ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೂ ಸೇರಿ ಸಾವಿರ ಜನರಿಗೆ ಆಶ್ರಯ ನೀಡಿದ್ದ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ

Last Updated 17 ಮಾರ್ಚ್ 2022, 5:58 IST
ಅಕ್ಷರ ಗಾತ್ರ

ಮಾರಿಯುಪೋಲ್‌ (ಉಕ್ರೇನ್‌): ಉಕ್ರೇನ್‌ನ ಬಂದರು ನಗರ ಮಾರಿಯುಪೋಲ್‌ನಲ್ಲಿ ಮಕ್ಕಳೂ ಸೇರಿದಂತೆ ಸಾವಿರಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದ್ದ ರಂಗಮಂದಿರದ ಮೇಲೆ ರಷ್ಯಾ ಬಾಂಬ್‌ ದಾಳಿ ನಡೆಸಿದೆ ಎಂದು ಉಕ್ರೇನ್ ಗುರುವಾರ ಹೇಳಿದೆ. ಸಾವಿನ ನಿಖರ ಸಂಖ್ಯೆ ಇನ್ನಷ್ಟೇ ತಿಳಿಯಬೇಕಿದೆ.

ರಂಗಮಂದಿರ ಹೊತ್ತಿ ಉರಿಯುತ್ತಿರುವ ಚಿತ್ರವನ್ನು ಉಕ್ರೇನ್‌ನ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

‘ರಷ್ಯಾದ ಆಕ್ರಮಣಕಾರರು ರಂಗಮಂದಿರವನ್ನು ನಾಶಪಡಿಸಿದ್ದಾರೆ. ಅದರಲ್ಲಿ ಸಾವಿರಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದರು. ಇದನ್ನು ನಾವು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಮಾರಿಯುಪೋಲ್‌ ನಗರ ಕೌನ್ಸಿಲ್ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಹೇಳಿದೆ.

ದಾಳಿಗೊಳಗಾಗಿರುವ ಕಟ್ಟಡದ ಅಕ್ಕಪಕ್ಕದಲ್ಲಿ ‘ಮಕ್ಕಳು’ ಎಂದು ರಷ್ಯಾದ ಭಾಷೆಯಲ್ಲಿ ಬರೆದಿದ್ದ ಉಪಗ್ರಹ ಚಿತ್ರವನ್ನು ‘ಮ್ಯಾಕ್ಸರ್‌’ ಎಂಬ ಸಂಸ್ಥೆಯು ಹಿಂದಿನ ದಿನವಷ್ಟೇ ಬಿಡುಗಡೆ ಮಾಡಿತ್ತು.

ಈ ದಾಳಿಯನ್ನು ಮಾರಿಯುಪೋಲ್ ಮೇಯರ್ ವಾಡಿಮ್ ಬೊಯಿಚೆಂಕೊ ‘ಭೀಕರ ದುರಂತ’ ಎಂದು ಕರೆದಿದ್ದಾರೆ.

‘ನಾಗರಿಕರು ಅಲ್ಲಿ ಆಶ್ರಯ ಪಡೆದಿದ್ದರು. ಬಹುತೇಕರು ಮೃತಪಟ್ಟಿದ್ದಾರೆ’ ಎಂದು ಅವರು ವಿಡಿಯೊ ಸಂದೇಶದಲ್ಲಿ ಹೇಳಿದರು.

‘ಇಂದು ನಡೆದ ಘಟನೆಯನ್ನು ವಿವರಿಸಲು ಇರುವ ಏಕೈಕ ಪದವೆಂದರೆ ಅದು ನರಮೇಧ. ಇದು ಉಕ್ರೇನ್‌ ಜನರ ನರಮೇಧ. ಆದರೆ, ನಮ್ಮ ಸುದಂರ ನಗರ ಮಾರಿಯುಪೋಲ್ ಮತ್ತೆ ಅವಶೇಷಗಳಡಿಯಿಂದ ಎದ್ದು ಬರಲಿದೆ ಎಂಬ ವಿಶ್ವಾಸ ನನಗಿದೆ’ ಎಂದು ಮೇಯರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಪಡೆಗಳು ಮತ್ತು ಬಂಡುಕೋರರು ಅಜೋವ್‌ ಸಮುದ್ರದ ಮೂಲಕ ಉಕ್ರೇನ್‌ಗೆ ಪ್ರವೇಶ ಪಡೆಯಲು ಮಾರಿಯುಪೋಲ್‌ ನೆರವಾಗುತ್ತದೆ. ಹೀಗಾಗಿ ಅದು ರಷ್ಯಾಕ್ಕೆ ವ್ಯೂಹಾತ್ಮಕವಾಗಿ ಪ್ರಮುಖ ಎನಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT