ಸೋಮವಾರ, ಡಿಸೆಂಬರ್ 6, 2021
27 °C

ಕೊರೊನಾ ಲಸಿಕೆ ಖರೀದಿ, ಪೂರೈಕೆಗೆ ಯುನಿಸೆಫ್ ಸಿದ್ಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಹಲವು ಕಂಪನಿಗಳು ಕೊರೊನಾ ಲಸಿಕೆಗಳನ್ನು ತಯಾರಿಸಿ, ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಯುನಿಸೆಫ್ ಸಂಸ್ಥೆ, ಕೊರೊನಾ ಲಸಿಕೆಯನ್ನು ಖರೀದಿಸಿ, ವೇಗವಾಗಿ ಹಾಗೂ ಸಮಾನವಾಗಿ ಎಲ್ಲ ರಾಷ್ಟ್ರಗಳಿಗೂ ತಲುಪಿಸುವ ಪ್ರಕ್ರಿಯೆಯನ್ನು ಮುನ್ನಡೆಸುವುದಾಗಿ ಪ್ರಕಟಿಸಿದೆ.

ಈ ಲಸಿಕೆ ಖರೀದಿ ಮತ್ತು ಪೂರೈಕೆ ಪ್ರಕ್ರಿಯೆ ವಿಶ್ವದಲ್ಲೇ ಅತಿ ದೊಡ್ಡ ಕಾರ್ಯಾಚರಣೆಯಾಗುವ ಸಾಧ್ಯತೆ ಇದೆ.

ವಿಶ್ವದ ಏಕೈಕ ಅತಿ ದೊಡ್ಡ ಏಕ ಲಸಿಕೆ ಖರೀದಿಸುವ ಸಂಸ್ಥೆಯಾಗಿರುವ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್‌), ಪ್ರತಿ ವರ್ಷ 2 ಬಿಲಿಯನ್‌ ಡೋಸ್‌ಗಳಷ್ಟು ರೋಗ ನಿರೋಧಶಕ ಶಕ್ತಿ ಹೆಚ್ಚಿಸುವ ವಿವಿಧ ಲಸಿಕೆಗಳನ್ನು ಖರೀದಿಸುತ್ತದೆ. ಈಗ ಇದೇ ಯುನಿಸೆಫ್ ಪಾನ್‌ ಅಮೆರಿಕ ಆರೋಗ್ಯ ಸಂಸ್ಥೆ(ಪಿಎಎಚ್‌ಒ) ಸೇರಿದಂತೆ ವಿವಿಧ ಕಂಪನಿಗಳು, ಆರೋಗ್ಯ ಸಂಸ್ಥೆಗಳ ಸಹಯೋಗದಲ್ಲಿ ‘ಕೋವ್ಯಾಕ್ಸ್ ಗ್ಲೋಬಲ್‌ ವ್ಯಾಕ್ಸಿನ್‌ ಫೆಸಿಲಿಟಿ‘ ಎಂಬ ಯೋಜನೆಯ ಪರವಾಗಿ ಕೊರೊನಾ ಲಸಿಕೆ ಖರೀದಿಸಿ, ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುವ 92 ರಾಷ್ಟ್ರಗಳಿಗೆ ಲಸಿಕೆ ಪೂರೈಸಲು ಮುಂದಾಗಿದೆ. ಈ ಪ್ರಕ್ರಿಯೆಗೆ ಕಂಪನಿ, ಸಂಸ್ಥೆಗಳೂ ಸಾಥ್ ನೀಡಲು ಆಸಕ್ತಿ ತೋರಿವೆ.

ಲಸಿಕೆ ಪೂರೈಸುವ ವಿಚಾರದಲ್ಲಿ ಯುನಿಸೆಫ್‌ ಕೂಡ ಹೆಚ್ಚು ಆದಾಯ ಪಡೆಯುವ 80 ರಾಷ್ಟ್ರಗಳಿಗೆ ಲಸಿಕೆ ಖರೀದಿಸಲು ‘ಸಂಯೋಜಕರಾಗಿ‘ ಸೇವೆ ಸಲ್ಲಿಸಲು ಮುಂದಾಗಿದೆ. ಈ ದೇಶಗಳು ಕೊವಾಕ್ಸ್ ಫೆಸಿಲಿಟಿಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದು ಮತ್ತು ತಮ್ಮ ಸ್ವಂತ ಹಣದಿಂದಲೇ ಲಸಿಕೆಗಳನ್ನು ಖರೀದಿಸುವುದಾಗಿ ತಿಳಿಸಿವೆ.

ಯುನಿಸೆಫ್ ಸಂಸ್ಥೆಯು ಲಸಿಕೆ ಖರೀದಿ ಮತ್ತು ಪೂರೈಸುವ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆ, ಗವಿ ದಿ ವ್ಯಾಕ್ಸಿನ್ ಅಲಯನ್ಸ್‌, ದಿ ಕೋಯ್ಲೇಷನ್ ಫಾರ್ ಎಪಿಡೆಮಿಕ್ ಪ್ರಿಪೇರ್ಡ್‌ನೆಸ್‌ ಇನ್ನೋವೇಷನ್‌(ಸಿಇಪಿಐ), ಪಿಎಎಚ್‌ಒ, ವಿಶ್ವ ಬ್ಯಾಂಕ್, ದಿ ಬಿಲ್ ಅಂಡ್ ಮೆಲಿಂಡಾ ಗೇಟ್ಸ್‌ ಫೌಂಡೇಷನ್‌ ಮತ್ತು ಇತರೆ ಪಾಲುದಾರರ ಸಹಯೋಗದಲ್ಲಿ ಕೈಗೆತ್ತಿಕೊಳ್ಳುತ್ತಿದೆ. ದಿ ಕೊವಾಕ್ಸ್ ಫೆಸಿಲಿಟಿಯಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮುಕ್ತ ಅವಕಾಶ ನೀಡಿದ್ದು, ಯಾವ ದೇಶವೂ ಕೋವಿಡ್‌ 19 ಲಸಿಕೆಯ ಲಭ್ಯತೆಯಿಂದ ದೂರ ಉಳಿಯಬಾರದು ಎಂದು ಯುನಿಸೆಫ್ ಒತ್ತಿ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು