ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ರಾಜಧಾನಿ ಕೀವ್ (Kyiv) ಅಥವಾ ಕೀಯೆವ್ (Kiev)-ಯಾವುದು ಸರಿ, ಯಾಕೆ?

Last Updated 28 ಫೆಬ್ರುವರಿ 2022, 11:41 IST
ಅಕ್ಷರ ಗಾತ್ರ

ಉಕ್ರೇನ್‌ ಮತ್ತು ರಷ್ಯಾ ಸಂಘರ್ಷ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಐರೋಪ್ಯ ಒಕ್ಕೂಟ ರಾಷ್ಟ್ರಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಬಲ ನೀಡಲು ನಿರ್ಧರಿಸಿವೆ. ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ವಶಪಡಿಸಿಕೊಳ್ಳಲು ರಷ್ಯಾ ಎಲ್ಲ ಮಾರ್ಗಗಳಲ್ಲೂ ಪ್ರಯತ್ನ ನಡೆಸುತ್ತಿದ್ದು, ಜಾಗತಿಕ ಮಟ್ಟದಲ್ಲಿ 'ಕೀವ್' ಪರಿಸ್ಥಿತಿಯ ಬಗ್ಗೆ ಸುದ್ದಿಯಾಗುತ್ತಿದೆ. ಈ ನಡುವೆ ಕೀವ್‌ ಉಚ್ಚಾರಣೆಗೆ ಸಂಬಂಧಿಸಿದಂತೆಯೂ ಚರ್ಚೆ ನಡೆದಿದೆ.

ವರದಿಗಾರರು ಮತ್ತು ವಿಶ್ಲೇಷಕರು ರಾಜಧಾನಿ ಕೀವ್‌ ಹೆಸರನ್ನು ಭಿನ್ನ ರೀತಿಯಲ್ಲಿ ಉಚ್ಚರಿಸುತ್ತಿದ್ದಾರೆ. ಕೀವ್ (Kyiv) ಮತ್ತು ಕೀಯೆವ್ (Kiev) ಪ್ರಸ್ತುತ ಬಳಕೆಯಾಗುತ್ತಿರುವ ಪದಗಳು.

ಅಕ್ಷರ ಮತ್ತು ಉಚ್ಚರಣೆ ಎರಡರಲ್ಲೂ ವ್ಯತ್ಯಾಸ ಕಂಡು ಬರುತ್ತಿರುವುದಕ್ಕೆ ತಿಳಿವಳಿಕೆಯ ಕೊರತೆ ಕಾರಣವಲ್ಲ, ಉಭಯ ರಾಷ್ಟ್ರಗಳ ನಡುವಿನ ಕದನಕ್ಕೂ ರಾಜಧಾನಿಯ ಹೆಸರಿಗೂ ಐತಿಹಾಸಿಕ ಸಂಬಂಧ ಇರುವುದಾಗಿ ವರದಿಯಾಗಿದೆ.

ಕೀವ್ ಅಥವಾ ಕೀಯೆವ್ ಯಾವುದು ಸರಿ?

ಉಕ್ರೇನ್‌ ಜನರು ತಮ್ಮ ರಾಜಧಾನಿಯನ್ನು ಕೀವ್ (Kyiv) ಎಂದು ಕರೆದರೆ, ರಷ್ಯಾ ಅದನ್ನು ಕೀಯೆವ್ (Kiev) ಎಂದು ಕರೆಯುತ್ತಿದೆ. ಪ್ರಾಚೀನ ಪೂರ್ವ ಸ್ಲಾವಿಕ್‌ ಜನಪದ ಕಥೆಯ ಪ್ರಕಾರ, ಕೀ, ಶೆಕ್‌ ಹಾಗೂ ಖಾರಿವ್‌ ಹೆಸರಿನ ಮೂವರು ಸೋದರರು ಕೀವ್‌ ನಗರವನ್ನು ಸ್ಥಾಪಿಸಿದ್ದರು. ಸಂಸ್ಥಾಪಕ 'ಕೀ' ಹೆಸರಿನಿಂದಲೇ ನಗರಕ್ಕೆ ಕೀವ್‌ ಹೆಸರು ಬಂದಿದೆ.

1991ರಲ್ಲಿ ಉಕ್ರೇನ್‌ ಸ್ವತಂತ್ರ ರಾಷ್ಟ್ರವಾಗುವುದಕ್ಕೂ ಮುನ್ನ ಸೋವಿಯತ್‌ ಒಕ್ಕೂಟದ (ಯುಎಸ್‌ಎಸ್‌ಆರ್‌) ಭಾಗವಾಗಿತ್ತು. ಸೋವಿಯತ್‌ ಒಕ್ಕೂಟದ ಆಡಳಿತ ಅವಧಿಯಲ್ಲಿ ಉಕ್ರೇನ್‌ ರಾಜಧಾನಿಯನ್ನು ಕೀಯೆವ್‌ ಎಂದು ಕರೆಯಲಾಗುತ್ತಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಕೀಯೆವ್ ಎಂದೇ ಗುರುತಿಸಲಾಗಿತ್ತು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು, ಮುದ್ರಣಕಾರರು, ವಿಮಾನ ನಿಲ್ದಾಣಗಳು ಹಾಗೂ ಭೌಗೋಳಿಕ ಅರ್ಥ ವಿವರಣೆಗಳಲ್ಲಿ ರಾಜಧಾನಿ ಹೆಸರಿನ ಉಚ್ಚಾರಣೆ ಮತ್ತು ಅಕ್ಷರಗಳನ್ನು ಉಕ್ರೇನ್‌ ರೀತಿಗೆ ತಕ್ಕಂತೆ ಬದಲಿಸಲಾಗಿದೆ.

ಸಿರಿಲಿಕ್‌ ಲಿಪಿಯಿಂದ ಲ್ಯಾಟಿನ್‌ಗೆ

ಯುಎಸ್‌ಎಸ್‌ಆರ್‌ನಿಂದ ಉಕ್ರೇನ್‌ ಸ್ವತಂತ್ರ ಪಡೆದ ನಂತರದಲ್ಲಿ ಸ್ಥಳಗಳ ಹೆಸರು ಬದಲಾವಣೆಯ ಮಾರ್ಗಸೂಚಿಗೆ ಸಂಬಂಧಿಸಿದಂತೆ ಹಲವು ನಿಬಂಧನೆಗಳನ್ನು ಜಾರಿಗೆ ತರಲಾಯಿತು. ಆ ಪ್ರಕಾರವಾಗಿ ಸಿರಿಲಿಕ್‌ ಲಿಪಿಯಲ್ಲಿದ್ದ ಹೆಸರುಗಳನ್ನು ಲ್ಯಾಟಿನ್‌ ಲಿಪಿಗೆ ಲಿಪ್ಯಂತರ ಮಾಡಲಾಯಿತು. ಅನಂತರದಲ್ಲಿ ಕೀಯೆವ್‌ ಹೆಸರು ಕೀವ್‌ ಎಂದು ಅಧಿಕೃತವಾಗಿ ಬದಲಾಯಿತು.

ಉಕ್ರೇನ್‌ನಲ್ಲಿ ರಾಜಧಾನಿಯನ್ನು ಕೀವ್‌ ಎಂದೇ ಕರೆಯುತ್ತಿದ್ದರೂ ವಿದೇಶಿ ಮಾಧ್ಯಮಗಳು ಹಳೆಯ 'ಕೀಯೆವ್‌' ಹೆಸರನ್ನೇ ಬಳಸುತ್ತಿವೆ.

ರಷ್ಯಾ ಶೈಲಿಯ ಉಚ್ಚರಣೆ ಮತ್ತು ಅಕ್ಷರಗಳಲ್ಲಿರುವ ಸ್ಥಳಗಳ ಹೆಸರುಗಳನ್ನು ಉಕ್ರೇನ್‌ ಶೈಲಿಗೆ ಬದಲಿಸಿರುವುದನ್ನು ಪ್ರಚುರ ಪಡಿಸಲು 2018ರಲ್ಲಿ ಉಕ್ರೇನ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯವು #CorrectUA (ಕರೆಕ್ಟ್ ಯುಎ) ಅಭಿಯಾನ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT