ಬುಧವಾರ, ನವೆಂಬರ್ 25, 2020
21 °C
ಇಂದು ರಾತ್ರಿ ಸಂವಾದ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌–ಬೈಡನ್‌ ಅಂತಿಮ ಮುಖಾಮುಖಿಗೆ ವೇದಿಕೆ ಸಿದ್ಧ

ಎಪಿ Updated:

ಅಕ್ಷರ ಗಾತ್ರ : | |

Prajavani

ನಾಶ್‌ವಿಲ್ಲೆ: ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲು ಇನ್ನೂ 12 ದಿನ ಬಾಕಿ ಉಳಿದಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌, ಡೆಮಾಕ್ರಟಿಕ್‌ ಪಕ್ಷದ ಜೊ ಬೈಡನ್‌ ನಡುವೆ ಎರಡನೇ ಮತ್ತು ಕೊನೆಯ ಸಂವಾದ ಗುರುವಾರ ರಾತ್ರಿ ನಡೆಯಲಿದೆ.

ಟೆನೆಸ್ಸಿಯಲ್ಲಿ ನಡೆಯಲಿರುವ 90 ನಿಮಿಷಗಳ ಅವಧಿಯ ಮುಖಾಮುಖಿ ವೇಳೆ ಟ್ರಂಪ್‌ ಹಾಗೂ ಬೈಡನ್‌ ಅವರು ದೇಶದ ಜನರ ಮುಂದೆ ತಮ್ಮ ಸಾಧನೆ, ಮುನ್ನೋಟ ಏನು ಎಂಬುದನ್ನು ಮತ್ತೊಮ್ಮೆ ಪ್ರಸ್ತುತಪಡಿಸಲಿದ್ದಾರೆ.

ಅಧ್ಯಕ್ಷ ಗಾದಿ ಏರಲು ನಡೆದಿರುವ ಈ ಪೈಪೋಟಿಗೆ ಸಂಬಂಧಿಸಿ ಈವರೆಗೆ ನಡೆದಿರುವ ಸಮೀಕ್ಷೆಗಳು ಬೈಡನ್‌ ಅವರದೇ ಮೇಲುಗೈ ಎಂದು ಹೇಳುತ್ತಿವೆ. ಸಹಜವಾಗಿಯೇ ಇದು ಟ್ರಂಪ್‌ ಪಾಳೆಯದಲ್ಲಿ ತುಸು ಆತಂಕಕ್ಕೆ ಕಾರಣವಾಗಿದೆ. 

ಇಂಥ ಸಂದರ್ಭದಲ್ಲಿ ಟ್ರಂಪ್‌ ಅವರು ಈ ಸಮೀಕ್ಷೆಗಳು ಹೊರಹಾಕಿರುವ ಲೆಕ್ಕಾಚಾರವನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಈ ಸಂವಾದದ ವೇಳೆ ತಮ್ಮ ವಿಚಾರ ಮಂಡನೆ ಮಾಡುವರೇ ಎಂಬ ನಿರೀಕ್ಷೆಯಲ್ಲಿ ಅವರ ಬೆಂಬಲಿಗರಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಮಾಡಲು ಟ್ರಂಪ್‌ ಅವರಿಗೆ ಇದು ಕೊನೆಯ ಅವಕಾಶವೂ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೈಡನ್‌ ವಿರುದ್ಧ ಟ್ರಂಪ್‌ ಅವರು ಆಕ್ರಮಣಕಾರಿ ಮಾತುಗಳನ್ನಾಡುತ್ತಲೇ ಬಂದಿದ್ದಾರೆ. ಆದರೆ, ಬೈಡನ್‌ ವಿರುದ್ಧದ ಟೀಕೆಗಳು ಟ್ರಂಪ್ ಅವರಿಗೇ ತಿರುಗುಬಾಣವಾಗಿದ್ದಕ್ಕೆ ಕಳೆದ ತಿಂಗಳು ನಡೆದ ಮೊದಲ ಸಂವಾದವೇ ಸಾಕ್ಷಿಯಾಗಿತ್ತು ಎಂದೂ ವಿಶ್ಲೇಷಕರು ಹೇಳುತ್ತಾರೆ. 

ಈ ಮೊದಲು ನಡೆದ ಸಂವಾದದ ವೇಳೆ ಬೈಡನ್‌ ಅವರಿಗೆ ತಮ್ಮ ಪ್ರತಿಕ್ರಿಯೆ ನೀಡಲು ಸಹ ಟ್ರಂಪ್‌ ಅವಕಾಶ ನೀಡಿರಲಿಲ್ಲ. ಈ ಬಾರಿಯಾದರೂ ಅವರು ಸಮಾಧಾನದಿಂದ ತಮ್ಮ ಎದುರಾಳಿಯ ಮಾತುಗಳನ್ನು ಕೇಳುವರೇ ಎಂಬುದು ಜನರ ಕುತೂಹಲಕ್ಕೆ ಕಾರಣವಾಗಿದೆ. 

ಟ್ರಂಪ್‌ ವಿರೋಧಿ ಪಾಳೆಯ ಪ್ರಮುಖ ಅಸ್ತ್ರವೆಂದರೆ ಕೋವಿಡ್‌–19 ಪಿಡುಗು ನಿರ್ವಹಣೆ. ಈ ಕುರಿತ ಪ್ರಶ್ನೆಗಳಿಗೆ ಈಗಲಾದರೂ ಟ್ರಂಪ್‌ ಸಮರ್ಪಕ ಉತ್ತರ ನೀಡುವರೇ ಎಂಬುದೂ ಜನರ ನಿರೀಕ್ಷೆ ಎಂದು ಮೂಲಗಳು ಹೇಳುತ್ತವೆ. 

ಚುನಾವಣೆ ಹಿನ್ನೆಲೆಯಲ್ಲಿ ನಡೆಯುವ ಕೊನೆಯ ಸಂವಾದ ಕೇವಲ ಟ್ರಂಪ್‌ ಅವರಿಗೆ ಮಾತ್ರ ಮಹತ್ವದ್ದಲ್ಲ. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ ಅವರ ಪಾಲಿಗೂ ಸವಾಲಿನದು. ಪುತ್ರ ಹಂಟರ್‌ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಬೈಡನ್‌ ಹೇಗೆ ಪ್ರತಿಕ್ರಿಯಿಸುವರು ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು