ಮಂಗಳವಾರ, ಅಕ್ಟೋಬರ್ 19, 2021
24 °C

‘ಔಕಸ್‌’ ಮೈತ್ರಿಕೂಟಕ್ಕೆ ಭಾರತ, ಜಪಾನ್‌ ಸೇರ್ಪಡೆ ಇಲ್ಲ: ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಬ್ರಿಟನ್‌, ಆಸ್ಟ್ರೇಲಿಯಾ ಜೊತೆ ಸೇರಿ ರಚಿಸಲಾಗಿರುವ ತ್ರಿಪಕ್ಷೀಯ ಮೈತ್ರಿಕೂಟಕ್ಕೆ (ಔಕಸ್‌) ಭಾರತ ಅಥವಾ ಜಪಾನ್‌ ಅನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಅಮೆರಿಕ ಹೇಳಿದೆ.

‘ಹಿಂದೂ ಮಹಾಸಾಗರ– ಪೆಸಿಫಿಕ್‌ ಪ್ರದೇಶದ ಭದ್ರತೆಗಾಗಿ ರಚಿಸಿಕೊಂಡಿರುವ ಈ ತ್ರಿಪಕ್ಷೀಯ ಮೈತ್ರಿಕೂಟದಲ್ಲಿ ಇತರ ದೇಶಗಳಿಗೆ ಸ್ಥಾನ ನೀಡುವುದಿಲ್ಲ. ಈ ಕುರಿತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್‌ ಅವರಿಗೂ ಈಗಾಗಲೇ ಸ್ಪಷ್ಟಪಡಿಸಲಾಗಿದೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕ್ವಾಡ್‌’ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತ ಹಾಗೂ ಜಪಾನ್‌ನ ಮುಖಂಡರು ವಾಷಿಂಗ್ಟನ್‌ಗೆ ಆಗಮಿಸಿದ್ದಾರೆ. ಈ ತ್ರಿಪಕ್ಷೀಯ ಮೈತ್ರಿಕೂಟದಲ್ಲಿ ಅವರಿಗೂ ಸ್ಥಾನ ನೀಡುವ ಸಾಧ್ಯತೆ ಇದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಹಿಂದೂ ಮಹಾಸಾಗರ– ಪೆಸಿಫಿಕ್‌ ಪ್ರದೇಶದಲ್ಲಿ ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾಗಳು ‘ಔಕಸ್‌’(AUKUS) ಹೆಸರಿನಲ್ಲಿ ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ರಚಿಸಿಕೊಂಡಿವೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಹಾಗೂ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಸೆ. 15ರಂದು ಈ ಮೈತ್ರಿಕೂಟ ರಚಿಸಿರುವುದನ್ನು ಘೋಷಿಸಿದ್ದರು.

ಹಿಂದೂ ಮಹಾಸಾಗರ– ಪೆಸಿಫಿಕ್‌ ಪ್ರದೇಶದಲ್ಲಿ ತಮ್ಮ ಪಾಲುದಾರಿಕೆಯ ರಕ್ಷಣೆ, ಪರಮಾಣು– ಚಾಲಿತ ಜಲಾಂತರ್ಗಾಮಿಗಳ ಅಭಿವೃದ್ಧಿಗೆ ಆಸ್ಟ್ರೇಲಿಯಾಗೆ ನೆರವು ನೀಡುವುದೂ ಸೇರಿದಂತೆ ಹೆಚ್ಚಿನ ರಕ್ಷಣಾ ಸಾಮರ್ಥ್ಯಗಳನ್ನು ಹಂಚಿಕೊಳ್ಳುವ ಅವಕಾಶಗಳನ್ನು ಈ ಮೈತ್ರಿ ಕಲ್ಪಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು