ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್ ಪುತ್ರಿಯರು, ರಷ್ಯಾದ ಬ್ಯಾಂಕ್‌ಗಳ ವಿರುದ್ಧ ಅಮೆರಿಕದ ಮತ್ತಷ್ಟು ನಿರ್ಬಂಧ

Last Updated 7 ಏಪ್ರಿಲ್ 2022, 4:20 IST
ಅಕ್ಷರ ಗಾತ್ರ

ವಾಷಿಂಗ್ಟನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಇಬ್ಬರು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಅಮೆರಿಕವು ನಿರ್ಬಂಧಗಳನ್ನು ಘೋಷಿಸಿದೆ. ಉಕ್ರೇನ್‌ನಲ್ಲಿನ ಯುದ್ಧಾಪರಾಧಗಳಿಗೆ ಪ್ರತೀಕಾರವಾಗಿ ರಷ್ಯಾದ ಬ್ಯಾಂಕ್‌ಗಳ ಮೇಲೆ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದೂ ಅದು ಹೇಳಿದೆ.

ಉಕ್ರೇನ್ ಮೇಲೆ ಆಕ್ರಮಣ, ಬುಕಾ ಪಟ್ಟಣದಲ್ಲಿ ನರಮೇಧದ ಆರೋಪಗಳ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಹೊಸ ಹೂಡಿಕೆಯ ಮೇಲಿನ ನಿಷೇಧ ಮತ್ತು ಕಲ್ಲಿದ್ದಲು ಮೇಲೆ ಯುರೋಪ್ ನಿರ್ಬಂಧ ಸೇರಿದಂತೆ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲು ಬ್ರಿಟನ್ ಮತ್ತು ಅಮರಿಕ ಸಿದ್ಧವಾಗಿವೆ.

ರಷ್ಯಾದ ಎರಡು ದೊಡ್ಡ ಬ್ಯಾಂಕ್‌ಗಳಾದ ಸ್ಬೆರ್‌ಬ್ಯಾಂಕ್ ಮತ್ತು ಆಲ್ಫಾ-ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಂಡಿರುವ ಅಮರಿಕ, ಅಮೆರಿಕದ ಹಣಕಾಸು ವ್ಯವಸ್ಥೆಯ ಮೂಲಕ ಈ ಬ್ಯಾಂಕ್‌ಗಳ ವಹಿವಾಟನ್ನು ನಿಷೇಧಿಸಲಾಗಿದೆ. ಜೊತೆಗೆ, ಅಮೆರಿಕನ್ನರು ಆ ಎರಡೂ ಸಂಸ್ಥೆಗಳೊಂದಿಗೆ ವ್ಯಾಪಾರ ಮಾಡುವುದನ್ನು ನಿರ್ಬಂಧಿಸಿದೆ.

ಪುಟಿನ್ ಅವರ ಮಕ್ಕಳಾದ ಮರಿಯಾ ಪುಟಿನಾ ಮತ್ತು ಕಟೆರಿನಾ ಟಿಖೋನೋವಾ ಅವರನ್ನು ಗುರಿಯಾಗಿಟ್ಟುಕೊಂಡು ನಿರ್ಬಂಧಗಳನ್ನು ವಿಧಿಸುವುದರ ಜೊತೆಗೆ ಪ್ರಧಾನ ಮಂತ್ರಿ ಮಿಖಾಯಿಲ್ ಮಿಶುಸ್ಟಿನ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ಪತ್ನಿ ಮತ್ತು ಮಕ್ಕಳು; ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಸೇರಿದಂತೆ ರಷ್ಯಾದ ಭದ್ರತಾ ಮಂಡಳಿಯ ಸದಸ್ಯರನ್ನೂ ಗುರಿಯಾಗಿಸಿಕೊಂಡು ನಿಷೇಧ ಹೇರಲಾಗಿದೆ.

ಅಮೆರಿಕದ ಈ ಹೊಸ ಕ್ರಮಗಳು ಅಮೆರಿಕದ ಹಣಕಾಸು ವ್ಯವಸ್ಥೆಯಿಂದ ಪುಟಿನ್ ಅವರ ಎಲ್ಲಾ ನಿಕಟ ಕುಟುಂಬ ಸದಸ್ಯರ ವ್ಯವಹಾರವನ್ನು ಕಡಿತಗೊಳಿಸುತ್ತವೆ. ಅಲ್ಲದೆ, ಅಮೆರಿಕದಲ್ಲಿ ಅವರು ಹೊಂದಿರುವ ಎಲ್ಲ ಆಸ್ತಿಗಳಿಗೆ ತಡೆ ಹಾಕಲಾಗುತ್ತದೆ.

ಈ ನಿರ್ಬಂಧಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ‘ಪರಿಣಾಮಕಾರಿ’ಎಂದು ಬಣ್ಣಿಸಿದ್ದಾರೆ.

‘ಬುಕಾದಲ್ಲಿ ರಷ್ಯಾ ತಾನು ನಡೆಸಿರುವ ನರಮೇಧಕ್ಕೆ ತೀವ್ರ ಮತ್ತು ತಕ್ಷಣ ಬೆಲೆ ತೆರಬೇಕಾಗುತ್ತದೆ ಎಂದು ನಾನು ಸ್ಪಷ್ಟಪಡಿಸುತ್ತೇನೆ’ಎಂದು ಬೈಡನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ವಿಶ್ವದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಅಮೆರಿಕನ್ನರು ರಷ್ಯಾದಲ್ಲಿ ಹೊಸ ಹೂಡಿಕೆ ಮಾಡುವುದನ್ನು ನಿಷೇಧಿಸುವ ಆದೇಶಕ್ಕೆ ಬೈಡನ್ ಶೀಘ್ರ ಸಹಿ ಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಶ್ವೇತಭವನದ ಪ್ರಕಾರ, ಅಮೆರಿಕದ ಹಣಕಾಸು ಇಲಾಖೆಯು ರಷ್ಯಾದ ಸರ್ಕಾರಿ ಸ್ವಾಮ್ಯದ ಪ್ರಮುಖ ಉದ್ಯಮಗಳ ವಿರುದ್ಧ ಹೆಚ್ಚಿನ ನಿರ್ಬಂಧಗಳನ್ನು ಸಿದ್ಧಪಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT