ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಅಮೆರಿಕ ನೌಕೆಗಳ ದುರಸ್ತಿ?

2+2 ಸಭೆಯಲ್ಲಿ ಪರಿಶೀಲನೆ l ಭಾರತದ ಹಡಗುಕಟ್ಟೆ ಉದ್ಯಮಕ್ಕೆ ನೆರವು
Last Updated 13 ಏಪ್ರಿಲ್ 2022, 18:21 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತದ ಹಡಗುಕಟ್ಟೆಗಳಲ್ಲಿ ಅಮೆರಿಕದ ನೌಕೆಗಳ ನಿರ್ವಹಣೆ ಹಾಗೂ ದುರಸ್ತಿ ಸಾಧ್ಯತೆಗಳನ್ನು ಭಾರತ ಹಾಗೂ ಅಮೆರಿಕ ಪರಿಶೀಲಿಸುತ್ತಿವೆ. ಇದು ಚಿಕ್ಕ ಬೆಳವಣಿಗೆ ಎನಿಸಿದರೂ ಮಹತ್ವದ್ದು ಎಂದು ಪರಿಗಣಿಸಲಾಗಿದೆ.

ಈ ಬೆಳವಣಿಗೆಯಿಂದ ಭಾರತ–ಅಮೆರಿಕ ನಡುವಣ ವ್ಯಾಪಾರ ವೃದ್ಧಿಯಾಗುವುದಷ್ಟೇ ಅಲ್ಲದೆ, ಭಾರತದ ಹಡಗುಕಟ್ಟೆಗಳಿಗೆ ಹೆಚ್ಚುವರಿ ಗುತ್ತಿಗೆ ಸಿಗುತ್ತದೆ. ವಾಷಿಂಗ್ಟನ್‌ನಲ್ಲಿ ಸೋಮವಾರಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತುಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವೆ ನಡೆದ ಸಚಿವರ ಮಟ್ಟದ2+2 ಸಭೆಯಲ್ಲಿ ಈ ವಿಚಾರ ಚರ್ಚಿಸಲಾಗಿದೆ.

‘ನೌಕಾ ವಲಯದಲ್ಲಿ ರಕ್ಷಣಾ ಕೈಗಾರಿಕಾ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತದ ಹಡಗುಕಟ್ಟೆಗಳನ್ನು ಅಮೆರಿಕದ ಹಡಗುಗಳ ದುರಸ್ತಿ ಹಾಗೂ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ಉಭಯ ದೇಶಗಳು ಪರಿಶೀಲನೆ ನಡೆಸಲು ನಿರ್ಧರಿಸಿವೆ. ಇದರಿಂದ ಮಾರ್ಗಮಧ್ಯದಲ್ಲಿರುವ ಅಮೆರಿಕದ ಹಡಗುಗಳ ದುರಸ್ತಿ ಸಾಧ್ಯವಾಗಲಿದ್ದು, ಅಮೆರಿಕದ ಮಿಲಿಟರಿ ಸೀಲಿಫ್ಟ್ ಕಮಾಂಡ್‌ಗೆ (ಎಂಎಸ್‌ಸಿ) ನೆರವಾಗಲಿದೆ’ ಎಂದು ಸಭೆಯ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಮಹಾಸಾಗರ–ಪೆಸಿಫಿಕ್ ವಲಯ ಸೇರಿ ಕಳೆದ ಒಂದು ದಶಕದ ಅವಧಿಯಲ್ಲಿ ಭಾರತ ಹಾಗೂ ಅಮೆರಿಕದ ಸೇನಾ ಸಹಕಾರ ಹೆಚ್ಚಳವಾಗಿದೆ.

ಪಾಕ್ ತಿರಸ್ಕಾರ: ಭಾರತ–ಅಮೆರಿಕ ನಡುವಿನ 2+2 ಸಭೆಯಲ್ಲಿ ಪಾಕಿಸ್ತಾನದ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಆರೋಪಿಸಿದೆ. ದ್ವಿಪಕ್ಷೀಯ ಸಭೆ ಬಳಿಕ ಹೊರಡಿಸಲಾಗದ ಜಂಟಿ ಹೇಳಿಕೆಯಲ್ಲಿ ಮೂರನೇ ದೇಶದ ಹೆಸರನ್ನು ಉಲ್ಲೇಖ ಮಾಡಲಾಗಿದೆ ಎಂದು ಕಚೇರಿ ತಿಳಿಸಿದೆ.

ಹವಾಯಿಯಲ್ಲಿ ರಾಜನಾಥ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2+2 ಸಭೆಯ ಬಳಿಕ ಹವಾಯಿಗೆ ಬಂದಿಳಿದಿದ್ದಾರೆ. ಇಲ್ಲಿರುವ ಅಮೆರಿಕದ ಇಂಡೊ–ಪೆಸಿಫಿಕ್ ಕಮಾಂಡ್ ಕೇಂದ್ರ ಕಚೇರಿಗೆ ಅವರು ಭೇಟಿ ನೀಡಿದರು. ಅಮೆರಿಕದ ಇಂಡೊ–ಪೆಸಿಫಿಕ್ ಕಮಾಂಡ್ ಹಾಗೂ ಭಾರತದ ಸೇನಾ ಪಡೆಗಳು ಹಲವು ಜಂಟಿ ಕಸರತ್ತು ನಡೆಸಿದ್ದು, ವಿವಿಧ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿವೆ.

‘ಹಾವರ್ಡ್‌ ವಿ.ವಿಯ ಕೊಡುಗೆ ದೊಡ್ಡದು’

ಭಾರತ ಹಾಗೂ ಅಮೆರಿಕದ ನಡುವಿನ ಸಂಬಂಧ ಸಧೃಡಗೊಳಿಸವಲ್ಲಿ ಅಮೆರಿಕದ ಹಾವರ್ಡ್‌ ವಿಶ್ವವಿದ್ಯಾಲಯ ಮಹತ್ವದ ಕೊಡುಗೆ ನೀಡಿದೆ ಎಂದು ಬ್ಲಿಂಕನ್ ಹೇಳಿದ್ದಾರೆ.

ಎಸ್. ಜೈಶಂಕರ್ ಅವರೊಂದಿಗೆ ಹಾವರ್ಡ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಭೇಟಿ ನೀಡಿದ್ದ ಅವರು, ಉಭಯ ದೇಶಗಳ ನಡುವೆ ಶಿಕ್ಷಣ ಸಂಬಂಧ ಸುಧಾರಣೆ ಮಾರ್ಗಗಳ ಬಗ್ಗೆ ಸಂವಾದ ನಡೆಸಿದರು.

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾವರ್ಡ್‌ ವಿದ್ಯಾರ್ಥಿನಿ.

ಶಿಕ್ಷಣ ಹಾಗೂ ಕೌಶಲ ತರಬೇತಿ ವಲಯದಲ್ಲಿ ಕಾರ್ಯಕಾರಿ ಗುಂಪು ರಚಿಸಲು ಉಭಯ ದೇಶಗಳು2+2 ಸಭೆಯಲ್ಲಿ ನಿರ್ಧರಿಸಿದವು. ಈ ಗುಂಪು, ಜಂಟಿ ಸಂಶೋಧನಾ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಹಾಗೂ ಅಮೆರಿಕದ ಶೈಕ್ಷಣಿಕ ಸಂಸ್ಥೆಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT