ಮತ್ತೊಮ್ಮೆ ಆರ್ಥಿಕ ಸಂಕಷ್ಟದ ಸುಳಿಗೆ ಅಮೆರಿಕ: ಜಾನೆಟ್ ಎಚ್ಚರಿಕೆ

ವಾಷಿಂಗ್ಟನ್: ‘ಅಮೆರಿಕ ಮತ್ತೊಮ್ಮೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಈ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿರುವ ಜಾನೆಟ್ ಎಲೆನ್ ಹೇಳಿದ್ದಾರೆ.
‘ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದೇ ಆದಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಪ್ರಪಾತಕ್ಕೆ ನಾವೇ ತಳ್ಳಿದಂತಾಗಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.
ಡೆಲಾವೇರ್‌ನ ವಿಲ್ಮಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋವಿಡ್ ಪಿಡುಗು ದೇಶದ ಜನರ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರಿದೆ. ಭಾರಿ ಸಂಖ್ಯೆಯಲ್ಲಿ ಪ್ರಾಣ ಹಾನಿ ಸಂಭವಿಸಿದೆ. ಸಹಸ್ರಾರು ಜನರು ಉದ್ಯೋಗ ಕಳೆದುಕೊಂಡಿದ್ದರೆ, ಸಣ್ಣ ಉದ್ದಿಮೆಗಳು ಇನ್ನೂ ಸಂಕಷ್ಟ ಎದುರಿಸುತ್ತಿವೆ’ ಎಂದರು.
‘ಎಷ್ಟೋ ಜನರು ಊಟಕ್ಕೂ ಪರದಾಡುವಂತಾಗಿದೆ. ಕೆಲವರು ಮನೆ ಬಾಡಿಗೆ ಕಟ್ಟಲಾಗದೇ ತೊಂದರೆಗೆ ಸಿಲುಕಿದ್ದಾರೆ. ಒಟ್ಟಾರೆ ಇದೊಂದು ಅಮೆರಿಕದ ದುರಂತ’ ಎಂದೂ ಜಾನೆಟ್ ಕಳವಳ ವ್ಯಕ್ತಪಡಿಸಿದರು.
‘ದೇಶ ಎದುರಿಸುತ್ತಿರುವ ಈ ಸಂಕಷ್ಟವನ್ನು ಜಾನೆಟ್ ಎಲೆನ್ ಅವರಿಗಿಂತ ಸಮರ್ಥವಾಗಿ ಬೇರೆ ಯಾರೂ ಎದುರಿಸಲಾರರು. ಅವರು ದೇಶದ ಪ್ರತಿಭಾವಂತ ಆರ್ಥಿಕ ತಜ್ಞೆ, ಚಿಂತಕಿಯೂ ಆಗಿದ್ದಾರೆ’ ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಹೇಳಿದರು.
ಬಾಕ್ಸ್....
‘ಭಾರತ ಮೂಲದ ಅಮೆರಿಕನ್ ನೀರಾ ಟಂಡನ್ ಅವರು ನೀತಿ ನಿರೂಪಣೆ, ಆಡಳಿತದ ವಿವಿಧ ಸ್ತರಗಳಲ್ಲಿ ಎದುರಾಗುವ ಕ್ಲಿಷ್ಟಕರ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸಿದ ಅನುಭವ ಹೊಂದಿದ್ದಾರೆ’ ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಹೇಳಿದರು.
‘ಭಾರತದಿಂದ ವಲಸೆ ಬಂದ ನೀರಾ ತಾಯಿ ಅವರದು ಹೋರಾಟದ ಜೀವನ. ಅನೇಕ ಕಷ್ಟಗಳ ನಡುವೆಯೂ ನೀರಾ ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ನೀರಾ ಸಹ ಲಕ್ಷಾಂತರ ಅಮೆರಿಕನ್ನರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಹೋರಾಟವನ್ನು ಅರ್ಥ ಮಾಡಿಕೊಂಡಿದ್ದಾರೆ’ ಎಂದೂ ಹೇಳಿದರು.
‘ನನ್ನ ಸರ್ಕಾರದ ಬಜೆಟ್ ರೂಪಿಸುವ ಉಸ್ತುವಾರಿ ನೀರಾ ಅವರದು. ಕೋವಿಡ್ ಪಿಡುಗು ನಿಯಂತ್ರಣ, ಆರ್ಥಿಕತೆಗೆ ಪುನಶ್ಚೇತನಕ್ಕೆ ಸಹಕಾರಿಯಾಗುವಂಥ ಬಜೆಟ್ ಅನ್ನು ಅವರು ರೂಪಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.