ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್

Last Updated 12 ಆಗಸ್ಟ್ 2020, 17:42 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಮೂಲದ ಕಮಲಾ ದೇವಿ ಹ್ಯಾರಿಸ್‌ ಅವರನ್ನು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಭಾರತ ಮೂಲದ ಅಮೆರಿಕನ್ನರಿಗೆ ಅಮೆರಿಕದ ರಾಜಕೀಯದಲ್ಲಿ ಇರುವ ಉಜ್ವಲ ಅವಕಾಶದ ಸಂಕೇತ ಎಂದು ಈ ಆಯ್ಕೆಯನ್ನು ವಿಶ್ಲೇಷಿಸಲಾಗುತ್ತಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ, ಕಪ್ಪುವರ್ಣೀಯರು ಮತ್ತು ಪ್ರಭಾವಿ ಭಾರತೀಯ ಸಮುದಾಯದ ಮನಗೆಲ್ಲುವುದಕ್ಕಾಗಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡೆನ್‌ ಅವರು ಕಮಲಾ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಮಲಾ ಅವರನ್ನು ಆಯ್ಕೆ ಮಾಡುವ ಮೂಲಕ ಬಿಡೆನ್‌ ಅವರು ಇತಿಹಾಸ ನಿರ್ಮಿಸಿದ್ದಾರೆ. ಪ್ರಮುಖ ಪಕ್ಷವೊಂದರಿಂದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುತ್ತಿರುವ ಮೊದಲ ಕಪ್ಪುವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲಾ ಅವರು ಪಾತ್ರರಾಗಲಿದ್ದಾರೆ. ಕ್ಯಾಲಿಫೋರ್ನಿಯಾದ ಸೆನೆಟರ್‌ ಆಗಿರುವ ಕಮಲಾ ಅವರ ತಾಯಿ ಚೆನ್ನೈ ಮೂಲದ ಶ್ಯಾಮಲಾ ಗೋಪಾಲನ್‌, ತಂದೆ ಜಮೈಕಾದ ಡೊನಾಲ್ಡ್‌ ಹ್ಯಾರಿಸ್‌.

ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಬಿಡೆನ್‌ ಅವರು ಯಾರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇನ್ನೊಂದು ವಾರದಲ್ಲಿ ನಡೆಯಲಿರುವ ಡೆಮಾಕ್ರಟಿಕ್‌ ರಾಷ್ಟ್ರೀಯ ಸಮಾವೇಶದಲ್ಲಿ ಬಿಡೆನ್‌ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಲಾಗುವುದು. ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರು ಪುನರಾಯ್ಕೆ ಬಯಸಿದ್ದಾರೆ. ಚುನಾವಣೆ ನವೆಂಬರ್‌ 3ರಂದು ನಡೆಯಲಿದೆ.

‘ಈ ಹುದ್ದೆಗೆ ಕಮಲಾ ಅವರು ಅತ್ಯುತ್ತಮ ಆಯ್ಕೆ. ವೃತ್ತಿ ಜೀವನದ ಉದ್ದಕ್ಕೂ ಅವರು ನಮ್ಮ ಸಂವಿಧಾನ ಮತ್ತು ಜನರಿಗೆ ಸಮಪಾಲು ದೊರಕಿಸುವುದಕ್ಕೆ ಹೋರಾಡಿದ್ದಾರೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರು ಪ್ರತಿಕ್ರಿಯಿಸಿದ್ದಾರೆ.

ಚೆನ್ನೈನಲ್ಲಿ ಬೇರು:‘ನಾವು ಸಂತಸಗೊಂಡಿದ್ದೇವೆ. ಅವರು ದಿಟ್ಟವಾಗಿ ಮತ್ತು ಪ್ರಗತಿಪರವಾಗಿ ಯೋಚಿಸುತ್ತಾರೆ. ತಾಯಿಯು ಬೆಳೆಸಿದ ಬಗೆಯೇ ಇಂದು ಈ ಸ್ಥಾನಕ್ಕೆ ಕಮಲಾ ಅವರನ್ನು ತಂದಿದೆ’ ಎಂದು ಕಮಲಾ ಅವರ ಸಂಬಂಧಿ, ಚೆನ್ನೈನಲ್ಲಿ ಇರುವ ಡಾ. ಸರಳಾ ಗೋಪಾಲನ್ ಅವರು ‘ಪ್ರಜಾವಾಣಿ’ಗೆ‌ ಹೇಳಿದ್ದಾರೆ.

ಸರಳಾ ಅವರು ಕಮಲಾ ಅವರ ತಾಯಿ ಶ್ಯಾಮಲಾ ಅವರ ಸೋದರಿ. ಶ್ಯಾಮಲಾ ಅವರ ಅಪ್ಪ ಪಿ.ವಿ. ಗೋಪಾಲನ್‌ ಅವರು ರಾಜತಾಂತ್ರಿಕ ಅಧಿಕಾರಿಯಾಗಿದ್ದರು. ಶ್ಯಾಮಲಾ ಅವರು ಹದಿಹರೆಯದಲ್ಲಿಯೇ ಅಮೆರಿಕಕ್ಕೆ ವಲಸೆ ಹೋಗಿ ಸ್ತನ ಕ್ಯಾನ್ಸರ್‌ ತಜ್ಞೆಯಾಗಿ ಅಲ್ಲಿ ಕೆಲಸ ಮಾಡಿದ್ದರು.

ಕಮಲಾ ಚೆನ್ನೈಗೆ ಹಲವು ಬಾರಿ ಬಂದಿದ್ದಾರೆ. ಅವರಿಗೆ ದಕ್ಷಿಣ ಭಾರತದ ತಿನಿಸುಗಳೆಂದರೆ ಬಹಳ ಇಷ್ಟ ಎಂದೂ ಸರಳಾ ಹೇಳಿದ್ದಾರೆ. ತಮ್ಮ ತಾಯಿಯ ಚಿತಾಭಸ್ಮವನ್ನು ಬಂಗಾಳ ಕೊಲ್ಲಿಯಲ್ಲಿ ವಿಸರ್ಜಿಸುವುದಕ್ಕಾಗಿ ಅವರು 2009ರಲ್ಲಿ ಚೆನ್ನೈಗೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT