ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ಸಮರ ನೌಕೆಗೆ ಉಕ್ರೇನ್‌ ಕ್ಷಿಪಣಿ ದಾಳಿ

50 ದಿನಗಳು ಕಳೆದರೂ ನಿಲ್ಲದ ‘ವಿಶೇಷ ಸೇನಾ ಕಾರ್ಯಾಚರಣೆ’
Last Updated 14 ಏಪ್ರಿಲ್ 2022, 17:23 IST
ಅಕ್ಷರ ಗಾತ್ರ

ಒಡೆಸಾ: ಕಪ್ಪು ಸಮುದ್ರ ದಲ್ಲಿ ರಷ್ಯಾದ ನೌಕಾಪಡೆಯ ಹೆಮ್ಮೆಯ ಕಿರೀಟದಂತ್ತಿದ್ದ ಸಮರ ನೌಕೆ ‘ಮಾಸ್ಕವಾ’ ಮೇಲೆ ಕ್ಷಿಪಣಿ ದಾಳಿ ನಡೆಸಿ ತೀವ್ರ ಹಾನಿಗೊಳಿಸಿರುವುದಾಗಿ ಉಕ್ರೇನ್‌ ಸೇನೆಗುರುವಾರ ತಿಳಿಸಿದೆ.

ನಿಖರ ಗುರಿ ನಿರ್ದೇಶಿತ ಕ್ರೂಸರ್‌ ಕ್ಷಿಪಣಿಗಳನ್ನು ಉಡಾಯಿಸುವ ಮಾಸ್ಕವಾ ನೌಕೆ ಈ ಹಿಂದೆ ಸಿರಿಯಾ ಸಂಘರ್ಷದಲ್ಲಿ ಕಾರ್ಯನಿರ್ವಹಿಸಿತ್ತು. ಉಕ್ರೇನ್‌ನ ದಕ್ಷಿಣ ಕರಾವಳಿ ಮತ್ತು ಕೇಂದ್ರ ಸ್ಥಳಗಳ ಮೇಲೆ ರಷ್ಯಾ ನೌಕಾಪಡೆ ನಡೆಸುತ್ತಿದ್ದ ದಾಳಿಯಲ್ಲಿ ಈ ನೌಕೆ ಸದ್ಯ ಮುಂಚೂಣಿ ಪಾತ್ರ ನಿರ್ವಹಿಸುತ್ತಿತ್ತು.

‘ರಷ್ಯಾದ ಸಮರ ನೌಕೆಗೆ ಆಗಿರುವ ತೀವ್ರ ಹಾನಿಗೆ ನಮ್ಮ ದೇಶೀಯ ನೆಪ್ಚೂನ್‌ ಕ್ರೂಸ್‌ ಕ್ಷಿಪಣಿಗಳು ಕಾರಣ’ ಎಂದು ಒಡೆಸಾ ಸೇನಾ ಆಡಳಿತದ ವಕ್ತಾರ ಸೆರ್ಗೆ ಬ್ರಾಚುಕ್ ಟೆಲಿಗ್ರಾಮ್‌ನಲ್ಲಿ ತಿಳಿಸಿದರು.

‘ನೌಕೆಯಲ್ಲಿನ ಮದ್ದುಗುಂಡುಗಳು ಸ್ಫೋಟಿಸಿದ್ದರಿಂದ ನೌಕೆಗೆ ಬೆಂಕಿ ಹೊತ್ತಿತ್ತು.ಬೆಂಕಿ ನಂದಿಸಲಾಗಿದೆ. ಪ್ರಮುಖ ಕ್ಷಿಪಣಿ ಶಸ್ತ್ರಾಸ್ತ್ರಗಳಿಗೆ ಯಾವುದೇ ಹಾನಿಯಾಗಿಲ್ಲ. ನೌಕೆ ಸಮು ದ್ರದಲ್ಲಿ ತೇಲುತ್ತಿದೆ’ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.

ನಾಗರಿಕರ ಸ್ಥಳಾಂತರ ಪುನರಾರಂಭ: ರಷ್ಯಾದಿಂದ ಮತ್ತಷ್ಟು ತೀವ್ರ ದಾಳಿ ನಡೆಯುವ ಆತಂಕವಿರುವುದರಿಂದ ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಉಕ್ರೇನ್‌ ಪುನರಾರಂಭಿಸಿದೆ.

ಉಕ್ರೇನ್‌ನ ಪೂರ್ವ ಮತ್ತು ದಕ್ಷಿಣ ದಲ್ಲಿ 9 ಮಾನವೀಯ ಕಾರಿಡಾರ್‌ಗಳ ಮೂಲಕ ನಾಗರಿಕರ ಸ್ಥಳಾಂತರಿಸುವಿಕೆಯನ್ನು ಗುರುವಾರ ಪುನರಾರಂಭಿಸಲಾಗಿದೆ ಎಂದು ಉಕ್ರೇನ್‌ ಉಪ ಪ್ರಧಾನಿ ಇರಿನಾ ವೆರೆಶ್‌ಚುಕ್ ತಿಳಿಸಿದರು.

ಕಲಿಬ್‌ ಕ್ಷಿಪಣಿ ಉಡಾವಣೆ: ರಷ್ಯಾದ ಪೆಸಿಫಿಕ್ ಫ್ಲೀಟ್‌ನ ಎರಡು ಡೀಸೆಲ್ ಚಾಲಿತ ಜಲಾಂತರ್ಗಾಮಿ ನೌಕೆಗಳು ಜಪಾನ್‌ ಸಮುದ್ರದಲ್ಲಿ ಗುರುವಾರ ಸಮರಾಭ್ಯಾಸದಲ್ಲಿ ಕಲಿಬ್‌ ಕ್ರೂಸ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾಯಿಸಿ ದವು ಎಂದು ರಷ್ಯಾದ ‘ಟಾಸ್‌’ ಸುದ್ದಿ ಸಂಸ್ಥೆ ಹೇಳಿದೆ. ರಷ್ಯಾದ ಸೇನಾ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಲಾಗುತ್ತಿದೆ ಎಂದು ಜಪಾನ್‌ ಹೇಳಿದೆ.

ರಷ್ಯಾಕ್ಕೆ ಸೋಲು:ವಿಶ್ವಸಂಸ್ಥೆಯಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ನಾಲ್ಕು ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಷ್ಯಾ ನಾಲ್ಕರಲ್ಲೂ ಸೋಲು ಕಂಡಿದೆ. ಇದನ್ನು ಉಕ್ರೇನ್‌ ಮೇಲಿನ ಆಕ್ರಮಣಕ್ಕಾಗಿ ರಷ್ಯಾ ಜಾಗತಿಕ ವೇದಿಕೆಯಿಂದ ಪ್ರತ್ಯೇಕಿಸುವ ತೀರ್ಪು ಎಂದು ಪರಿಗಣಿತವಾಗಿದೆ.

‘ಪೂರ್ವದ ದೇಶಗಳಿಗೆ ಇಂಧನ ರಫ್ತು’

ಮಾಸ್ಕೊ: ‘ರಷ್ಯಾದ ಅನಿಲ ಆಮದನ್ನು ತಕ್ಷಣ ತ್ಯಜಿಸಲು ಐರೋಪ್ಯ ರಾಷ್ಟ್ರಗಳಿಗೆ ಸಾಧ್ಯವಿಲ್ಲ. ಆದರೆ, ನಾವು ಪೂರ್ವದ ದೇಶಗಳಿಗೆ ಇಂಧನ ರಫ್ತು ಮಾಡಲಿದ್ದೇವೆ’ ಎಂದು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಗುರುವಾರ ಹೇಳಿದ್ದಾರೆ.

‘ಐರೋಪ್ಯ ರಾಷ್ಟ್ರಗಳು ರಷ್ಯಾದ ಇಂಧನ ಅವಲಂಬನೆಯಿಂದ ಹೊರಬರಲು ಪ್ರಯತ್ನಿಸುತ್ತಿರುವುದರಿಂದ ನಾವುಚೀನಾ ಮತ್ತು ಏಷ್ಯಾದ ರಾಷ್ಟ್ರಗಳೊಂದಿಗೆ ನಿಕಟ ಬಾಂಧವ್ಯ ಬಲಪಡಿಸಿಕೊಳ್ಳುತ್ತಿದ್ದೇವೆ’ ಎಂದು ಪುಟಿನ್ ಹೇಳಿದರು.

ಭದ್ರತೆ ಹೆಚ್ಚಳ: ‘ಸ್ವೀಡನ್ ಮತ್ತು ಫಿನ್ಲೆಂಡ್‌ನ್ಯಾಟೊ ಸೇರಿದರೆ ರಷ್ಯಾ ತನ್ನ ಪಶ್ಚಿಮ ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಿದೆ. ಇನ್ನುಮುಂದೆ ಬಾಲ್ಟಿಕ್ಪರಮಾಣು ಮುಕ್ತತತೆ ಬಗ್ಗೆ ಮಾತನಾಡಲಾಗದು’ ಎಂದು ರಷ್ಯಾ ಹೇಳಿದೆ.

ಗಡಿಯಲ್ಲೂ ಶೆಲ್‌ ದಾಳಿ

ಮಾಸ್ಕೊ: ದೇಶದ ಗಡಿಗೆ 10 ಕಿ.ಮೀ ಅಂತರದಲ್ಲಿರುವ ಕ್ಲಿಮೊವೊ ಪಟ್ಟಣದ ಮೇಲೆ ಉಕ್ರೇನ್‌ ಸೇನೆ ಶೆಲ್ ದಾಳಿ ನಡೆಸಿದೆ. ಎರಡು ವಸತಿ ಕಟ್ಟಡಗಳು ಹಾನಿಗೀಡಾಗಿವೆ. ಕೆಲವು ನಿವಾಸಿಗಳು ಗಾಯಗೊಂಡಿದ್ದಾರೆ’ ಎಂದು ರಷ್ಯಾದ ಬ್ರಿಯಾನ್‌ಸ್ಕ್‌ ಪ್ರದೇಶದ ಗವರ್ನರ್ ಅಲೆಕ್ಸಾಂಡರ್ ಬೊಗೊಮಾಜ್ ಗುರುವಾರ ತಿಳಿಸಿದರು.

ರಷ್ಯಾಕ್ಕೆ ಬರುತ್ತಿದ್ದಉಕ್ರೇನ್‌ ನಿರಾಶ್ರಿತರನ್ನು ಗುರಿಯಾಗಿಸಿ ಗಡಿ ತಪಾಸಣಾ ಕೇಂದ್ರದ ಮೇಲೂ ಉಕ್ರೇನ್ ಸೇನೆ ಗುಂಡಿನ ದಾಳಿ ನಡೆಸಿದೆ ಎಂದು ರಷ್ಯಾದ ಭದ್ರತಾ ಸಂಸ್ಥೆ ಎಫ್‌ಎಸ್‌ಬಿ ತಿಳಿಸಿರುವುದಾಗಿ ‘ಟಾಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಾರ್ಕಿವ್‌ ಸೇತುವೆ ಧ್ವಂಸ: ರಷ್ಯಾದ ಯೋಧರನ್ನು ಸಾಗಿಸುತ್ತಿದ್ದ ಬೆಂಗಾವಲು ಪಡೆ ವಾಹನಗಳನ್ನು ನಾಶ ಪಡಿಸಲು ಹಾರ್ಕಿವ್‌ನ ಪ್ರಮುಖ ಸೇತುವೆಯನ್ನು ಗುರು ವಾರ ಸ್ಫೋಟಿಸಲಾಯಿತು. ಇದ ರಿಂದಾಗಿ ರಷ್ಯಾ ಸೇನೆಯ ಒಂದು ತುಕಡಿ ಸಂಪೂರ್ಣ ನಾಶವಾಗಿದೆ ಎಂದು ಉಕ್ರೇನ್‌ ಸೇನೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT