ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿಯರು ತೆರಳಿದ ಬಳಿಕ ಆಫ್ಗಾನ್‌ನಲ್ಲಿ ಐಸಿಸ್ ದಾಳಿಗೆ ಬ್ರೇಕ್: ತಾಲಿಬಾನ್

Last Updated 30 ಆಗಸ್ಟ್ 2021, 15:35 IST
ಅಕ್ಷರ ಗಾತ್ರ

ಕಾಬೂಲ್: ವಿದೇಶಿಯರು ದೇಶದಿಂದ ಹೊರಹೋದ ಬಳಿಕ ಇಸ್ಲಾಮಿಕ್ ಸ್ಟೇಟ್ ಗುಂಪು ನಡೆಸುತ್ತಿರುವ ದಾಳಿಗಳು ನಿಲ್ಲಲಿವೆ. ಒಂದೊಮ್ಮೆ ಮುಂದುವರಿದರೆ ನಾವು ಅದನ್ನು ನಿಗ್ರಹಿಸುತ್ತೇವೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.

‘ಐಸಿಸ್‌ನಿಂದ ಪ್ರಭಾವಿತರಾಗಿರುವ ಆಫ್ಗಾನಿಯರು, ವಿದೇಶಿಯರ ಅನುಪಸ್ಥಿತಿಯಲ್ಲಿ ಇಸ್ಲಾಮಿಕ್ ಸರ್ಕಾರ ರಚನೆಯಾಗುವುದನ್ನು ಕಂಡು ತಮ್ಮ ದಾಳಿಗಳನ್ನು ನಿಲ್ಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ’ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ವಾರಾಂತ್ಯದ ಸಂದರ್ಶನದಲ್ಲಿ ಎಎಫ್‌ಪಿಗೆ ತಿಳಿಸಿದ್ದಾರೆ.

'ಅವರು ಯುದ್ಧದ ಸನ್ನಿವೇಶವನ್ನು ಸೃಷ್ಟಿಸಿದರೆ ಮತ್ತು ಅವರ ಕಾರ್ಯಾಚರಣೆಯನ್ನು ಮುಂದುವರಿಸಿದರೆ, ನಮ್ಮ ಇಸ್ಲಾಮಿಕ್ ಸರ್ಕಾರ ಹಾಗೂ ನಾವು ಅವರನ್ನು ಎದುರಿಸುತ್ತೇವೆ’ಎಂದು ಅವರು ಹೇಳಿದ್ದಾರೆ.

ಕಳೆದ ಗುರುವಾರ ಐಸಿಸ್ ಉಗ್ರರು ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ದೇಶದಿಂದ ಹೊರಹೋಗುವ ನಿರೀಕ್ಷೆಯಲ್ಲಿದ್ದ ಹಲವು ಆಫ್ಗನ್ನರು ಮತ್ತು 13 ಅಮೆರಿಕ ಯೋಧರು ಮೃತಪಟ್ಟಿದ್ದರು.

ಈ ಮಧ್ಯೆ, ಕಳೆದ ಕೆಲವು ದಿನಗಳಿಂದ ಐಸಿಸ್ ನೆಲೆಗಳ ಮೇಲೆ ಯುನೈಟೆಡ್ ಸ್ಟೇಟ್ಸ್ ಮಾಡಿದ ಪ್ರತೀಕಾರದ ದಾಳಿ ಉಗ್ರರನ್ನು ಮತ್ತಷ್ಟು ಕೆರಳಿಸಿದೆ.

ಕಾಬೂಲ್ ವಿಮಾನ ನಿಲ್ದಾಣಕ್ಕೆ ಬೆದರಿಕೆ ಒಡ್ಡಿದ್ದ ಐಸಿಸ್‌ಗೆ ಸೇರಿದ್ದೆನ್ನಲಾದ ವಾಹನದ ಮೇಲೆ ಭಾನುವಾರ ಡ್ರೋನ್ ದಾಳಿ ನಡೆಸಿದ್ದಾಗಿ ಪೆಂಟಗನ್ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ವಕ್ತಾರ, 'ಅಂತಹ ಕಾರ್ಯಾಚರಣೆಗಳನ್ನು ಮಾಡಲು ಅವರಿಗೆ ಯಾವುದೇ ಅನುಮತಿ ಇಲ್ಲ ... ನಮ್ಮ ಸ್ವಾತಂತ್ರ್ಯವನ್ನು ಗೌರವಿಸಬೇಕು' ಎಂದಿದ್ದಾರೆ.

ತಾಲಿಬಾನ್ ಅಡಿಯಲ್ಲಿ ಪ್ರತೀಕಾರ ಅಥವಾ ದಮನದ ಆತಂಕದಲ್ಲಿರುವ ಹತ್ತು ಸಾವಿರಕ್ಕೂ ಹೆಚ್ಚು ವಿದೇಶಿಯರು ಮತ್ತು ಅಫ್ಗಾನಿಸ್ತಾನದ ಜನರ ಸ್ಥಳಾಂತರವು ಮಂಗಳವಾರ ಕೊನೆಗೊಳ್ಳಲಿದೆ. ಜೊತೆಗೆ, ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲೂ ನಾಳೆ ಕೊನೆಯ ದಿನವಾಗಿದೆ.

ಕಾಬೂಲ್ ಅನ್ನು ಆಕ್ರಮಿಸಿಕೊಂಡ ಬಳಿಕ ಅಮೆರಿಕ ಮತ್ತು ತಾಲಿಬಾನ್ ನಡುವೆ ಸ್ಥಳಾಂತರ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದ್ದ ಐಸಿಸ್, ಈ ಒಪ್ಪಂದದೊಂದಿಗೆ ತಾಲಿಬಾನ್, ಜಿಹಾದಿಗಳಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿತ್ತು. ಉಗ್ರಗಾಮಿ ಸಂವಹನವನ್ನು ಮೇಲ್ವಿಚಾರಣೆ ಮಾಡುವ ಸೈಟ್ ಇಂಟೆಲಿಜೆನ್ಸ್ ಗ್ರೂಪ್ ಪ್ರಕಾರ, ಐಸಿಸ್ ಹೋರಾಟವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT