ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀವ್ ಹಾನಿಗೆ ಉಕ್ರೇನ್‌ ಹೊಣೆ: ರಷ್ಯಾ

ವಿದೇಶಿ, ಉಕ್ರೇನ್‌ ವಾಯುರಕ್ಷಣೆ ಕ್ಷಿಪಣಿ ವ್ಯವಸ್ಥೆಯೇ ಕಾರಣ– ಆರೋಪ
Last Updated 25 ನವೆಂಬರ್ 2022, 3:07 IST
ಅಕ್ಷರ ಗಾತ್ರ

ಮಾಸ್ಕೊ:ಉಕ್ರೇನ್‌ನ ರಾಜಧಾನಿ ಕೀವ್‌, ಪ್ರಮುಖ ನಗರಗಳಲ್ಲಿ ಮೂಲಸೌಕರ್ಯ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ ಎಂಬುದನ್ನು ರಷ್ಯಾ ನಿರಾಕರಿಸಿದೆ. ವಿದೇಶಿ ಮತ್ತು ಉಕ್ರೇನ್‌ ವಾಯುರಕ್ಷಣಾ ಕ್ಷಿಪಣಿಗಳು ಹಾನಿ ಮಾಡುತ್ತಿವೆ ಎಂದೂ ಆರೋಪಿಸಿದೆ.

ಕೀವ್‌ ನಗರದ ಮೇಲೆ ಒಂದೇ ಒಂದು ದಾಳಿಯನ್ನೂ ನಮ್ಮ ಸೇನಾ ಪಡೆ ನಡೆಸಿಲ್ಲ. ವಿದೇಶಿ ಮತ್ತು ಉಕ್ರೇನ್‌ ವಾಯು ರಕ್ಷಣಾ ವ್ಯವಸ್ಥೆಗಳ ಕ್ಷಿಪಣಿಗಳ ಪತನದಿಂದಾಗಿ ಹಾನಿಯಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾದ ಬೇಡಿಕೆಗಳನ್ನು ಪೂರೈಸಿದರೆ, ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲುಉಕ್ರೇನ್‌ನ ಅಧ್ಯಕ್ಷರಿಗೆ ಎಲ್ಲ ಅವಕಾಶಗಳೂ ಸಿಗಲಿವೆ ಎಂದು ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ.

ಉಕ್ರೇನ್‌ ಮೇಲೆ ನಡೆಯುತ್ತಿರುವ ಭಾರಿ ದಾಳಿಯು ಅಲ್ಲಿನ ಸೇನಾ ನೆಲೆಗಳು ಮತ್ತು ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆ ಎಂದೂ ರಷ್ಯಾ ಸ್ಪಷ್ಟಪಡಿಸಿದೆ.

ಉಕ್ರೇನ್‌ನಲ್ಲಿಇಂಧನ ಮೂಲಸೌಕರ್ಯಗಳಿಗೆ ಆಗಿರುವ ಹಾನಿಯು, ಚಳಿಗಾಲದಲ್ಲಿ ದೇಶದ ಲಕ್ಷಾಂತರ ಜನರಿಗೆ ತೀವ್ರ ಪರಿಣಾಮ ಆಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಬುಧವಾರ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ದಾಳಿಯಿಂದ ಹತ್ತು ಜನರು ಮೃತಪಟ್ಟು, ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಪ್ರಾಸಿಕ್ಯೂಟರ್‌ ಜನರಲ್‌ ಆಂಡ್ರಿ ಕೊಸ್ಟಿನ್‌ ತಿಳಿಸಿದ್ದಾರೆ.

ಕೀವ್‌ನಲ್ಲಿ ಕತ್ತಲು:ಕೀವ್‌ ನಗರದ ಬಹುತೇಕ ಕಡೆಗಳಲ್ಲಿ ನೀರು ಸರಬರಾಜು ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದ್ದರೂ ಶೇ 70ರಷ್ಟು ನಗರ ವಿದ್ಯುತ್‌ ವ್ಯತ್ಯಯದಿಂದ ಕಗ್ಗತ್ತಲಿನಲ್ಲಿ ಮುಳುಗಿದೆ ಎಂದು ನಗರದ ಮೇಯರ್‌ ವಿಟಾಲಿ ಕ್ಲಿಚ್‌ಕೊ ಹೇಳಿದ್ದಾರೆ.

ಕೀವ್‌ ನಗರ ಸೇರಿ ವಿವಿಧೆಡೆ ಬುಧವಾರ 70 ಕ್ಷಿಪಣಿಗಳು, ಡ್ರೋನ್‌ಗಳನ್ನು ರಷ್ಯಾ ಪಡೆಗಳು ಹಾರಿಸಿವೆ ಎಂದು ಉಕ್ರೇನ್‌ ದೂರಿದೆ. ಇದೇ ವೇಳೆ ಉಭಯ ರಾಷ್ಟ್ರಗಳು ಬಂಧಿಸಿದ್ದ ತಲಾ 50 ಮಂದಿ ಯುದ್ಧ ಕೈದಿಗಳು, ನಾಗರಿಕರನ್ನು ವಿನಿಮಯ ಮಾಡಿಕೊಂಡಿವೆ.

‘ನ್ಯಾಟೊ– ರಷ್ಯಾ ಸಂಘರ್ಷ?’:
‘ಉಕ್ರೇನ್‌
ನಲ್ಲಿ ರಷ್ಯಾ ಮತ್ತು ನ್ಯಾಟೊ ನಡುವೆ ಮುಖಾಮುಖಿ ಸಂಘರ್ಷದ ಪುರಾವೆಗಳು ದಿನೇ ದಿನೇ ಹೆಚ್ಚುತ್ತಿವೆ. ಉಕ್ರೇನ್‌ ಪರವಾಗಿ ಅದರ ಮೈತ್ರಿ ರಾಷ್ಟ್ರಗಳ ಸೇನಾ ಪರಿಣತರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಡಜನ್‌ಗಟ್ಟಲೆ ಖಾಸಗಿ ಮಿಲಿಟರಿ ಪಡೆಗಳು ಭಾಗಿಯಾಗಿವೆ’ ಎಂದುರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ತಿಳಿಸಿರುವುದಾಗಿ ‘ಟಾಸ್‌’ ಸುದ್ದಿಸಂಸ್ಥೆ ತಿಳಿಸಿದೆ. ಹಾಗೆಯೇ ಉಕ್ರೇನ್‌ ಮೇಲೆ ವ್ಯಾಪಕ ದಾಳಿ ನಡೆಸಲು ರಷ್ಯಾ ಪಡೆಗಳು ಸಿದ್ಧತೆ ನಡೆಸುತ್ತಿವೆ ಎಂದು ಉಕ್ರೇನ್‌ ರಕ್ಷಣಾ ಸಚಿವಾಲಯದ ಗುಪ್ತಚರ ನಿರ್ದೇಶನಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT