದು

ಉಕ್ರೇನ್‌ (ರಾಯಿಟರ್ಸ್‌):ಪೂರ್ವ ಉಕ್ರೇನ್‌ನ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಡೊನೆಟ್ಸ್ಕ್ ನಗರದ ಕೇಂದ್ರ ಭಾಗದಲ್ಲಿ ಭಾನುವಾರ ಹಲವು ಬಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ದೊಡ್ಡ ಧ್ವನಿವರ್ಧಕದಲ್ಲಿ ಮನವಿ ಮಾಡುತ್ತಿರುವುದು ಕಂಡುಬಂತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಶಾಂತಿಮಂತ್ರ ಜಪಿಸಲ್ಲ:ಯುರೋಪಿಯನ್‌ ಕೌನ್ಸಿಲ್‌

ಮ್ಯೂನಿಚ್‌, ಜರ್ಮನಿ (ಎಎಫ್‌ಪಿ): ಉಕ್ರೇನ್‌ ಗಡಿಯುದ್ದಕ್ಕೂ ರಷ್ಯಾ ಉದ್ವಿಗ್ನ ಪರಿಸ್ಥಿತಿ ನಿರ್ಮಿಸುತ್ತಿರುವಾಗ ನಾವು ಶಾಂತಿಮಂತ್ರ ಜಪಿಸುತ್ತಾ ಸುಮ್ಮನೆ ಕೂರುವುದಿಲ್ಲ ಎಂದು ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ ಚಾರ್ಲ್ಸ್‌ ಮಿಷೆಲ್‌ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ರಷ್ಯಾ ಮಾತುಕತೆಗೆ ಬಯಸುತ್ತಿದೆಯೇ ಎನ್ನುವ ದೊಡ್ಡ ಪ್ರಶ್ನೆ ಬಾಕಿ ಉಳಿದಿದೆ. ಅದೇ ಏನೆ ಇರಲಿ, ರಷ್ಯಾ ಕ್ಷಿಪಣಿ ಪರೀಕ್ಷೆ ಮತ್ತು ಮಿಲಿಟರಿ ಜಮಾವಣೆಯನ್ನು ಮುಂದುವರಿಸುತ್ತಿರುವಾಗ ನಾವು ನಾವು ಶಾಂತಿಮಂತ್ರ ಜಪಿಸುತ್ತಾ ಕೂರುವುದಿಲ್ಲ ಎಂದು ಮಿಷೆಲ್‌ ಮ್ಯುನಿಚ್‌ ಭದ್ರತಾ ಸಮ್ಮೇಳನದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT