ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಇಂಧನ: ಭಾರತದ ನಾಯಕತ್ವಕ್ಕೆ ವಿಶ್ವಸಂಸ್ಥೆ ಕರೆ

ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಹೇಳಿಕೆ
Last Updated 28 ಆಗಸ್ಟ್ 2020, 11:37 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ನವೀಕರಿಸಲಾಗದ ಇಂಧನ ಬಳಕೆಯಿಂದ ನವೀಕರಿಸಬಹುದಾದ ಇಂಧನಗಳ ಬಳಕೆಗೆ ಹೆಚ್ಚಿನ ವೇಗ ನೀಡಿದರೆ, ಜಾಗತಿಕ ತಾಪಮಾನದ ವಿರುದ್ಧದ ಹೋರಾಟದಲ್ಲಿ ಭಾರತವು ಖಂಡಿತವಾಗಿಯೂ ‘ಜಾಗತಿಕ ಸೂಪರ್‌ಪವರ್‌’ ರಾಷ್ಟ್ರವಾಗಬಹುದು. ಹೀಗಾಗಿ ಸ್ವಚ್ಛ ಇಂಧನದ ಬಳಕೆಯ ನೇತೃತ್ವ ವಹಿಸುವಂತೆ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಕರೆ ನೀಡಿದ್ದಾರೆ.

‘ಜನರ ಆರೋಗ್ಯ ಹೇಗೆ ಕಾಪಾಡುವುದು ಎನ್ನುವ ಮೂಲಭೂತ ಪ್ರಶ್ನೆಯು ಪ್ರಸ್ತುತ ಇರುವ ಕೋವಿಡ್‌–19 ಪಿಡುಗು ಹಾಗೂ ಹವಾಮಾನ ವೈಪರಿತ್ಯದಿಂದ ಉದ್ಭವಿಸಿದೆ. ಸುಸ್ಥಿರತೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ವಿಚಾರದಲ್ಲಿ ದೃಢ ನಿಲುವನ್ನು ಯುವಜನರು ಬಯಸುತ್ತಿದ್ದಾರೆ. ಸ್ವಚ್ಛ ಇಂಧನ, ಹವಾಮಾನ ವೈಪರಿತ್ಯದ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಸ್ತುತ ದಿಟ್ಟತನದ ನಾಯಕತ್ವದ ಅವಶ್ಯಕತೆ ಇದ್ದು, ಭಾರತವು ಈ ನೇತೃತ್ವ ವಹಿಸಬೇಕು’ ಎಂದು ‘ದಿ ಎನರ್ಜಿ ಆ್ಯಂಡ್‌ ರಿಸೋರ್ಸ್‌ ಇನ್‌ಸ್ಟಿಟ್ಯೂಟ್’(ಟಿಇಆರ್‌ಐ) ಆಯೋಜಿಸಿದ್ದ 19ನೇ ದರ್ಬಾರಿ ಸೇಠ್ ಸಂಸ್ಮರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಿಡುಗಿನ ಅವಧಿಯಲ್ಲಿ ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಬಳಕೆಯು ಶೇ 17ರಿಂದ 24ಕ್ಕೆ ಏರಿಕೆಯಾಗಿತ್ತು. ಕಲ್ಲಿದ್ದಲು ಬಳಸಿ ಇಂಧನ ತಯಾರಿಕೆ ಪ್ರಮಾಣವು ಶೇ 76ರಿಂದ 66ಕ್ಕೆ ಇಳಿಕೆಯಾಗಿರುವುದು ಪ್ರೇರಣಾದಾಯಕ ವಿಚಾರ’ ಎಂದು ಗುಟೆರಸ್‌ ಹೇಳಿದರು.

‘ನವೀಕರಿಸಬಹುದಾದ ಇಂಧನದ ಬಳಕೆಗೆ ಹೆಚ್ಚಿನ ಒತ್ತು ನೀಡಿ, ಕ್ರಮೇಣವಾಗಿ ಕಲ್ಲಿದ್ದಲು ಬಳಕೆಯನ್ನು ನಿಲ್ಲಿಸಬೇಕು. 2050ರೊಳಗೆ ಪರಿಸರಕ್ಕೆ ಇಂಗಾಲದ ಡೈ ಆಕ್ಸೈಡ್ ಸೇರದಂತೆ (ಕಾರ್ಬನ್‌ ನ್ಯೂಟ್ರಾಲಿಟಿ) ಜಿ20 ಸದಸ್ಯ ರಾಷ್ಟ್ರಗಳು ಸೂಕ್ತ ನಿರ್ಧಾರ ಹಾಗೂ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅವರು‌ ಆಗ್ರಹಿಸಿದರು. ‌

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ವಹಿಸಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT