ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕನ್ನರು ಈಗಲೇ ಉಕ್ರೇನ್‌ನಿಂದ ಹೊರಡಿ: ರಷ್ಯಾದ ದಾಳಿ ಎಚ್ಚರಿಕೆ ನೀಡಿದ ಬೈಡನ್

Last Updated 11 ಫೆಬ್ರುವರಿ 2022, 3:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಪ್ರಜೆಗಳು ಈ ಕೂಡಲೇ ಉಕ್ರೇನ್‌ನಿಂದ ಹೊರಡುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗುರುವಾರ ಮನವಿ ಮಾಡಿದ್ದಾರೆ. ಈ ಮೂಲಕ ರಷ್ಯಾದೊಂದಿಗೆ ತೀವ್ರ ಮಿಲಿಟರಿ ಸಂಘರ್ಷ ಎದುರಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ರವಾನಿಸಿದ್ದಾರೆ.

ಎನ್‌ಬಿಸಿ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಬೈಡನ್‌, 'ಅಮೆರಿಕದ ನಾಗರಿಕರು ಈಗಲೇ ಅಲ್ಲಿಂದ ಹೊರಡಬೇಕು' ಎಂದಿದ್ದಾರೆ.

'ಇದು ಉಗ್ರ ಸಂಘಟನೆಗಳ ಜೊತೆಗಿನ ಸಂಘರ್ಷವಲ್ಲ, ಜಗತ್ತಿನ ಅತಿ ದೊಡ್ಡ ಸೇನಾ ಬಲವನ್ನು ಹೊಂದಿರುವ ರಾಷ್ಟ್ರದೊಂದಿಗೆ ನಾವು ಈಗ ಮುಖಾಮುಖಿಯಾಗಿದ್ದೇವೆ. ಇದು ಸಂಪೂರ್ಣ ಭಿನ್ನ ಪರಿಸ್ಥಿತಿಯಾಗಿದ್ದು, ಯಾವುದೇ ಸಮಯದಲ್ಲಿ ವಿಚಿತ್ರ ತಿರುವು ಎದುರಾಗಬಹುದು' ಎಂದು ಬೈಡನ್‌ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್‌ನಲ್ಲಿ ಅಮೆರಿಕ ನಾಗರಿಕರ ರಕ್ಷಣೆಗೆ ಅಮೆರಿಕ ಸೇನೆಯನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಬೈಡನ್‌ ಹೇಳಿದ್ದು, ಅಮೆರಿಕ ಮತ್ತು ರಷ್ಯಾ ಸೇನಾ ಪಡೆಗಳು ಮುಖಾಮುಖಿಯಾದರೆ ಅದು 'ವಿಶ್ವ ಯುದ್ಧಕ್ಕೆ' ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಮೆರಿಕದ ಸೇನೆ ಮತ್ತು ಗುಪ್ತಚರ ಇಲಾಖೆಯ ವಿಶ್ಲೇಷಣೆಗಳ ಪ್ರಕಾರ, ಉಕ್ರೇನ್‌ ಮೇಲೆ ರಷ್ಯಾ ಪಡೆಗಳು ಸೇನಾ ಟ್ಯಾಂಕ್‌ಗಳ ಜೊತೆಗೆ ದೊಡ್ಡ ಮಟ್ಟದಲ್ಲಿ ಆಕ್ರಮಣ ನಡೆಸಲಿವೆ.

'ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಉಕ್ರೇನ್‌ ಕೈಗೊಳ್ಳುವ ಯಾವುದೇ ಕ್ರಮವು ಅಮೆರಿಕದ ನಾಗರಿಕರ ಮೇಲೆ ಪರಿಣಾಮ ಬೀರಲಿದೆ....' ಎಂದು ಬೈಡನ್‌ ಹೇಳಿದ್ದಾರೆ.

ಅಮೆರಿಕ ಸರ್ಕಾರವು ತನ್ನ ಪ್ರಜೆಗಳಿಗೆ ಹೊರಡಿಸಿರುವ ಸಲಹಾಪತ್ರದ ಪ್ರಕಾರ, 'ರಷ್ಯಾದ ಸೇನಾ ಕಾರ್ಯಾಚರಣೆಯ ಅಪಾಯ ಮತ್ತು ಕೋವಿಡ್‌–19 ಕಾರಣಗಳಿಂದಾಗಿ ಅಮೆರಿಕನ್ನರು ಉಕ್ರೇನ್‌ಗೆ ಪ್ರಯಾಣಿಸಬಾರದು; ಪ್ರಸ್ತುತ ಉಕ್ರೇನ್‌ನಲ್ಲಿ ಇರುವವರು ವಾಣಿಜ್ಯ ಬಳಕೆ ವಾಹನಗಳು ಅಥವಾ ಖಾಸಗಿ ವ್ಯವಸ್ಥೆಗಳ ಮೂಲಕ ಅಲ್ಲಿಂದ ಹೊರಡಬೇಕು. ಉಕ್ರೇನ್‌ನಲ್ಲಿ ಅಪರಾಧ ಕೃತ್ಯಗಳು, ರಷ್ಯಾ ಪಡೆಗಳು ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಅಪಾಯದ ಮಟ್ಟ ಹೆಚ್ಚಿದೆ.. ' ಎಂದು ತಿಳಿಸಿದೆ.

