ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಸೆನೆಟ್‌ನಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭ

Last Updated 11 ಫೆಬ್ರುವರಿ 2021, 3:27 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಸೆನೆಟ್‌ನಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಿದೆ. ಡೆಮಾಕ್ರಾಟ್ ನಿಯಂತ್ರಿತ ಸಂಸತ್ ಸಭೆಯಿಂದ ಮಾಜಿ ಅಧ್ಯಕ್ಷರ ವಿರುದ್ಧ ಬಂಡಾಯವನ್ನು ಪ್ರಚೋದಿಸಿದ ಆರೋಪವನ್ನು ಬಲವಾಗಿ ಪ್ರತಿಪಾದನೆ ಮಾಡಲಾಗಿತ್ತು. ಇದೀಗ, ಸೆನೆಟ್‌ನಲ್ಲಿ ಪ್ರಕ್ರಿಯೆ ಆರಂಭವಾಗಿದೆ. .

ನವೆಂಬರ್ 3ರಂದು ನಡೆದ ಅಮೆರಿಕದ ಅಧ್ಯಕ್ಷ ಚುನಾವಣೆಯ ಮತ ಎಣಿಕೆ ಮತ್ತು ಜಯಶಾಲಿಗಳಿಗೆ ಪ್ರಮಾಣಪತ್ರ ನೀಡುವ ಸಂವಿಧಾನಬದ್ಧ ಕೆಲಸದಲ್ಲಿ ಜನವರಿ 6ರಂದು ಕಾಂಗ್ರೆಸ್ಸಿಗರು ಮತ್ತು ಸೆನೆಟ್ ಸದಸ್ಯರು ನಿರತರಾಗಿದ್ದ ಸಂದರ್ಭ ಕ್ಯಾಪಿಟಲ್ ಹಿಲ್ಸ್ ಮೇಲೆ ತನ್ನ ಬೆಂಬಲಿಗರು ದಾಳಿ ನಡೆಸಲು ಪ್ರಚೋದನೆ ನೀಡಿದ ಆರೋಪವನ್ನು ಡೊನಾಲ್ಡ್ ಟ್ರಂಪ್ ವಿರುದ್ಧಡೆಮಾಕ್ರಟಿಕ್ ಕಾಂಗ್ರೆಸ್ ಸದಸ್ಯ ಜೇಮೀ ರಾಸ್ಕಿನ್ ನೇತೃತ್ವದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಪಕ್ಷದ ಸದಸ್ಯರನ್ನೊಳಗೊಂಡ ತಂಡವು ಹೊರಿಸಿದೆ.

ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತಿದ್ದರೂ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಬಳಿಕ ಅವರ ಬೆಂಬಲಿಗರು ಕ್ಯಾಪಿಟಲ್ ಹಿಲ್ಸ್‌ಗೆ ನುಗ್ಗಿ ದಾಂಧಲೆ ನಡೆಸಿದ್ದರು. ಜನವರಿ 20 ರಂದು ಜೋ ಬೈಡನ್ ಅಮೆರಿಕದ 46 ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಡೆಮಾಕ್ರಾಟ್ ಬಹುಮತ ಹೊಂದಿರುವ ಸದನವು ಜನವರಿ 20ಕ್ಕಿಂತಲೂ ಮೊದಲೆ ಟ್ರಂಪ್ ಅಧಿಕಾರದಲ್ಲಿದ್ದಾಗಲೆ ಅವರ ವಿರುದ್ಧ ಮೊದಲು ದೋಷಾರೋಪಣೆ ಮಾಡಿತು, ಸೆನೆಟ್‌ನಲ್ಲಿ ಟ್ರಂಪ್ ಅಧಿಕಾರದಿಂದ ಕೆಳಗಿಳಿದ ಮೂರು ವಾರಗಳ ನಂತರ ವಾಗ್ದಂಡನೆ ವಿಚಾರಣೆ ಪ್ರಾರಂಭವಾಗಿದೆ. ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಮಾಜಿ ಅಧ್ಯಕ್ಷರನ್ನು ವಾಗ್ದಂಡನೆಗೆ ಒಳಪಡಿಸಲಾಗುತ್ತಿದೆ. ಎರಡು ಬಾರಿ ವಾಗ್ದಂಡನೆಗೆ ಒಳಗಾದ ಮೊದಲ ಅಧ್ಯಕ್ಷರೂ ಟ್ರಂಪ್ ಆಗಿದ್ದಾರೆ.

ಕ್ಯಾಪಿಟಲ್‌ನಲ್ಲಿ ಗಲಭೆಗೆ ಟ್ರಂಪ್ ಉದ್ದೇಶಪೂರ್ವಕವಾಗಿ ದಂಗೆಕೋರ ಜನಸಮೂಹವನ್ನು ಪ್ರಚೋದಿಸಿದರು ಎಂದು ರಾಸ್ಕಿನ್ ಗಂಭೀರ ಆರೋಪ ಮಾಡಿದ್ದಾರೆ. ಟ್ರಂಪ್ ಅವರನ್ನು ದೋಷಾರೋಪಣೆಗೆ ಒಳಪಡಿಸಬೇಕು ಎಂದು ಹಲವು ಡೆಮಾಕ್ರಟಿಕ್ ಸಹೋದ್ಯೋಗಿಗಳು ಸೆನೆಟ್‌ನಲ್ಲಿ ವಾದ ಮಂಡಿಸಿದರು. ಅಮೆರಿಕದ ಸಂಸತ್ ಸದಸ್ಯರು ಗಲಭೆಕೋರರಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಓಡುತ್ತಿರುವ ಜನವರಿ 6 ರ ಘಟನೆಯ ಕೆಲವು ಅಪರೂಪದ ವಿಡಿಯೋ ತುಣುಕನ್ನು ಅವರು ಪ್ರದರ್ಶಿಸಿದರು,

ಒಂದು ವಿಡಿಯೊದಲ್ಲಿ ಅಂದಿನ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಅವರ ಕುಟುಂಬವು ಸೆನೆಟ್ ಚೇಂಬರ್‌ನಿಂದ ಹೊರಗೆ ಓಡಿ ಬರುತ್ತಿರುವ ದೃಶ್ಯ ಕಂಡುಬಂದಿದೆ.

"ಮಾಜಿ ಅಧ್ಯಕ್ಷ ಟ್ರಂಪ್ ಮುಗ್ಧ ಪ್ರೇಕ್ಷಕನಲ್ಲ ಎಂದು ಪುರಾವೆಗಳು ನಿಮಗೆ ತೋರಿಸುತ್ತವೆ. ಜನವರಿ 6 ರ ದಂಗೆಯನ್ನು ಅವರು ಸ್ಪಷ್ಟವಾಗಿ ಪ್ರಚೋದಿಸಿದ್ದಾರೆಂದು ಪುರಾವೆಗಳು ತೋರಿಸುತ್ತವೆ. ಡೊನಾಲ್ಡ್ ಟ್ರಂಪ್ ಅವರು ಕಮಾಂಡರ್ ಇನ್ ಚೀಫ್ ಆಗಿ ತಮ್ಮ ವೃತ್ತಿ ಧರ್ಮವನ್ನು ತ್ಯಾಗ ಮಾಡಿದರು. ಅಪಾಯಕಾರಿ ದಂಗೆಯ ಪ್ರಧಾನ ಪ್ರಚೋದಕರಾಗಿದ್ದರು ಎಂದು ಇದು ತೋರಿಸುತ್ತದೆ ” ಎಂದು ರಾಸ್ಕಿನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT