ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಗಾಸಸ್‌ ತಂತ್ರಾಂಶವನ್ನು ಒಂದು ದೇಶಕ್ಕಷ್ಟೇ ಮಾರಿಲ್ಲ: ಎನ್‌ಎಸ್‌ಒ ಸಮರ್ಥನೆ

ತಪ್ಪು ಮಾಡಿಲ್ಲ: ಎನ್‌ಎಸ್‌ಒ ಗ್ರೂಪ್‌ ಸಿಇಒ ಲೆವ್ ಹುಲಿಯೊ
Last Updated 30 ಜನವರಿ 2022, 14:54 IST
ಅಕ್ಷರ ಗಾತ್ರ

ಜೆರುಸಲೇಂ: ‘ಪ್ರಜಾಪ್ರಭುತ್ವಯೇತರ ದೇಶಗಳಿಗೂ ಪೆಗಾಸಸ್‌ ತಂತ್ರಾಂಶವನ್ನು ಮಾರಲಾಗಿದ್ದು, ತಪ್ಪು ಎಸಗಲಾಗಿದೆ ಎಂಬ ಟೀಕೆಗಳು ಪೂರ್ವಗ್ರಹಪೀಡಿತವಾದುದು’ ಎಂದು ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಹೇಳಿದೆ.

ಸೇನಾ ಶಸ್ತ್ರಾಸ್ತ್ರಗಳು ವ್ಯವಸ್ಥೆಯ ಕಣ್ಗಾವಲು ತಂತ್ರಜ್ಞಾನವನ್ನು ಇಸ್ರೇಲ್‌ ಸೇರಿದಂತೆ ವಿವಿಧ ದೇಶಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಆರೋಪಗಳಿದ್ದರೂ ಅವುಗಳನ್ನು ಮಾರಲಾಗುತ್ತಿದೆ ಎಂದೂ ಸಂಸ್ಥೆ ಪ್ರತಿಪಾದಿಸಿದೆ.

ಇಸ್ರೇಲ್‌ನ ಟಿ.ವಿ.ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಲೆವ್ ಹುಲಿಯೊ ಅವರು, ‘ಕಂಪನಿಯ ಕಾರ್ಯಚಟುವಟಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕೆಲ ತಪ್ಪುಗಳೂ ಆಗಿರಬಹುದು’ ಎಂದು ಒಪ್ಪಿಕೊಂಡಿದ್ದಾರೆ.

‘ನಾವು ಒಂದು ದೇಶಕ್ಕಷ್ಟೇ ಪೆಗಾಸಸ್‌ ತಂತ್ರಾಂಶವನ್ನು ಮಾರಿಲ್ಲ. ಇದನ್ನು ಅಮೆರಿಕ ಅಥವಾ ಇಸ್ರೇಲ್‌ ಮಾರುವುದಿಲ್ಲ. ಎಫ್‌–25 ವಿಮಾನ, ಯುದ್ಧನೌಕೆ, ಡ್ರೋನ್‌ ಮಾರಬಹುದು. ಗೌಪ್ಯ ಮಾಹಿತಿ ಸಂಗ್ರಹಿಸುವ ಪರಿಕರ ಮಾರಬಾರದು ಎಂಬುದು ಪೂರ್ವಗ್ರಹಪೀಡಿತ ಚಿಂತನೆ’ ಎಂದು ಕಂಪನಿಯನ್ನು ಸಮರ್ಥಿಸಿಕೊಂಡರು.

ಪೆಗಾಸಸ್‌ ತಂತ್ರಾಂಶ ಕುರಿತು ವಿಶ್ವದಾದ್ಯಂತ ಟೀಕೆಗಳು ಎದುರಾಗಿರುವ ಕಾರಣ ನೀವು ನೆಮ್ಮದಿಯಿಂದ ನಿದ್ರೆ ಮಾಡುವಿರಾ ಎಂಬ ಪ್ರಶ್ನೆಗೆ, ‘ಖಂಡಿತ. ನಾನು ರಾತ್ರಿ ಗಡದ್ದಾಗಿ ನಿದ್ರೆ ಹೊಡೆಯುತ್ತೇನೆ’ ಎಂದು ಹೇಳಿದ್ದಾರೆ.

ಪೆಗಾಸಸ್‌ ತಂತ್ರಾಂಶವನ್ನು ಭಾರತ ಖರೀದಿಸಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಉಲ್ಲೇಖಿಸಿದ ಹಿಂದೆಯೇ ಕಂಪನಿಯ ಸಿಇಒ ಸಂದರ್ಶನ ಹೊರಬಿದ್ದಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯು ತೀವ್ರ ಚರ್ಚೆಗೆ ಗ್ರಾಸವಾಗಿದೆ.

‌ತಂತ್ರಾಂಶ ಕೋರಿ 90 ಅರ್ಜಿಗಳು ಬಂದಿದ್ದವು. ನಿಯಮಗಳಿಗೆ ಬದ್ಧವಾದ 40ಕ್ಕೆ ಮಾತ್ರ ತಂತ್ರಾಂಶವನ್ನು ಮಾರಿದ್ದೇವೆ ಎಂದು ತಿಳಿಸಿದರು.

ಅಮೆರಿಕವು ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ ಎಂಬ ಪ್ರಶ್ನೆಗೆ, ‘ಅದು ತತ್‌ಕ್ಷಣದ ಕೋಪ. ಖಂಡಿತವಾಗಿ ಇದನ್ನು ಆದಷ್ಟು ಶೀಘ್ರದಲ್ಲಿಯೇ ರದ್ದುಪಡಿಸಲಾಗುತ್ತದೆ‘ ಎಂದು ಪ್ರತಿಕ್ರಿಯಿಸಿದರು. ನಮ್ಮ ತಂತ್ರಜ್ಞಾನವು ಹಲವು ವರ್ಷಗಳಿಂದ ಅಮೆರಿಕದ ರಾಷ್ಟ್ರೀಯ ಭದ್ರತೆ, ಹಿತಾಸಕ್ತಿ ರಕ್ಷಿಸಲು ನೆರವಾಗಿದೆ ಎಂದೂ ಹೇಳಿಕೊಂಡರು.

ಎನ್‌ಎಸ್‌ಒ ಸಮೂಹದ ವಿವಾದಿತ ಪೆಗಾಸಸ್‌ ತಂತ್ರಜ್ಞಾನವು ಭಾರತದಲ್ಲಿ ದುರ್ಬಳಕೆಯಾಗಿದೆ ಹಾಗೂ ಅಮೆರಿಕವು ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ ಎಂಬ ಹಿನ್ನೆಲೆಯಲ್ಲಿ ಇದು ಜಗತ್ತಿನ ಗಮನಸೆಳೆದಿದೆ.

ಆದರೆ, ತಂತ್ರಾಂಶವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಭಾರತ ಸರ್ಕಾರ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT