ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ಪ್ರಧಾನಿ ಚುನಾವಣೆ: ಸುನಕ್‌– ಟ್ರಸ್‌ ಮಧ್ಯೆ ನೇರ ಹಣಾಹಣಿ

Last Updated 26 ಜುಲೈ 2022, 13:29 IST
ಅಕ್ಷರ ಗಾತ್ರ

ಲಂಡನ್‌:ಬ್ರಿಟನ್ ಪ್ರಧಾನಿ ಅಭ್ಯರ್ಥಿ ಸ್ಥಾನದ ಅಂತಿಮ ಸ್ಪರ್ಧಿಗಳಾಗಿ ನೇರ ಹಣಾಹಣಿ ನಡೆಸುತ್ತಿರುವ ಮಾಜಿ ಚಾನ್ಸಲರ್ ರಿಷಿ ಸುನಕ್ ಮತ್ತು ವಿದೇಶಾಂಗ ಸಚಿವೆ ಲಿಜ್ ಟ್ರಸ್ ಅವರು ತಮ್ಮ ಆರ್ಥಿಕ ನೀತಿಗಳು ಮತ್ತು ತೆರಿಗೆ ಯೋಜನೆಗಳ ಬಗ್ಗೆ ಮೊದಲ ಟಿ.ವಿ ಚರ್ಚೆಯಲ್ಲಿ ಬಿರುಸಿನ ಪೈಪೋಟಿ ನಡೆಸಿದರೂ ಇದರಲ್ಲಿ ಯಾರು ನಿಶ್ಚಿತ ಗೆಲುವು ಸಾಧಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಈ ಇಬ್ಬರೂ ಮಂಗಳವಾರ ಚುನಾವಣಾ ಪ್ರಚಾರ ತೀವ್ರಗೊಳಿಸಿದರು.

ಸೋಮವಾರ ರಾತ್ರಿ ಬಿಬಿಸಿಯಲ್ಲಿ ನಡೆದಮುಖಾಮುಖಿ ಚರ್ಚೆಯಲ್ಲಿ ಅತ್ಯುತ್ತಮವಾಗಿ ವಿಷಯ ಮಂಡಿಸಿದ ಸುನಕ್ (ಶೇ 39) ತಮ್ಮ ಎದುರಾಳಿ ಟ್ರಸ್‌ಗಿಂತ (ಶೇ 38) ಮುನ್ನಡೆ ಸಾಧಿಸಿದ್ದಾರೆ.ಆದರೆ, ಕನ್ಸರ್ವೇಟಿವ್ ಪಕ್ಷದ ಶೇ 47ರಷ್ಟು ಮತದಾರರು ಇದನ್ನು ಪ್ರಶ್ನಿಸಿದ್ದು, ವಿದೇಶಾಂಗ ಸಚಿವೆ ಟ್ರಸ್‌ ಅವರು ಉತ್ತಮ ಅಭ್ಯರ್ಥಿ ಎನ್ನುವುದನ್ನು ಪ್ರದರ್ಶಿಸಿದರು ಎಂದು ಹೇಳಿದರೆ, ಶೇ 38ರಷ್ಟು ಮತದಾರರು ಮಾತ್ರಸುನಕ್‌ ಅವರು ಸಮರ್ಥ ಅಭ್ಯರ್ಥಿ ಎಂದಿದ್ದಾರೆ.

ಒಟ್ಟಾರೆ 1,032 ಬ್ರಿಟಿಷ್ ವಯಸ್ಕರನ್ನು ನಡೆಸಿರುವ ಸಮೀಕ್ಷೆಯ ಆಧಾರದ ಪ್ರಕಾರ, ಮತದಾರರು ಸುನಕ್ ಮತ್ತು ಟ್ರಸ್ ನಡುವೆ ಯಾರು ಸಮರ್ಥರೆನ್ನುವುದನ್ನು ನಿರ್ಧರಿಸಲಾಗದು. ಕೇವಲ ಒಂದು ಅಂಕದ ಅಂತರದ ವ್ಯತ್ಯಾಸ ಈ ಇಬ್ಬರ ನಡುವೆ ಇದೆ.ಚುನಾವಣೆಯಲ್ಲಿ ಯಾರು ಬೇಕಾದರೂ ಹೊರ ಬೀಳಬಹುದು ಎನ್ನುವುದನ್ನು ಇದು ಪ್ರತಿಬಿಂಬಿಸುತ್ತಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ವಿರೋಧ ಪಕ್ಷದ ಶೇ 41 ಮತದಾರರು42ರ ಹರೆಯದ ಸುನಕ್ ಉತ್ತಮ ಅಭ್ಯರ್ಥಿ ಎಂದರೆ, ಶೇ 30ರಷ್ಟು ಮತದಾರರು ಮಾತ್ರ 47ರ ವಯಸ್ಸಿನ ಲಿಜ್‌ ಟ್ರಸ್ ಪರ ಒಲವು ವ್ಯಕ್ತಪಡಿಸಿರುವುದುಸಮೀಕ್ಷೆಯ ಅಂಕಿಅಂಶಗಳು ತೋರಿಸುತ್ತಿವೆ.

ಸಮೀಕ್ಷೆಯಲ್ಲಿ ಶೇ 43ರಷ್ಟು ಕನ್ಸರ್ವೇಟಿವ್‌ಗಳು ಸುನಕ್ ಆಯ್ಕೆ ಪರವಾಗಿದ್ದರೆ, ಶೇ 41ರಷ್ಟು ಕನ್ಸರ್ವೇಟಿವ್‌ಗಳು ಲಿಜ್‌ ಟ್ರಸ್ ಆಯ್ಕೆಗೆ ಒಲವು ತೋರಿಸಿದ್ದಾರೆ. ಶೇ 12ರಷ್ಟು ಕನ್ಸರ್ವೇಟಿವ್‌ಗಳಿಗೆ ಯಾರನ್ನು ಆಯ್ಕೆ ಮಾಡಬೇಕೆನ್ನುವುದು ತೋಚಿಲ್ಲ ಅಥವಾ ದೂರ ಉಳಿದಿದ್ದಾರೆ.

ಸುನಕ್‌ ಅವರು, ಟ್ರಸ್ ಅವರ ತೆರಿಗೆ ಕಡಿತ ಯೋಜನೆಯು 2024ರ ವೇಳೆಗೆ ಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಲಕ್ಷಾಂತರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತ್ಯುತ್ತರವಾಗಿ ಟ್ರಸ್‌ ಅವರು, ‘ಬೇರೆ ಯಾವುದೇ ದೇಶವು ತೆರಿಗೆಗಳನ್ನು ವಿಧಿಸುತ್ತಿಲ್ಲ. ಸುನಕ್ ಅವರು ದೇಶದ ಬೆಳವಣಿಗೆಗೆ ಯಾವುದೇ ಯೋಜನೆ ಹೊಂದಿಲ್ಲ. ಸುನಕ್‌ 70 ವರ್ಷಗಳಲ್ಲಿ ಅತಿ ಹೆಚ್ಚು ತೆರಿಗೆಗಳನ್ನು ಸಂಗ್ರಹಿಸಿದ್ದೇವೆ. ಈಗ ನಾವು ಆರ್ಥಿಕ ಹಿಂಜರಿತದ ಆತಂಕದಲ್ಲಿದ್ದೇವೆ ಎಂದಿದ್ದಾರೆ. ಆದರೆ, ವಾಸ್ತವಾಂಶ ಅಂಕಿ ಅಂಶಗಳಲ್ಲಿ ಇದೆ’ ಎಂದು ಸಮರ್ಥನೆ ನೀಡಿದರು.

‘ತಾನು ಟ್ರಸ್ ಅವರನ್ನು ಮೆಚ್ಚಿದ್ದೇನೆ. ಅವರು ಮತ್ತು ನಾನು ಅಂತಿಮವಾಗಿ ಒಂದೇ ತಂಡದವರು’ ಎಂದು ಸುನಕ್ ಚರ್ಚೆಯ ವೇಳೆ ಹೇಳಿದರು. ಟ್ರಸ್‌ ಅವರು ‘ನಾನು ಸಹಸುನಕ್ ಅವರನ್ನು ಮೆಚ್ಚುತ್ತೇನೆ.ಒಂದು ವೇಳೆ ನಾನು ಪ್ರಧಾನಿಯಾದರೆ ನನ್ನ ತಂಡಕ್ಕೆ ಅವರನ್ನೂ ಸೇರಿಸಿಕೊಳ್ಳುತ್ತೇನೆ’ ಎಂದು ಹೇಳಿದರು.

ಹೊಸ ನಾಯಕರು ಟೋರಿ ಪಕ್ಷದ ಅಂದಾಜು 1.80 ಲಕ್ಷ ಸದಸ್ಯರಿಂದ ಆಯ್ಕೆಯಾಗಲಿದ್ದಾರೆ. ಮುಂದಿನ ತಿಂಗಳ ಆರಂಭದಿಂದ ಅಂಚೆ ಮತದಾನ ಆರಂಭವಾಗುವ ಮೊದಲು ಮತದಾರರ ಮನಸು ಗೆಲ್ಲಲು ಇಬ್ಬರೂ ಕಸರತ್ತು ನಡೆಸುತ್ತಿದ್ದಾರೆ. ಸೆಪ್ಟೆಂಬರ್ 2ರಂದು ಸಂಜೆ ಮತದಾನ ಕೊನೆಯಾಗಲಿದೆ. ಸೆ.5ರಂದು ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT