ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ, ಅಮೆರಿಕ ಭರವಸೆ ನಂಬಿ ಪರಮಾಣು ಶಸ್ತ್ರಾಸ್ತ್ರ ತ್ಯಾಗ ಮಾಡಿದ್ದ ಉಕ್ರೇನ್‌!

Last Updated 24 ಫೆಬ್ರುವರಿ 2022, 15:41 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾ ಮತ್ತು ಅಮೆರಿಕದ ಭದ್ರತಾ ಭರವಸೆಗಳನ್ನು ನಂಬಿದ ಉಕ್ರೇನ್‌ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಕಳೆದುಕೊಂಡು ಹೇಗೆ ನಿಶ್ಯಸ್ತ್ರಗೊಂಡಿತು ಎಂಬುದನ್ನು ಉಕ್ರೇನ್‌ನ ಸಂಸದರೊಬ್ಬರು ವಿವರಿಸಿದ್ದಾರೆ. ಶಸ್ತ್ರ ತ್ಯಾಗ ಮಾಡಿದ ಉಕ್ರೇನ್‌ ರಷ್ಯಾದ ತೀವ್ರ ದಾಳಿಯ ಎದುರು ಶಕ್ತಿಹೀನವಾಗಿ ನಿಂತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಅಮೆರಿಕ, ಬ್ರಿಟನ್‌ ಮತ್ತು ರಷ್ಯಾದ ಭರವಸೆಯನ್ನು ನಂಬಿ ಉಕ್ರೇನ್‌ 1994 ರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಪರಮಾಣು ಶಸ್ತ್ರಾಗಾರವನ್ನು ತ್ಯಜಿಸಿತು. ಈ ರೀತಿಯ ನಿರ್ಧಾರ ಕೈಗೊಂಡ ವಿಶ್ವದ ಏಕೈಕ ರಾಷ್ಟ್ರ ಉಕ್ರೇನ್. ಆ ಸಂದರ್ಭದಲ್ಲಿ ನೀಡಲಾಗಿದ್ದ ಭರವಸೆಗಳೆಲ್ಲ ಈಗ ಎಲ್ಲಿ ಹೋದವು? ಈಗ ನಾವು ಬಾಂಬ್ ದಾಳಿಯಿಂದ ಸಾವಿನ ದವಡೆಗೆ ಸಿಲುಕಿದ್ದೇವೆ’ ಎಂದು ಉಕ್ರೇನ್‌ ಸಂಸತ್ ಸದಸ್ಯ ಅಲೆಕ್ಸಿ ಗೊಂಚರೆಂಕೊ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

1991ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ ಉಕ್ರೇನ್‌ ನೆಲದಲ್ಲಿ ಸಾವಿರಾರು ಪರಮಾಣು ಶಸ್ತ್ರಾಸ್ತ್ರಗಳು ಉಳಿದುಹೋಗಿದ್ದವು. ಕೆಲವು ವರ್ಷಗಳ ನಂತರ, ಉಕ್ರೇನ್ ‘ಬುಡಾಪೆಸ್ಟ್ ಒಪ್ಪಂದ’ಕ್ಕೆ ಸಹಿ ಹಾಕಿತು. ಅದರ ನಿಯಮಗಳ ಪ್ರಕಾರ ಉಕ್ರೇನ್‌, ಅಮೆರಿಕದಿಂದ ಭದ್ರತಾ ಖಾತರಿಗಳಿಗೆ ಪ್ರತಿಯಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸಿತ್ತು.

ಆಗ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ಉಕ್ರೇನ್‌ನ ಆ ನಿರ್ಧಾರಕ್ಕೆ ಈಗ ಕೆಲವರು ಸ್ಪಷ್ಟವಾಗಿ ವಿಷಾದಿಸುತ್ತಿರುತ್ತಾರೆ. ‘ಶೂನ್ಯ’ವನ್ನು ಪಡೆದುಕೊಳ್ಳಲು ನಾವು ನಮ್ಮ ಸಾಮರ್ಥ್ಯವನ್ನೇ ಬಿಟ್ಟುಕೊಟ್ಟೆವು ಎಂದು ಉಕ್ರೇನ್‌ನ ಮಾಜಿ ರಕ್ಷಣಾ ಸಚಿವ ಆಂಡ್ರಿ ಜಹೊರೊಡ್ನಿಯುಕ್ ‘ನ್ಯೂಯಾರ್ಕ್ ಟೈಮ್ಸ್‌’ಗೆ ತಿಳಿಸಿದ್ದಾರೆ.

ಮಿಲಿಟರಿಯಲ್ಲಿ ರಷ್ಯಾಕ್ಕಿಂತ ದುರ್ಬಲವಾಗಿರುವ ಉಕ್ರೇನ್ ಈಗ ಬೆಂಬಲಕ್ಕಾಗಿ ವಿಶ್ವಸಂಸ್ಥೆ ಮತ್ತು ಪಾಶ್ಚಾತ್ಯ ಮಿತ್ರರಾಷ್ಟ್ರಗಳ ಕಡೆಗೆ ನೋಡುತ್ತಿದೆ. ಆದರೆ, ಪಾಶ್ಚಾತ್ಯ ರಾಷ್ಟ್ರಗಳಿಂದ ಬೆಂಬಲ ದೊರೆಯುವ ಭರವಸೆ ಉಕ್ರೇನ್‌ಗೆ ಇನ್ನೂ ಸಿಕ್ಕಿಲ್ಲ.

ನಮ್ಮ ದೇಶ ಒಂದು ಕಾಲದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಪರಮಾಣು ಶಕ್ತಿಯಾಗಿತ್ತು. ಆದರೆ ಜಾಗತಿಕ ಶಾಂತಿಗಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದೆವು ಎಂದು ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದರು.

‘ವಿಶ್ವ ಸಮುದಾಯ ನಮ್ಮ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT