ಭಾನುವಾರ, ಜೂನ್ 26, 2022
22 °C
ಡಾನ್‌ಬಾಸ್‌ ವಶಕ್ಕೆ ಪಡೆಯಲು ದಾಳಿ ತೀವ್ರಗೊಳಿಸಿದ ರಷ್ಯಾ

ಉಕ್ರೇನ್‌ ಮತ್ತೊಂದು ನಗರ ರಷ್ಯಾ ವಶಕ್ಕೆ

ಎಪಿ/ರಾಯಿಟರ್ಸ್‌/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌: ಉಕ್ರೇನ್‌ ಮೇಲೆ ಮೂರು ತಿಂಗಳಿನಿಂದ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ಪಡೆಗಳು, ಉಕ್ರೇನ್‌ ಪೂರ್ವದಲ್ಲಿನ ಮತ್ತೊಂದು ನಗರ ಲೈಮೆನ್‌ ವಶಪಡಿಸಿಕೊಂಡಿವೆ. 

ಡೊನೆಟ್‌ಸ್ಕ್ ಪೀಪಲ್ಸ್‌ ರಿಪಬ್ಲಿಕ್‌ ಮತ್ತು ರಷ್ಯಾ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಪ್ರಮುಖ ಆಯಕಟ್ಟಿನ ನಗರವನ್ನು ಉಕ್ರೇನ್‌ ಹಿಡಿತದಿಂದ ವಿಮೋಚನೆಗೊಳಿಸಲಾಗಿದೆ ಎಂದು ರಷ್ಯಾ ಸೇನೆ ಶನಿವಾರ ಹೇಳಿದೆ.

ಡಾನ್‌ಬಾಸ್‌ ವಶಕ್ಕೆ ಲುಹಾನ್‌ಸ್ಕ್‌ನ ಸೆವೆರೊಡೊನೆಟ್‌ಸ್ಕ್‌ ಮತ್ತು ಲಿಸಿಚನ್‌ಸ್ಕ್‌ ಕಡೆಗೆ ರಷ್ಯಾ ಪಡೆಗಳು ನುಗ್ಗುತ್ತಿದ್ದು, ಉಕ್ರೇನ್‌ನ ಪೂರ್ವದ ಬಾಖ್‌ಮಟ್‌ನಲ್ಲಿ ದಾಳಿ ತೀವ್ರಗೊಳಿಸು ಎಚ್ಚರಿಕೆ ನೀಡಿವೆ. ರಷ್ಯಾ ಸೇನೆಯಿಂದ ಕ್ಷಿಪಣಿ ಮತ್ತು ಶೆಲ್‌ ದಾಳಿಯಿಂದ ಆತಂಕಗೊಂಡಿರುವ ಜನರು ಮನೆ ತೊರೆಯುತ್ತಿದ್ದಾರೆ.

‌ಇದೇ ವೇಳೆ ಬರೆಂಟ್‌ ಸಮುದ್ರದಲ್ಲಿ ಅಡ್ಮಿರಲ್ ಗೋರ್ಶ್ಕೋವ್ ಯುದ್ಧನೌಕೆ ಮೂಲಕ ಜಿರ್ಕಾನ್‌ ಹೈಪರ್‌ಸಾನಿಕ್‌ ಕ್ರೂಸರ್‌ ಕ್ಷಿಪಣಿ ಪ್ರಯೋಗಿಸಿದ್ದು, 1,000 ಕಿ.ಮೀ. ದೂರದಲ್ಲಿ ಆರ್ಕ್ಟಿಕ್ ಶ್ವೇತ ಸಮುದ್ರದಲ್ಲಿ ನಿಗದಿಪಡಿಸಿದ್ದ ಗುರಿಯನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್‌, ಈ ಕ್ಷಿಪಣಿಯನ್ನು ಹೊಸ ಪೀಳಿಗೆಯ ‘ಅಪ್ರತಿಮ ಅಸ್ತ್ರ’ ಎಂದು ಬಣ್ಣಿಸಿದ್ದಾರೆ.

ಈ ನಡುವೆ ಡೆನ್ಮಾರ್ಕ್‌ನಿಂದ ಹಡಗು ನಿಗ್ರಹಿಸುವ ಹಾರ್ಪೂನ್‌ ಕ್ಷಿಪಣಿಗಳು ಮತ್ತು ಅಮೆರಿಕದ ಹೋವಿಟ್ಜರ್‌ ಫಿರಂಗಿಗಳು ಶನಿವಾರ ಉಕ್ರೇನ್‌ ಸೇನಾ ಬತ್ತಳಿಕೆ ಸೇರಿರುವುದನ್ನು ಉಕ್ರೇನ್ ರಕ್ಷಣಾ ಸಚಿವಾಲಯ ಖಚಿತಪಡಿಸಿದೆ.

ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸದಂತೆ ಜರ್ಮನಿ ಮತ್ತು ಫ್ರಾನ್ಸ್‌ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಶಸ್ತ್ರಾಸ್ತ್ರ ಪೂರೈಕೆಯು ಪರಿಸ್ಥಿತಿಯನ್ನು ಮತ್ತಷ್ಟು ಅಸ್ಥಿರಗೊಳಿಸುವ ಮತ್ತು ಮಾನವೀಯ ಬಿಕ್ಕಟ್ಟು ಉಲ್ಬಣಗೊಳಿಸಲಿದೆ ಎಂದು ಎಚ್ಚರಿಸಿರುವುದಾಗಿ ಕ್ರೆಮ್ಲಿನ್‌ ಹೇಳಿದೆ.

ಉಕ್ರೇನ್‌ನಿಂದ ಸೇನೆ ಹಿಂತೆಗೆದುಕೊಳ್ಳಲು ರಷ್ಯಾದ ಕಮ್ಯುನಿಸ್ಟ್ ನಾಯಕರೊಬ್ಬರು ಒತ್ತಾಯಿಸಿದ್ದಾರೆ. ‘ಸೇನಾ ಕಾರ್ಯಾಚರಣೆ ನಿಲ್ಲಿಸದಿದ್ದರೆ ರಷ್ಯಾದಲ್ಲಿ ಅನಾಥರ ಸಂಖ್ಯೆ ಹೆಚ್ಚಲಿದೆ’ ಎಂದು ಲಿಯೊನಿಡ್ ವಾಸ್ಯುಕೆವಿಚ್ ಕಳವಳ ವ್ಯಕ್ತಪಡಿಸಿದ್ದಾರೆ.

ಗೆಲುವು ನಮ್ಮದೇ– ಝೆಲೆನ್‌ಸ್ಕಿ: ‘ರಷ್ಯಾ ಸೇನೆ ಅಸಾಧಾರಣ ಶಕ್ತಿ ಹೊಂದಿದೆ ಎಂಬ ಕಟ್ಟುಕತೆಯನ್ನು ಜಗತ್ತಿನೆದುರು ಬಿಚ್ಚಿಟ್ಟ ದೇಶ ಉಕ್ರೇನ್‌. ರಷ್ಯಾ ಇಡೀ ಉಕ್ರೇನ್‌ ಆಕ್ರಮಿಸಲು ಪ್ರಯತ್ನಿಸುತ್ತಿದೆ. ಆದರೆ, ಉಕ್ರೇನ್‌ ಭವಿಷ್ಯ ನಿರ್ಧರಿಸುವಷ್ಟು ನಾವು ಬಲಶಾಲಿಯಾಗಿದ್ದೇವೆ. ರಷ್ಯಾ ವಿರುದ್ಧ ಗೆಲುವು ನಮ್ಮದೇ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.