ರೊಮೇನಿಯಾದಲ್ಲಿ ಅಮೆರಿಕದ ಸೇನಾ ಪಡೆ
ರೊಮೇನಿಯಾದಲ್ಲಿ ಅಮೆರಿಕದ ಸೇನಾ ಪಡೆ

ಅಮೆರಿಕದ ಯೋಧರನ್ನು ಒಳಗೊಂಡ ಮೊದಲ ತಂಡವು ಫೆಬ್ರುವರಿ 5ರಂದೇ ಪೋಲೆಂಡ್ ತಲುಪಿದೆ. ಅಮೆರಿಕದ 1,700 ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗುತ್ತದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪ್ರಕಟಿಸಿತ್ತು. 1,700 ಯೋಧರನ್ನು ಪೋಲೆಂಡ್‌ಗೆ, ಜರ್ಮನಿಯಲ್ಲಿರುವ ಅಮೆರಿಕದ 1,000 ಮಂದಿ ಸೇನಾ ಸಿಬ್ಬಂದಿಯನ್ನು ರೊಮೇನಿಯಾಗೆ ಹಾಗೂ 8,500 ಯೋಧರನ್ನು ಯಾವುದೇ ಕಡೆಗೆ ತೆರಳಲು ಸಜ್ಜಾಗಿರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

'ಉಕ್ರೇನ್ ಗಡಿಯಲ್ಲಿ ರಷ್ಯಾದ ಸೈನಿಕರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಸಂಭವನೀಯ ದಾಳಿಯ ಸಮಯ ಸಮೀಪಿಸುತ್ತಿದೆ. ಇದು ಯುರೋಪ್‌ಗೆ ಭದ್ರತೆಗೆ ಅಪಾಯಕಾರಿ ಕ್ಷಣ' ಎಂದು ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.

ಉಕ್ರೇನ್‌ ಸಂಘರ್ಷ...

ರಷ್ಯಾ ಹಾಗೂ ಉಕ್ರೇನ್ ನಡುವಿನ ದಶಕಗಳ ಅಂತಃಕಲಹ ಇದೀಗ ಪೂರ್ಣ ಸ್ವರೂಪದ ಯುದ್ಧವಾಗಿ ಮಾರ್ಪಾಡಾಗುವ ಸನ್ನಿವೇಶ ಸೃಷ್ಟಿಯಾಗಿದೆ.

1991ರಲ್ಲಿ ಸೋವಿಯತ್ ಒಕ್ಕೂಟ ಪತನವಾದ ಬಳಿಕ, ತನ್ನ ಜೊತೆ ಗಡಿ ಹಂಚಿಕೊಂಡಿರುವ ಉಕ್ರೇನ್ ಮೇಲೆ ರಷ್ಯಾ ಕಣ್ಣಿಟ್ಟಿತ್ತು. 2014ರಲ್ಲಿ ಉಕ್ರೇನ್‌ನ ಭಾಗವಾಗಿದ್ದ ಕ್ರಿಮಿಯಾವನ್ನು ಸೇರ್ಪಡೆ ಮಾಡಿಕೊಂಡ ಬಳಿಕ, ರಷ್ಯಾ ಹಾಗೂ ಉಕ್ರೇನ್ ನಡುವಣ ಸಂಘರ್ಷವು ಕಾವು ಪಡೆಯಿತು. ಉಕ್ರೇನ್ ಪೂರ್ವಭಾಗದ ಕೆಲವು ಕೈಗಾರಿಕಾ ಪ್ರದೇಶಗಳನ್ನೂ ತನ್ನ ನಿಯಂತ್ರಣಕ್ಕೆ ತೆಗೆದು ಕೊಂಡಿತ್ತು. ಅಂದಿನಿಂದ ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಹಾಗೂ ಉಕ್ರೇನ್ ಸೇನೆಯ ನಡುವೆ ಗಡಿಗಳಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಲ್ಲಿಯವರೆಗೆ ಈ ಸಂಘರ್ಷದಲ್ಲಿ 14,000 ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

2014ರಲ್ಲಿ 298 ಜನರು ಪ್ರಯಾಣಿಸುತ್ತಿದ್ದ ಮಲೇಷ್ಯಾ ಏರ್‌ಲೈನ್ಸ್ ವಿಮಾನವು ಉಕ್ರೇನ್ ವಾಯುಪ್ರದೇಶದಲ್ಲಿ ಪತನವಾದ ಬಳಿಕ ಇದು ಅಂತರರಾಷ್ಟ್ರೀಯ ಸಂಘರ್ಷವಾಗಿ ಮಾರ್ಪಾಡಾಯಿತು. ರಷ್ಯಾ ನಿರ್ಮಿತ ಕ್ಷಿಪಣಿಯಿಂದ ವಿಮಾನವನ್ನು ಹೊಡೆಯಲಾಗಿದೆ ಎಂದು ತನಿಖಾ ವರದಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT